ಚಾಂಪಿಯನ್ ಇಂಗ್ಲೆಂಡ್​ಗೆ ಸಿಕ್ಕಿದ್ದು 14 ಕೋಟಿ! ಸೇಮಿಸ್ ಸೋತ ಭಾರತದ ಖಜಾನೆಗೆ ಸೇರಿದ್ದೆಷ್ಟು..?

T20 World Cup Prize Money: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದವು. ಹೀಗಾಗಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 3.6 ಕೋಟಿ ರೂ. ಬಹುಮಾನ ನೀಡಲಾಗಿದೆ.

ಚಾಂಪಿಯನ್ ಇಂಗ್ಲೆಂಡ್​ಗೆ ಸಿಕ್ಕಿದ್ದು 14 ಕೋಟಿ! ಸೇಮಿಸ್ ಸೋತ ಭಾರತದ ಖಜಾನೆಗೆ ಸೇರಿದ್ದೆಷ್ಟು..?
ಚಾಂಪಿಯನ್ ಇಂಗ್ಲೆಂಡ್ ತಂಡ
Updated By: ಪೃಥ್ವಿಶಂಕರ

Updated on: Nov 13, 2022 | 6:53 PM

ಒಂದು ತಿಂಗಳ ಕಾಲ ನಡೆದ ಟಿ20 ವಿಶ್ವಕಪ್​ (T20 World Cup 2022) ಪಯಣ ಇದೀಗ ಅಂತ್ಯಗೊಂಡಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ 2022 ತನ್ನ ಹೊಸ ವಿಶ್ವ ಚಾಂಪಿಯನನ್ನು ಪಡೆದುಕೊಂಡಿದೆ. ಮಾಜಿ ವಿಶ್ವ ಚಾಂಪಿಯನ್ ಮತ್ತೊಮ್ಮೆ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನವೆಂಬರ್ 13 ರ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದರೊಂದಿಗೆ ತಂಡದ ಖಾತೆಗೆ ಕಪ್ ಜೊತೆಗೆ ಭಾರಿ ಮೊತ್ತದ ಬಹುಮಾನದ ಹಣವನ್ನು ಹಾಕಿಕೊಂಡಿದೆ.

ವಿಶ್ವಕಪ್‌ನ ವಿಜೇತ ಮತ್ತು ರನ್ನರ್‌ಅಪ್‌ ತಂಡಗಳಿಗೆ ಬಹುಮಾನವಾಗಿ ಐಸಿಸಿ ದೊಡ್ಡ ಮೊತ್ತವನ್ನು ನೀಡುತ್ತದೆ. ಮೇಲ್ನೋಟಕ್ಕೆ ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಫೈನಲ್‌ ಗೆದ್ದ ಇಂಗ್ಲೆಂಡ್​ ಖಾತೆಗೆ ಭಾರಿ ಮೊತ್ತವೇ ಬಹುಮಾನದ ರೂಪದಲ್ಲಿ ಬಂದು ಬಿದ್ದಿದೆ. ಹಾಗೆಯೇ ಇಂಗ್ಲೆಂಡ್ ಎದುರು ಸೋತ ಪಾಕಿಸ್ತಾನದ ಖಜಾನೆಯೂ ಭರ್ತಿಯಾಗಿದೆ. ಈ ಎರಡು ತಂಡಗಳನ್ನು ಹೊರತುಪಡಿಸಿ ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಇತರೆ ತಂಡಗಳು ಕೂಡ ಬರಿಗೈಯಲ್ಲಿ ವಾಪಸ್ಸಾಗಿಲ್ಲ.

ಬಹುಮಾನ ಮೊತ್ತದ ವಿಂಗಡಣೆ ಹೇಗೆ?

ಈ ಬಾರಿಯ ವಿಶ್ವಕಪ್‌ಗೆ ಐಸಿಸಿ ಒಟ್ಟು 45.68 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಿತ್ತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ 16 ತಂಡಗಳಿಗು ಈ ಬಹುಮಾನದ ಮೊತ್ತದಲ್ಲಿ ಭಾಗ ಸಿಕ್ಕಿದೆ. ಅಲ್ಲದೆ ಈ ಟೂರ್ನಿಯಲ್ಲಿ ಹೆಚ್ಚು ಪಂದ್ಯವನ್ನು ಗೆದ್ದ ತಂಡಕ್ಕೆ ಅಧಿಕ ಹಣ ಸಿಕ್ಕಿದೆ. ಅದರ ಪ್ರಕಾರ ಯಾರಿಗೆ ಎಷ್ಟು ಹಣ ಸಿಕ್ಕಿದೆ ಎಂಬುದರ ವಿವರ ಇಲ್ಲಿದೆ.

ಚಾಂಪಿಯನ್: ಇಂಗ್ಲೆಂಡ್

ವಿಶ್ವ ಚಾಂಪಿಯನ್ ಆದ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆದ್ದಿದ್ದಕ್ಕೆ ಸುಮಾರು 13.05 ಕೋಟಿ ರೂಗಳನ್ನು ಬಹುಮಾನದ ರೂಪದಲ್ಲಿ ಪಡೆದಿದೆ. ಇದಲ್ಲದೇ ಸೂಪರ್-12 ಸುತ್ತಿನ ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕವಾಗಿ 32.6 ಲಕ್ಷ ರೂ. ಬಹುಮಾನ ನೀಡಲಾಗಿದೆ. ಈ ಪ್ರಕಾರ ಸೂಪರ್ 12 ಸುತ್ತಿನಲ್ಲಿ ಇಂಗ್ಲೆಂಡ್ 3 ಪಂದ್ಯಗಳನ್ನು ಗೆದ್ದಿದ್ದು, ಒಟ್ಟು 97 ಲಕ್ಷಕ್ಕಿಂತ ಹೆಚ್ಚು ಹಣವನ್ನು ತನ್ನ ಖಜಾನೆಗೆ ಹಾಕಿಕೊಂಡಿದೆ. ಈ ಮೂಲಕ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸುಮಾರು 14 ಕೋಟಿ ರೂಪಾಯಿ ಬಹುಮಾನ ಸಿಕ್ಕಂತ್ತಾಗಿದೆ.

ರನ್ನರ್ ಅಪ್: ಪಾಕಿಸ್ತಾನ

ಟೂರ್ನಿಯ ರನ್ನರ್ ಅಪ್ ಆಗಿರುವ ಪಾಕಿಸ್ತಾನ ಸುಮಾರು 6.5 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಹಾಗೆಯೇ ಸೂಪರ್ 12 ಸುತ್ತಿನಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ತಂಡದ ಖಾತೆಗೆ ಹೆಚ್ಚುವರಿಯಾಗಿ 97 ಲಕ್ಷಕ್ಕೂ ಅಧಿಕ ಹಣ ಸೇರಲಿದೆ. ಎಲ್ಲಾ ಒಟ್ಟಾರೆಯಾಗಿ ಪಾಕಿಸ್ತಾನಕ್ಕೆ ಸುಮಾರು 7.5 ಕೋಟಿ ರೂ. ಬಹುಮಾನ ಸಿಕ್ಕಂತ್ತಾಗಿದೆ.

ಸೆಮಿಫೈನಲಿಸ್ಟ್‌ಗಳು: ಭಾರತ ಮತ್ತು ನ್ಯೂಜಿಲೆಂಡ್

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದವು. ಹೀಗಾಗಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ತಲಾ 3.6 ಕೋಟಿ ರೂ. ಬಹುಮಾನ ನೀಡಲಾಗಿದೆ. ಅಂದರೆ ಭಾರತ ತಂಡ 3.6 ಕೋಟಿ ರೂ. ಜೊತೆಗೆ ಸೂಪರ್-12 ಸುತ್ತಿನ ಗೆಲುವಿಗೂ ಬಹುಮಾನ ಪಡೆಯಲಿದೆ. ಭಾರತ ಕೂಡ ಸೂಪರ್ 12 ಸುತ್ತಿನಲ್ಲಿ 3 ಪಂದ್ಯಗಳನ್ನು ಗೆದ್ದಿರುವುದರಿಂದ ಅದಕ್ಕೂ 97 ಲಕ್ಷಕ್ಕೂ ಹೆಚ್ಚು ಹಣ ಬಹುಮಾನವಾಗಿ ಸಿಗಲಿದೆ. ಅಂದರೆ, ಭಾರತದ ಖಾತೆಗೆ ಸುಮಾರು 4.6 ಕೋಟಿ ರೂಪಾಯಿ ಬಂದು ಬಿದ್ದಂತ್ತಾಗಿದೆ. ನ್ಯೂಜಿಲೆಂಡ್ ಕೂಡ 3 ಪಂದ್ಯಗಳನ್ನು ಗೆದ್ದಿರುವುದರಿಂದ ಭಾರತದಷ್ಟೇ ಬಹುಮಾನದ ಮೊತ್ತವನ್ನು ಪಡೆಯಲಿದೆ.

ಸೂಪರ್-12

ಈ ಸುತ್ತಿನಲ್ಲಿ 8 ತಂಡಗಳು ಹೊರಬಿದ್ದಿದ್ದು, ಪ್ರತಿ ತಂಡಕ್ಕೆ ತಲಾ 57.08 ಲಕ್ಷ ರೂ. ಬಹುಮಾನ ನೀಡಲಾಗಿದೆ. ಇದಲ್ಲದೇ ಪ್ರತಿ ಗೆಲುವಿಗೆ 32.6 ಲಕ್ಷ ರೂ. ಹೆಚ್ಚುವರಿಯಾಗಿ ಪ್ರತಿ ತಂಡಗಳ ಖಾತೆಗೆ ಸೇರಲಿದೆ. ಅಂದರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಐರ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ಕೂಡ ಗಣನೀಯ ಮೊತ್ತದೊಂದಿಗೆ ತವರಿಗೆ ಮರಳಲಿವೆ.

ಮೊದಲ ಸುತ್ತು

ಈ ಸುತ್ತಿನಲ್ಲಿ 8 ತಂಡಗಳ ನಡುವೆ ಹಣಾಹಣಿ ನಡೆದಿದ್ದು, ಈ ಪೈಕಿ 4 ತಂಡಗಳು ಅರ್ಹತಾ ಸುತ್ತಿನಿಂದ ಹೊರಬಿದ್ದಿವೆ. ಎಲಿಮಿನೇಟ್ ಆದ ಪ್ರತಿ ತಂಡಕ್ಕೆ ಸುಮಾರು 32.50 ಲಕ್ಷ ರೂ. ಬಹುಮಾನ ನೀಡಲಾಗಿದೆ. ಇದಲ್ಲದೇ ಈ ಸುತ್ತಿನಲ್ಲಿ ಯಾವುದೇ ಪಂದ್ಯ ಗೆದ್ದರೂ ಆ ಗೆಲುವಿನ ಪ್ರಕಾರ ಹೆಚ್ಚುವರಿಯಾಗಿ 32.50 ಲಕ್ಷ ರೂ. ಅವರ ಖಾತೆಗೆ ಬೀಳಲಿದೆ. ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಯುಎಇ ಈ ಸುತ್ತಿನಲ್ಲಿ ಹೊರಬಿದ್ದಿದ್ದು, ಈ ತಂಡಗಳಿಗೂ ಬಹುಮಾನ ಸಿಕ್ಕಂತ್ತಾಗಿದೆ.

Published On - 6:49 pm, Sun, 13 November 22