ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ (T20 World Cup 2022) ಟೀಮ್ ಇಂಡಿಯಾವನ್ನು (Team India) ಇನ್ನೆರೆಡು ದಿನಗಳಲ್ಲಿ ಘೋಷಿಸಲಾಗುತ್ತದೆ. ಆದರೆ ಈ ತಂಡದಲ್ಲಿ ಏಷ್ಯಾಕಪ್ ಆಡಿದ ಬಹುತೇಕ ಆಟಗಾರರು ಇರಲಿದ್ದಾರೆ ಎಂದು ಈಗಾಗಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಇದಾಗ್ಯೂ ಬೌಲಿಂಗ್ ವಿಭಾಗದಲ್ಲಿ ಕೆಲ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಹೀಗಾಗಿಯೇ ಯುವ ವೇಗಿಯನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಮಾಜಿ ಆಟಗಾರ ಹರ್ಭಜನ್ ಸಿಂಗ್ ಸಲಹೆ ನೀಡಿದ್ದಾರೆ.
ಈ ಬಾರಿ ಟಿ20 ವಿಶ್ವಕಪ್ ನಡೆಯಲಿರುವುದು ಆಸ್ಟ್ರೇಲಿಯಾದಲ್ಲಿ. ಅಲ್ಲಿನ ಬೌನ್ಸಿ ಪಿಚ್‌ಗಳಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಉಮ್ರಾನ್ ಮಲಿಕ್ ಟ್ರಂಪ್ ಕಾರ್ಡ್ ಆಗಬಹುದು. ಹೀಗಾಗಿ ಆತನ ಆಯ್ಕೆಯನ್ನು ನಾನು ಎದುರು ನೋಡುತ್ತೇನೆ ಎಂಬಾರ್ಥದಲ್ಲಿ ಹರ್ಭಜನ್ ಸಿಂಗ್ ಟ್ಟೀಟ್ ಮಾಡಿದ್ದಾರೆ.
ಈ ಹಿಂದೆ ಕೂಡ ಏಷ್ಯಾಕಪ್ನಿಂದ ಯುವ ವೇಗಿ ಉಮ್ರಾನ್ ಮಲಿಕ್ ಅವರನ್ನು ಕೈ ಬಿಟ್ಟಿದಕ್ಕೆ ಹರ್ಭಜನ್ ಸಿಂಗ್ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದರು. ಇದೀಗ ಮತ್ತೊಮ್ಮೆ ಆಸೀಸ್ ನೆಲದಲ್ಲಿ ಉಮ್ರಾನ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಬಲ್ಲರು ಎಂಬ ವಿಶ್ವಾಸವನ್ನು ಭಜ್ಜಿ ವ್ಯಕ್ತಪಡಿಸಿದ್ದಾರೆ.
ಭಾರತ ಟಿ20 ತಂಡದಲ್ಲಿ ಮಿಸ್ಟರ್ 150 ಉಮ್ರಾನ್ ಮಲಿಕ್ ಅವರನ್ನು ನೋಡಲು ಯಾರು ಬಯಸುತ್ತಾರೆ? ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಲ್ಲಿ ನಮ್ಮ ಟ್ರಂಪ್ ಕಾರ್ಡ್ ಆಗಬಹುದು.. ಏನಾದರೂ ಆಲೋಚನೆಗಳಿವೆಯೇ? ಎಂದು ಪರೋಕ್ಷವಾಗಿ ಆಯ್ಕೆ ಸಮಿತಿಯನ್ನು ಹರ್ಭಜನ್ ಸಿಂಗ್ ಪ್ರಶ್ನಿಸಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ 14 ಪಂದ್ಯಗಳಲ್ಲಿ 22 ವಿಕೆಟ್ ಉರುಳಿಸಿ ಮಿಂಚಿದ್ದ ಉಮ್ರಾನ್ ಮಲಿಕ್, ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದರು. ಅದರಂತೆ ಮೂರು ಪಂದ್ಯಗಳನ್ನು ಆಡಿದ್ದ ಯುವ ವೇಗಿಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ಆದರೀಗ ಬೌನ್ಸಿ ಪಿಚ್ಗಳ ಸ್ವರ್ಗ ಎನಿಸಿಕೊಂಡಿರುವ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಯುವ ವೇಗಿಯನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.