T20 World Cup 2022: ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯಗಳು ರೋಚಕ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ. ಮೊದಲ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ತಂಡವನ್ನು ಮಣಿಸಿ ನಮೀಬಿಯಾ ತಂಡವು ಶುಭಾರಂಭ ಮಾಡಿತ್ತು. ಇದೀಗ 2 ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ (West Indies) ತಂಡಕ್ಕೆ ಸೋಲುಣಿಸಿ ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ (Scotland) ತಂಡವು ಪರಾಕ್ರಮ ಮೆರೆದಿದೆ. ಹೋಬಾರ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಸ್ಕಾಟ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆರಂಭಿಕ ಆಟಗಾರ ಮುನ್ಸೆ ಹಾಗೂ ಜಾನ್ಸ್ ಮೊದಲ ವಿಕೆಟ್ಗೆ 55 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಜಾನ್ಸ್ (20) ಹೋಲ್ಡರ್ ಎಸೆತದಲ್ಲಿ ಬೌಲ್ಡ್ ಆದರು.
ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಮುನ್ಸೆ ಅರ್ಧಶತಕ ಪೂರೈಸಿದರು. 86 ರನ್ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಸ್ಕಾಟ್ಲೆಂಡ್ ತಂಡವು ದ್ವಿತಿಯಾರ್ಧದ 10 ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಅಂತಿಮ ಹಂತದಲ್ಲಿ ಕಣಕ್ಕಿಳಿದ ಮೆಕ್ಲಾಯ್ಡ್ 14 ಎಸೆತಗಳಲ್ಲಿ 23 ರನ್ ಬಾರಿಸುವ ಮೂಲಕ ರನ್ ಗತಿ ಹೆಚ್ಚಿಸಿದರು.
ಮತ್ತೊಂದೆಡೆ ಮುನ್ಸೆ 53 ಎಸೆತಗಳಲ್ಲಿ 9 ಫೋರ್ನೊಂದಿಗೆ ಅಜೇಯ 66 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ಕ್ಕೆ ತಂದು ನಿಲ್ಲಿಸಿದರು.
161 ರನ್ಗಳ ಸ್ಪರ್ಧಾತ್ಮಕ ಸವಾಲು ಪಡೆದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರರಾದ ಕೈಲ್ ಮೇಯರ್ಸ್ (20), ಎವಿನ್ ಲೂಯಿಸ್ (14) ಬೇಗನೆ ನಿರ್ಮಿಸಿದರು. ಇದರ ಬೆನ್ನಲ್ಲೇ ಬ್ರೆಂಡನ್ ಕಿಂಗ್ (17) ಕೂಡ ಮಾರ್ಕ್ ವ್ಯಾಟ್ ಎಸೆತದಲ್ಲಿ ಬೌಲ್ಡ್ ಆದರು.
ಇನ್ನು ನಾಯಕ ನಿಕೋಲಸ್ ಪೂರನ್ 4 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರೆ, ಶಮ್ರಾ ಬ್ರೂಕ್ಸ್ (4) ಕೂಡ ನಾಯಕನನ್ನು ಹಿಂಬಾಲಿಸಿದರು. ಹಾಗೆಯೇ ಸ್ಪೋಟಕ ದಾಂಡಿಗ ರೋವ್ಮನ್ ಪೊವೆಲ್ 5 ರನ್ಗಳಿಸಿದ್ದ ವೇಳೆ ಲೀಸ್ಕ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಜೇಸನ್ ಹೋಲ್ಡರ್ 38 ರನ್ ಬಾರಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಪರಿಣಾಮ 18.3 ಓವರ್ಗಳಲ್ಲಿ ಸರ್ವಪತನ ಕಾಣುವ ಮೂಲಕ 42 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿತು. ಸ್ಕಾಟ್ಲೆಂಡ್ ಪರ ಮಾರ್ಕ್ ವ್ಯಾಟ್ 3 ವಿಕೆಟ್ ಪಡೆದರೆ, ಲೀಸ್ಕ್, ಬ್ರಾಡ್ ವೀಲ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಈ ಭರ್ಜರಿ ಗೆಲುವಿನೊಂದಿಗೆ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿರುವ ಸ್ಕಾಟ್ಲೆಂಡ್ ತಂಡವು ಸೂಪರ್-12 ಪ್ರವೇಶಿಸುವ ವಿಶ್ವಾಸದಲ್ಲಿದೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್ , ಎವಿನ್ ಲೂಯಿಸ್ , ಬ್ರಾಂಡನ್ ಕಿಂಗ್ , ಶಮರ್ ಬ್ರೂಕ್ಸ್ , ನಿಕೋಲಸ್ ಪೂರನ್ (ನಾಯಕ) , ರೋವ್ಮನ್ ಪೊವೆಲ್ , ಜೇಸನ್ ಹೋಲ್ಡರ್ , ಓಡಿಯನ್ ಸ್ಮಿತ್ , ಅಕೇಲ್ ಹೋಸೇನ್ , ಅಲ್ಜಾರಿ ಜೋಸೆಫ್ , ಒಬೆಡ್ ಮೆಕಾಯ್
ಸ್ಕಾಟ್ಲೆಂಡ್ ಪ್ಲೇಯಿಂಗ್ 11: ಜಾರ್ಜ್ ಮುನ್ಸೆ , ಮೈಕೆಲ್ ಜೋನ್ಸ್ , ಮ್ಯಾಥ್ಯೂ ಕ್ರಾಸ್ , ರಿಚಿ ಬೆರಿಂಗ್ಟನ್ (ನಾಯಕ) , ಕ್ಯಾಲಮ್ ಮ್ಯಾಕ್ಲಿಯೋಡ್ , ಕ್ರಿಸ್ ಗ್ರೀವ್ಸ್ , ಮೈಕೆಲ್ ಲೀಸ್ಕ್ , ಮಾರ್ಕ್ ವ್ಯಾಟ್ , ಜೋಶ್ ಡೇವಿ , ಸಫ್ಯಾನ್ ಷರೀಫ್ , ಬ್ರಾಡ್ ವೀಲ್