T20 World Cup 2022: w,w,w,w.. ಕೊನೆಯ ಓವರ್​ನಲ್ಲಿ ಶಮಿ ಮ್ಯಾಜಿಕ್! ಆಸೀಸ್ ವಿರುದ್ಧ ಗೆದ್ದ ಟೀಂ ಇಂಡಿಯಾ

| Updated By: ಪೃಥ್ವಿಶಂಕರ

Updated on: Oct 17, 2022 | 1:37 PM

T20 World Cup 2022: ಕೊನೆಯ ಓವರ್ ಎಸೆದ ಮೊಹಮ್ಮದ್ ಶಮಿ ಟೀಂ ಇಂಡಿಯಾ ಗೆಲುವಿನ ಹೀರೋ ಎನಿಸಿಕೊಂಡರು. ಕೊನೆಯ ಓವರ್ ಎಸೆದ ಶಮಿ, ಕೊನೆಯ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರು.

T20 World Cup 2022: w,w,w,w.. ಕೊನೆಯ ಓವರ್​ನಲ್ಲಿ ಶಮಿ ಮ್ಯಾಜಿಕ್! ಆಸೀಸ್ ವಿರುದ್ಧ ಗೆದ್ದ ಟೀಂ ಇಂಡಿಯಾ
ಟೀಂ ಇಂಡಿಯಾ
Follow us on

ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ (T20 World Cup 2022) ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಕೊನೆಯ ಓವರ್ ಎಸೆದ ಮೊಹಮ್ಮದ್ ಶಮಿ (Mohammed Shami) ಟೀಂ ಇಂಡಿಯಾ ಗೆಲುವಿನ ಹೀರೋ ಎನಿಸಿಕೊಂಡರು. ಕೊನೆಯ ಓವರ್ ಎಸೆದ ಶಮಿ, ಕೊನೆಯ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರು. ಟೀಂ ಇಂಡಿಯಾ ಪರ ಉಪನಾಯಕ ರಾಹುಲ್ (KL Rahul) ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಿತ ಅರ್ಧಶತಕ ಸಿಡಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಕೂಡ ಅಬ್ಬರದ ಅರ್ಧಶತಕ ಸಿಡಿಸಿದರು. ಈ ಇಬ್ಬರ ಇನ್ನಿಂಗ್ಸ್​ನಿಂದಾಗಿ ಟೀಂ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೆ ಶಕ್ತವಾಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಹಾಗೂ ರಾಹುಲ್ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಈ ಇಬ್ಬರು ಸೇರಿ ಪವರ್​ ಪ್ಲೇನಲ್ಲಿ ಟೀಂ ಇಂಡಿಯಾದ ಮೊತ್ತವನ್ನು 70 ರನ್ ಗಡಿ ದಾಟಿಸಿದ್ದರು. ಈ ಇಬ್ಬರ ಜೊತೆಯಾಟದಲ್ಲಿ ಪ್ರಮುಖವಾಗಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಾಹುಲ್ ಕೇವಲ 33 ಎಸೆತಗಳಲ್ಲಿ 57 ರನ್ ಚಚ್ಚಿದರು. ಆದರೆ ನಾಯಕ ರೋಹಿತ್ ಶರ್ಮಾ ಮಾತ್ರ 14 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: T20 World Cup 2022: ಆಸೀಸ್ ವಿರುದ್ಧ ಅಬ್ಬರದ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್..!

ರೋಹಿತ್ ವಿಕೆಟ್ ಬಳಿಕ ಬಂದ ಕೊಹ್ಲಿ ಕೂಡ 19 ರನ್​ಗಳ ಇನ್ನಿಂಗ್ಸ್ ಆಡಿದರು. ಈ ವೇಳೆ ಅರ್ದಶತಕ ಸಿಡಿಸಿ ರಾಹುಲ್ ಮ್ಯಾಕ್ಸ್​ವೆಲ್​ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಬಳಿಕ ಬಂದ ಸೂರ್ಯಕುಮಾರ್ ತನ್ನ ಎಂದಿನ ಫಾರ್ಮ್​ ಮುಂದುವರೆಸಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 50 ರನ್ ಚಚ್ಚಿದರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಕೂಡ 20 ರನ್​ಗಳ ಇನ್ನಿಂಗ್ಸ್ ಆಡಿದರು. ಈ ನಾಲ್ವರ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾ 187 ರನ್​ಗಳ ಟಾರ್ಗೆಟ್ ಸೆಟ್ ಮಾಡಿತು. ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 4 ವಿಕೆಟ್ ಪಡೆದರು.

ಕೊನೆಯ ಹಂತದಲ್ಲಿ ಮುಗ್ಗರಿಸಿದ ಆಸ್ಟ್ರೇಲಿಯ

ಭಾರತ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಅದ್ಭುತ ಆರಂಭ ಮಾಡಿತು. ಫಿಂಚ್ ಹಾಗೂ ಮಾರ್ಷ್​ ಕೇವಲ 5 ಓವರ್​ಗಳಲ್ಲಿ ತಂಡದ ಮೊತ್ತವನ್ನು 60 ರನ್​ಗಳ ಗಡಿ ದಾಟಿಸಿದರು. ಈ ವೇಳೆ 35 ರನ್ ಗಳಿಸಿದ್ದ ಮಾರ್ಷ್​ ಭುವಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಬಂದ ಸ್ಟೀವ್ ಸ್ಮಿತ್ 11 ರನ್​ಗಳಿಗೆ ಸುಸ್ತಾದರೆ, ಮ್ಯಾಕ್ಸ್​ವೆಲ್ ಕೂಡ 23 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆದರೆ ನಾಯಕ ಫಿಂಚ್ ಮಾತ್ರ ತಮ್ಮ ಎಂದಿನ ಬಿರುಸಿನ ಬ್ಯಾಟಿಂಗ್ ಮುಂದುವರೆಸಿ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 76 ರನ್​ ಚಚ್ಚಿದರು. ಆದರೆ ಉಳಿದಂತೆ ಬಂದ ಯಾವ ಬ್ಯಾಟರ್​ಗಳು ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಇದರಿಂದ ಕೊನೆಯ ಹಂತದವರೆಗೂ ಗೆಲುವಿನ ಟ್ರ್ಯಾಕ್​ನಲ್ಲಿದ ಆಸೀಸ್ ಪಡೆ, ಕೊನೆಯ ಹಂತದಲ್ಲಿ ಮುಗ್ಗರಿಸಿತು.

ಮತ್ತೆ ಬೌಲಿಂಗ್ ವೈಫಲ್ಯ

ಅಂತಿಮ ಓವರ್​ನಲ್ಲಿ ಶಮಿ ಮ್ಯಾಜಿಕ್ ಮಾಡಿದ್ದು ಬಿಟ್ಟರೆ, ಈ ಪಂದ್ಯದಲ್ಲೂ ಟೀಂ ಇಂಡಿಯಾ ಬೌಲರ್​ಗಳು ತುಂಬಾ ದುಬಾರಿಯಾದರು. ರೋಹಿತ್ ಪಡೆಯ ಬೌಲಿಂಗ್ ಮುಂದೆ ಆಸೀಸ್ ಬ್ಯಾಟರ್​ಗಳು ನಿರಾತಂಕವಾಗಿ ರನ್ ಕಲೆಹಾಕಿದರು. ಅದರಲ್ಲೂ 3 ಓವರ್ ಬೌಲ್ ಮಾಡಿದ ಅರ್ಷದೀಪ್ 12 ರ ಸರಾಸರಿಯಲ್ಲಿ 34 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಉಳಿದಂತೆ ಭುವಿ 3 ಓವರ್​ನಲ್ಲಿ 2 ವಿಕೆಟ್ ಪಡೆದು 20 ರನ್ ಬಿಟ್ಟುಕೊಟ್ಟರೆ, ಚಾಹಲ್ ಹಾಗೂ ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

ಶಮಿ ಕೊನೆಯ ಓವರ್ ಮ್ಯಾಜಿಕ್

ಈ ಪಂದ್ಯದಲ್ಲಿ ಆಡುವ 11ನಲ್ಲಿ ಸ್ಥಾನ ಪಡೆಯದಿದ್ದರೂ ಕೊನೆಯ ಓವರ್ ಬೌಲ್ ಮಾಡಿದ ಶಮಿ, ಆಸೀಸ್ ಗೆಲುವಿಗೆ ವಿಲನ್ ಆದರು. ಕೊನೆಯ ಓವರ್​ನಲ್ಲಿ ಆಸೀಸ್​ಗೆ 11 ರನ್​ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್​ಗೆ ಬಂದ ಶಮಿ ಮೊದಲ ಎರಡು ಎಸೆತಗಳಲ್ಲಿ 4 ರನ್ ಬಿಟ್ಟುಕೊಟ್ಟರು. ಅನಂತರ ಉಳಿದ 4 ಎಸೆತಗಳಲ್ಲಿ ಆಸೀಸ್ ಪಾಳಯದ 4 ಬ್ಯಾಟರ್​ಗಳನ್ನು ಬಲಿ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Mon, 17 October 22