ಟಿ20 ವಿಶ್ವಕಪ್ನಲ್ಲಿ (T20 World Cup 2022) ಪಾಕ್ ತಂಡವನ್ನು ಮಣಿಸಿದ ಜಿಂಬಾಬ್ವೆ (Zimbabwe) ತಂಡದ ಬಗ್ಗೆ ಈಗ ಎಲ್ಲೆಡೆ ಟಾಕ್ ಶುರುವಾಗಿದೆ. ಅಲ್ಲದೆ ಈ ಎರಡು ದೇಶಗಳ ಪ್ರಧಾನಿಗಳ ಟ್ವಿಟರ್ ವಾರ್ ಆರಂಭವಾದಾಗಿನಿಂದ ಈ ಉಭಯ ತಂಡಗಳ ನಡುವಿನ ಪಂದ್ಯದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ನಡುವೆ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿ ಅವರನ್ನು ಟಿ20 ವಿಶ್ವಕಪ್ನಿಂದ ಭಾಗಶಃ ಹೊರಗಿಟ್ಟಿರುವ ಜಿಂಬಾಬ್ವೆ ತಂಡ, ತಂಡದ ಆಟಗಾರರು, ಅವರ ಸಂಬಳದ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಹೀಗಾಗಿ ಗೂಗಲ್ನಲ್ಲಿ ಜಿಂಬಾಬ್ವೆ ಕ್ರಿಕೆಟಿಗರ ಸಂಬಳದ ಬಗ್ಗೆ ಸರ್ಚಿಂಗ್ ಮಾಡಿದ ನೆಟ್ಟಿಗರು ಈ ತಂಡದ ಆಟಗಾರರಿಗೆ ಸಿಗುತ್ತಿರುವ ವೇತನವನ್ನು ಕಂಡು ಹೌಹಾರಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟಿಗರ ಮೇಲೆ ಸಾಕಷ್ಟು ಹಣದ ಮಳೆ ಸುರಿಯುತ್ತದೆ. ಅದರಲ್ಲೂ ಬಲಿಷ್ಠ ತಂಡಗಳೆನಿಸಿಕೊಂಡಿರುವ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರಿಗೆ ಸಿಗುತ್ತಿರುವ ಸಂಬಳ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಆದರೆ ಇನ್ನೊಂದೆಡೆ ಇತರೆ ಕ್ರಿಕೆಟ್ ಆಡುವ ದೇಶಗಳ ಆಟಗಾರರ ಸಂಬಳದ ವಿವರ ಕಂಡರೆ ಅರೇ, ಕೇವಲ ಇಷ್ಟಾ ಎಂದು ಬಾಯಿ ಮೇಲೆ ಬೆರಳಿಡಬೇಕಾಗುತ್ತದೆ.
ನಿನ್ನೆಯಷ್ಟೆ ಕ್ರಿಕೆಟ್ನ ಬಿಗ್ಬಾಸ್ ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಸಮಾನ ಪಂದ್ಯ ಶುಲ್ಕ ನೀಡುವುದಾಗಿ ಘೋಷಣೆ ಮಾಡಿದೆ. ಇದರಿಂದ ಟೀಂ ಇಂಡಿಯಾ ಮಹಿಳಾ ಆಟಗಾರ್ತಿಯರು, ಕೊಹ್ಲಿ- ರೋಹಿತ್ ಪಡೆಯುವ ಪಂದ್ಯ ಶುಲ್ಕವನ್ನೇ ತಾವು ಪಡೆಯಲ್ಲಿದ್ದಾರೆ. ಇದರಿಂದ ಆಟಗಾರ್ತಿಯರ ಖಾತೆಗೆ ಲಕ್ಷ ಲಕ್ಷ ಹಣದ ಮಳೆಯೇ ಹರಿಯಲಿದೆ. ಆದರೆ ಇನ್ನು ಕೆಲವು ದೇಶಗಳ ಪುರುಷ ಕ್ರಿಕೆಟಿಗರ ಸಂಬಳ ಭಾರತದ ವನಿತಾ ಕ್ರಿಕೆಟಿಗರ ಸಂಬಳಕ್ಕಿಂತ ಕಡಿಮೆ ಇದೆ.
ಇದನ್ನೂ ಓದಿ:ಬಾಬರ್ ಅಜಮ್ ಸರ್ವಾಧಿಕಾರಿ ಧೋರಣೆ ಪಾಕ್ ತಂಡದ ಈ ದುಸ್ಥಿತಿಗೆ ಕಾರಣವಾಯ್ತಾ?
ಇದಕ್ಕೆ ತಾಜಾ ಉದಾಹರಣೆಯಾಗಿ ಜಿಂಬಾಬ್ವೆ ತಂಡ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ವಿಶ್ವದ ಬಲಿಷ್ಠ ತಂಡಕ್ಕೆ ಮಣ್ಣು ಮುಕ್ಕಿಸಿರುವ ಈ ತಂಡದ ಆಟಗಾರರ ನೋವಿನ ಕತೆ ಅಷ್ಟಿಷ್ಟಲ್ಲ. ಜಿಂಬಾಬ್ವೆ ಆಟಗಾರರು ಇತರ ಕ್ರಿಕೆಟಿಗರಂತೆ ಕೋಟಿ ಗಳಿಸುವುದಿಲ್ಲ, ದೊಡ್ಡ ಮನೆಗಳಾಗಲೀ, ದೊಡ್ಡ ಕಾರುಗಳಾಗಲಿ ಇವರ ಬಳಿ ಇಲ್ಲ. ವಾಸ್ತವವಾಗಿ ಇವರ ಸಂಬಳ ಕೇಳಿದರೆ ನಿಮಗೆ ಶಾಕ್ ಆಗುವುದು ಖಚಿತ.
ಜಿಂಬಾಬ್ವೆ ಆಟಗಾರರ ಸಂಬಳ
ಸ್ಟ್ಯಾಂಡರ್ಡ್ ಪತ್ರಿಕೆಯ ಸುದ್ದಿ ಪ್ರಕಾರ, ಜಿಂಬಾಬ್ವೆಯ ಆಟಗಾರರನ್ನು ನಾಲ್ಕು ಗ್ರೇಡ್‌ಗಳಾಗಿ ವಿಂಗಡಿಸಲಾಗಿದೆ. ಮೊದಲ ದರ್ಜೆಯ X ನ ಅಗ್ರಮಾನ್ಯ ಆಟಗಾರರು ಪ್ರತಿ ತಿಂಗಳು 5 ಸಾವಿರ ಯುಎಸ್ ಡಾಲರ್ (3.20 ಲಕ್ಷ ರೂ.) ಪಡೆಯುತ್ತಾರೆ. ಅದೇ ಸಮಯದಲ್ಲಿ, ಗ್ರೇಡ್ ಎ ಆಟಗಾರರು ತಿಂಗಳಿಗೆ 3500 ಯುಎಸ್ ಡಾಲರ್ (ರೂ. 2.80 ಲಕ್ಷ) ಗಳಿಸುತ್ತಾರೆ. ಬಿ ಗ್ರೇಡ್ ಆಟಗಾರರು ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಸಿ ಗ್ರೇಡ್ ಆಟಗಾರರು ತಿಂಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಸಂಬಳದ ರೂಪದಲ್ಲಿ ಪಡೆಯುತ್ತಾರೆ.
Zimbabwe players dancing & singing after the win against Pakistan in World Cup.pic.twitter.com/8eKs4TyQBQ
— Johns. (@CricCrazyJohns) October 28, 2022
ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಹಣವಿಲ್ಲ
ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ನಾವು ಹೆಚ್ಚು ವಿವರಿಸುವ ಅವಶ್ಯಕತೆ ಇಲ್ಲ. ಹಲವು ವರ್ಷಗಳಿಂದ ಈ ಮಂಡಳಿಯ ಸ್ಥಿತಿ ಹದಗೆಟ್ಟಿದೆ. ಜಿಂಬಾಬ್ವೆ ಮಂಡಳಿಗೆ ಹೆಚ್ಚಿನ ಪಾಲಿನ ಹಣ ಐಸಿಸಿಯಿಂದ ಬರುತ್ತದೆ. ಜಿಂಬಾಬ್ವೆಯ ನ್ಯಾಷನಲ್ ಪ್ರೀಮಿಯರ್ ಲೀಗ್‌ನಲ್ಲಿ ಗೆಲ್ಲುವ ತಂಡವು ಐಪಿಎಲ್ ಆಟಗಾರನ ಮೂಲ ಬೆಲೆಗಿಂತ ಅರ್ಧಕ್ಕಿಂತ ಕಡಿಮೆ ಸಂಭಾವನೆಯನ್ನು ಪಡೆಯುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಜಿಂಬಾಬ್ವೆಯ ನ್ಯಾಷನಲ್ ಪ್ರೀಮಿಯರ್ ಲೀಗ್‌ನಲ್ಲಿ ಗೆದ್ದ ತಂಡಕ್ಕೆ 8.50 ಲಕ್ಷ ರೂ.ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಆದರೆ ಐಪಿಎಲ್‌ನ ಹರಾಜಿನಲ್ಲಿ ಪಾಲ್ಗೋಳ್ಳುವ ಆಟಗಾರನ ಮೂಲ ಬೆಲೆಯೇ 20 ಲಕ್ಷ ರೂ. ಆಗಿದೆ. ಇತರ ಕ್ರಿಕೆಟಿಗರಂತೆ ಜಿಂಬಾಬ್ವೆ ಆಟಗಾರರಿಗೆ ಹೆಚ್ಚಿನ ಸಂಬಳ ಸಿಗುವುದಿಲ್ಲ. ಆದರೂ ಸಹ ಈ ಆಟಗಾರರು ಗೆಲುವಿಗಾಗಿ ಹೋರಾಡಿದ ರೀತಿ ಯಾರು ಮರೆಯುವಂತಹದಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ