T20 World Cup 2024: ಟಿ20 ವಿಶ್ವಕಪ್ನ 35ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಕಾಟ್ಲೆಂಡ್ ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ನಿಂದ ಹೊರಬಿದ್ದರೆ, ಅತ್ತ ಇಂಗ್ಲೆಂಡ್ ತಂಡವು ಸೂಪರ್-8 ಹಂತಕ್ಕೇರಿದೆ. ಇದಕ್ಕೂ ಮುನ್ನ ಸೆಂಟ್ ಲೂಸಿಯಾದ ಡಾರೆನ್ ಸ್ಯಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ಆಟಗಾತ ಜಾರ್ಜ್ ಮುನ್ಸಿ 23 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 35 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರಾಂಡನ್ ಮೆಕ್‌ಮುಲ್ಲೆನ್ ಅಕ್ಷರಶಃ ಅಬ್ಬರಿಸಿದರು. ಆಸೀಸ್ ಬೌಲರ್ಗಳ ಬೆಂಡೆತ್ತಿದ ಮೆಕ್‌ಮುಲ್ಲೆನ್ 34 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 60 ರನ್ ಚಚ್ಚಿದರು. ಹಾಗೆಯೇ ನಾಯಕ ಬೆರಿಂಗ್ಟನ್ ಅಜೇಯ 42 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಸ್ಕಾಟ್ಲೆಂಡ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು.
181 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಬಿರುಸಿನ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೇವಲ 1 ರನ್ಗಳಿಸಿ 2ನೇ ಓವರ್ನಲ್ಲಿ ವೀಲ್ಗೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ಮಿಚೆಲ್ ಮಾರ್ಷ್ ಇನಿಂಗ್ಸ್ ಕೇವಲ 8 ರನ್ಗಳಿಗೆ ಸೀಮಿತವಾಯಿತು.
ಇನ್ನು ಗ್ಲೆನ್ ಮ್ಯಾಕ್ಸ್ವೆಲ್ 11 ರನ್ಗಳಿಸಿದ್ದ ವೇಳೆ ಮಾರ್ಕ್ ವ್ಯಾಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅರ್ಧಶತಕ ಪೂರೈಸಲು ಬರೋಬ್ಬರಿ 45 ಎಸೆತಗಳನ್ನು ತೆಗೆದುಕೊಂಡಿದ್ದರು. ಈ ಹಂತದಲ್ಲಿ ಜೊತೆಗೂಡಿದ ಹೆಡ್ ಹಾಗೂ ಸ್ಟೋಯಿನಿಸ್ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು.
ಪರಿಣಾಮ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ 5 ಓವರ್ಗಳಲ್ಲಿ 60 ರನ್ಗಳ ಅವಶ್ಯಕತೆಯಿತ್ತು. 16ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಟ್ರಾವಿಸ್ ಹೆಡ್ (68) ಔಟಾದರು. ಇದಾಗ್ಯೂ ಮತ್ತೊಂದೆಡೆ ಏಕಾಂಗಿ ಹೋರಾಟ ಮುಂದುವರೆಸಿದ ಮಾರ್ಕಸ್ ಸ್ಟೋಯಿನಿಸ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಸ್ಟೋಯಿನಿಸ್ (59) ಕ್ಲೀನ್ ಬೌಲ್ಡ್ ಆದರು.
ಕೊನೆಯ ಮೂರು ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 26 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸಿದ ಟಿಮ್ ಡೇವಿಡ್ ಹಾಗೂ ಮ್ಯಾಥ್ಯೂ ವೇಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಮೂಲಕ 19.4 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡ 181 ರನ್ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಆಸ್ಟ್ರೇಲಿಯಾ ತಂಡದ ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ದ್ವಿತೀಯ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಒಂದು ವೇಳೆ ಈ ಮ್ಯಾಚ್ನಲ್ಲಿ ಸ್ಕಾಟ್ಲೆಂಡ್ ಗೆದ್ದಿದ್ದರೆ ಸೂಪರ್-8 ಹಂತಕ್ಕೇರಲು ಅವಕಾಶವಿತ್ತು. ಆದರೆ ಆಸೀಸ್ ದಾಂಡಿಗರ ಭರ್ಜರಿ ಪ್ರದರ್ಶನದೊಂದಿಗೆ ಸ್ಕಾಟ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ (ನಾಯಕ) , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಟಿಮ್ ಡೇವಿಡ್ , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ನಾಥನ್ ಎಲ್ಲಿಸ್ , ಆಡಮ್ ಝಂಪಾ , ಆಷ್ಟನ್ ಅಗರ್.
ಇದನ್ನೂ ಓದಿ: Tim Southee: 24 ಎಸೆತಗಳಲ್ಲಿ ಹೊಸ ಇತಿಹಾಸ ನಿರ್ನಿಸಿದ ಟಿಮ್ ಸೌಥಿ
ಸ್ಕಾಟ್ಲೆಂಡ್ ಪ್ಲೇಯಿಂಗ್ 11: ಜಾರ್ಜ್ ಮುನ್ಸಿ , ಮೈಕೆಲ್ ಜೋನ್ಸ್ , ಬ್ರಾಂಡನ್ ಮೆಕ್‌ಮುಲ್ಲೆನ್ , ರಿಚಿ ಬೆರಿಂಗ್ಟನ್ (ನಾಯಕ) , ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್) , ಮೈಕೆಲ್ ಲೀಸ್ಕ್ , ಕ್ರಿಸ್ ಗ್ರೀವ್ಸ್ , ಮಾರ್ಕ್ ವ್ಯಾಟ್ , ಕ್ರಿಸ್ಟೋಫರ್ ಸೋಲ್ , ಬ್ರಾಡ್ ವೀಲ್ , ಸಫ್ಯಾನ್ ಷರೀಫ್.
Published On - 9:21 am, Sun, 16 June 24