T20 World Cup 2024: ಸೆಮಿಫೈನಲ್‌ ಪಂದ್ಯಗಳಿಗೆ ಅಂಪೈರ್​​ಗಳು ನೇಮಕ; ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ ಫ್ಯಾನ್ಸ್

|

Updated on: Jun 26, 2024 | 5:30 PM

T20 World Cup 2024: 2024 ರ ಟಿ20 ವಿಶ್ವಕಪ್‌ನ ಎರಡೂ ಸೆಮಿಫೈನಲ್ ಪಂದ್ಯಗಳು ಜೂನ್ 27 ರಂದು ನಡೆಯಲಿದೆ. ಈ ಎರಡು ಸೆಮಿಫೈನಲ್‌ ಪಂದ್ಯಗಳಿಗೆ ಅಂಪೈರ್​ಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದ ಆ ಇಬ್ಬರು ಅಂಪೈರ್​ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಟೀಂ ಇಂಡಿಯಾ ಪಂದ್ಯಕ್ಕೆ ಅಂಪೈರ್ ಆಗಿರುವುದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

T20 World Cup 2024: ಸೆಮಿಫೈನಲ್‌ ಪಂದ್ಯಗಳಿಗೆ ಅಂಪೈರ್​​ಗಳು ನೇಮಕ; ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ ಫ್ಯಾನ್ಸ್
ಟೀಂ ಇಂಡಿಯಾ ಹಾಗೂ ಅಂಪೈರ್ಸ್​ (ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕೆಟಲ್‌ಬರೋ)
Follow us on

2024ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಹಾಗೂ ಅದರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಪ್ರತಿ ಐಸಿಸಿ ಈವೆಂಟ್​ನ ಪ್ರಮುಖ ಪಂದ್ಯಗಳಲ್ಲಿ ಟೀಂ ಇಂಡಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗುತ್ತಿದ್ದ ಆ ಇಬ್ಬರು ಅಂಪೈರ್​​ಗಳು ನಾಳಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸಮಾಧಾನಕರ ಸುದ್ದಿ ಹೊರಬಿದ್ದಿದೆ. ವಾಸ್ತವವಾಗಿ ನಾಳೆ ನಡೆಯಲ್ಲಿರುವ ಎರಡು ಸೆಮಿಫೈನಲ್‌ ಪಂದ್ಯಗಳಿಗೆ ಅಂಪೈರ್​ಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಈ ಪಟ್ಟಿಯಲ್ಲಿ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದ ಆ ಇಬ್ಬರು ಅಂಪೈರ್​ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಟೀಂ ಇಂಡಿಯಾ ಪಂದ್ಯಕ್ಕೆ ಅಂಪೈರ್ ಆಗಿರುವುದಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ.

2024 ರ ಟಿ20 ವಿಶ್ವಕಪ್‌ನ ಎರಡೂ ಸೆಮಿಫೈನಲ್ ಪಂದ್ಯಗಳು ಜೂನ್ 27 ರಂದು ನಡೆಯಲಿದೆ. ಮೊದಲ ಪಂದ್ಯ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದ್ದು, ಟ್ರಿನಿಡಾಡ್‌ನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಪಂದ್ಯ ಆರಂಭವಾಗಲಿದೆ. ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದ್ದು, ಈ ಪಂದ್ಯ ಗಯಾನಾದಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

T20 World Cup 2024: ಸೆಮಿಫೈನಲ್‌ ಪಂದ್ಯಗಳು ಮಳೆಯಿಂದ ರದ್ದಾದರೆ ಯಾವ 2 ತಂಡಗಳು ಫೈನಲ್​ಗೇರಲಿವೆ ಗೊತ್ತಾ?

ಮೊದಲ ಸೆಮಿಫೈನಲ್ ಪಂದ್ಯಕ್ಕೆ ಯಾರ್ಯಾರು?

ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಐಸಿಸಿ, ರಿಚಿ ರಿಚರ್ಡ್ಸನ್ ಅವರನ್ನು ಪಂದ್ಯದ ರೆಫರಿಯಾಗಿ ನೇಮಿಸಿದೆ. ನಿತಿನ್ ಮೆನನ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಫೀಲ್ಡ್ ಅಂಪೈರ್‌ಗಳಾಗಿ ಆಯ್ಕೆಯಾಗಿದ್ದಾರೆ. ರಿಚರ್ಡ್ ಕೆಟಲ್‌ಬರೋ ಟಿವಿ ಅಂಪೈರ್ ಆಗಿರುತ್ತಾರೆ. ಹಾಗೆಯೇ ನಾಲ್ಕನೇ ಅಂಪೈರ್ ಆಗಿ ಎಹ್ಸಾನ್ ರಜಾ ಅವರು ಆಯ್ಕೆಯಾಗಿದ್ದಾರೆ.

2ನೇ ಸೆಮಿಫೈನಲ್ ಪಂದ್ಯಕ್ಕೆ ಅಂಪೈರ್‌ಗಳ ಪಟ್ಟಿ

ಇನ್ನು ನಾವು ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಬಗ್ಗೆ ಮಾತನಾಡಿದರೆ, ಜೆಫ್ರಿ ಕ್ರೋವ್ ಮ್ಯಾಚ್ ರೆಫರಿಯಾಗಿರುತ್ತಾರೆ. ಫೀಲ್ಡ್ ಅಂಪೈರ್‌ಗಳ ಪಾತ್ರದಲ್ಲಿ ರಾಡ್ನಿ ಟಕರ್ ಮತ್ತು ಕ್ರಿಸ್ ಜಾಫ್ನಿ ಕಾಣಿಸಿಕೊಳ್ಳಲಿದ್ದಾರೆ. ಈ ಪಂದ್ಯದ ಟಿವಿ ಅಂಪೈರ್ ಆಗಿ ಜೋಯಲ್ ವಿಲ್ಸನ್ ಮತ್ತು ನಾಲ್ಕನೇ ಅಂಪೈರ್ ಆಗಿ ಪಾಲ್ ರೈಫೆಲ್ ಅವರನ್ನು ನೇಮಿಸಲಾಗಿದೆ.

ಈ ಇಬ್ಬರು ಭಾರತದ ಪಂದ್ಯಕ್ಕಿಲ್ಲ

ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್, ಆ ಇಬ್ಬರೂ ಅಂಪೈರ್‌ಗಳು ಭಾರತದ ಮ್ಯಾಚ್‌ನಲ್ಲಿ ಇಲ್ಲದಿರುವುದು ಅಭಿಮಾನಿಗಳಿಗೆ ಸಮಾಧಾನದ ವಿಷಯವಾಗಿದೆ. ಇದಕ್ಕೆ ಕಾರಣವೂ ಇದ್ದು, ರಿಚರ್ಡ್ ಕೆಟಲ್‌ಬರೋ ಅಂಪೈರಿಂಗ್ ಮಾಡಿದ ಎಲ್ಲಾ 6 ನಾಕೌಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಿದೆ. ಇದರಲ್ಲಿ 2014ರ ಟಿ20 ವಿಶ್ವಕಪ್ ಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2015ರ ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ವಿಶ್ವಕಪ್ ಸೆಮಿಫೈನಲ್ ಮತ್ತು 2023ರ ವಿಶ್ವಕಪ್ ಫೈನಲ್ ಸೇರಿವೆ.

ಇನ್ನು ರಿಚರ್ಡ್ ಇಲ್ಲಿಂಗ್‌ವರ್ತ್ ಬಗ್ಗೆ ಹೇಳಬೆಕೆಂದರೆ ಈ ಬಾರಿಯ ಟಿ20 ವಿಶ್ವಕಪ್​ಗೂ ಮೊದಲು, ಇಲ್ಲಿಂಗ್‌ವರ್ತ್ ಅಂಪೈರ್ ಆಗಿದ್ದ ಪ್ರಮುಖ ಪಂದ್ಯಗಳಲ್ಲಿ ಭಾರತ ಸೋತಿದೆ. ಅದರಲ್ಲಿ 2019 ರ ವಿಶ್ವಕಪ್‌ ಸೆಮಿಫೈನಲ್, 2021 ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್ ಫೈನಲ್ ಹಾಗೂ 2023 ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್ ಫೈನಲ್ ಪಂದ್ಯಗಳು ಸೇರಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Wed, 26 June 24