ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ಎರಡೂ ತಂಡಗಳು ಒಂದೇ ಒಂದು ಸೋಲನುಭವಿಸಿಲ್ಲ. ಹೀಗಿರುವಾಗ ಫೈನಲ್ ಪಂದ್ಯದಲ್ಲಿ ವಿಭಿನ್ನ ರೋಚಕತೆ ಕಾಣಬಹುದು. ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಇದೀಗ ರೋಹಿತ್ ಸೇನೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹಾಗೂ ಹೊಸ ತಂತ್ರದೊಂದಿಗೆ ಮೈದಾನಕ್ಕೆ ಇಳಿಯಲು ಸಿದ್ಧತೆ ನಡೆಸಿದೆ.
ಕೆರಿಬಿಯನ್ ದೇಶಗಳ ಪಿಚ್‌ಗಳಿಗೆ ಅನುಗುಣವಾಗಿ ಭಾರತ ತಂಡದ ಸಂಯೋಜನೆ ಇದೆ. ಭಾರತ 10 ವರ್ಷಗಳಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದೆ. ಕೆರಿಬಿಯನ್‌ನಲ್ಲಿನ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ತನ್ನ ಟ್ರಂಪ್ ಕಾರ್ಡ್ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ಮೊದಲು, ನ್ಯೂಯಾರ್ಕ್‌ನಲ್ಲಿನ ವೇಗದ ಸ್ನೇಹಿ ಪಿಚ್‌ಗಳಲ್ಲಿ ಮೂವರು ಪರಿಣಿತ ವೇಗಿಗಳನ್ನು ಕಣಕ್ಕಿಳಿಸಿತ್ತು.
ಹೀಗಾಗಿ ಫೈನಲ್ ಪಂದ್ಯದಲ್ಲಿ ಭಾರತ ಖಂಡಿತವಾಗಿಯೂ ಹಿಂದಿನ ಪಂದ್ಯದ ಆಡುವ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸುವುದು ಖಚಿತವಾಗಿದೆ. ಆದರೆ ತಂಡವು ಇಬ್ಬರು ಆಟಗಾರರಿಂದ ಉತ್ತಮ ಪ್ರದರ್ಶನ ನಿರೀಕ್ಷೆಯಲ್ಲಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಇದುವರೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಕೊಹ್ಲಿ ಮತ್ತು ರೋಹಿತ್ ಅವರ ಕೊನೆಯ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಕೊಹ್ಲಿಗಿಂತ ಭಿನ್ನವಾಗಿ, ರೋಹಿತ್ ಪಂದ್ಯಾವಳಿಯಲ್ಲಿ ನಿರ್ಭಯವಾಗಿ ಮತ್ತು ನಿರರ್ಗಳವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ರೋಹಿತ್ ಬ್ಯಾಟಿಂಗ್ನಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೆ ಕೊಹ್ಲಿ ಬ್ಯಾಟ್ ಕೊನೆ ಪಂದ್ಯದಲ್ಲಾದರೂ ಮಿಂಚಬೇಕಿದೆ. ಇತ್ತ ಆಲ್ರೌಂಡರ್ ಶಿವಂ ದುಬೆ ಕೂಡ ನಿರೀಕ್ಷಿತ ಪ್ರದರ್ಶನ ನೀಡಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಪರಿಣಾಮಕಾರಿ ಇನ್ನಿಂಗ್ಸ್ ಆಡಿದ್ದಾರೆ. ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳು ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ಬೌಲಿಂಗ್ ವಿಭಾಗದಲ್ಲಿ ಭಾರತವು ಚಿಂತಿಸಬೇಕಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮುಗಿದ ತಕ್ಷಣ ಇಲ್ಲಿಗೆ ಆಗಮಿಸಿರುವ ಅವರಿಗೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಕೇವಲ ಒಂದು ದಿನ ಮಾತ್ರ ಸಿಕ್ಕಿದೆ. ಆದಾಗ್ಯೂ, ಈ ಮೈದಾನದಲ್ಲಿ ಭಾರತ ತಂಡ ಈಗಾಗಲೇ ಒಂದು ಪಂದ್ಯವನ್ನು ಆಡಿರುವುದರಿಂದ ಪಿಚ್ ಬಗ್ಗೆ ಅರಿವಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ