ಭಾರತ- ಪಾಕ್ ಟಿ20 ವಿಶ್ವಕಪ್ ಫೈಟ್ಗೆ ಹೊಸ ಕ್ರೀಡಾಂಗಣ ನಿರ್ಮಾಣ! ಎಲ್ಲಿ ನಡೆಯಲ್ಲಿದೆ ಗೊತ್ತಾ ಈ ಪಂದ್ಯ?
IND vs PAK, T20 World Cup 2024: ದಿ ಗಾರ್ಡಿಯನ್ ವರದಿ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಕದನವನ್ನು ಪಾಪ್-ಅಪ್ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಈ ಪಂದ್ಯಕ್ಕಾಗಿ ನ್ಯೂಯಾರ್ಕ್ ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ವರದಿಯಾಗಿದೆ.
2023ರ ಏಕದಿನ ವಿಶ್ವಕಪ್ (ODI World Cup 2023) ಅನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿರುವ ಐಸಿಸಿ (ICC) ಇದೀಗ ಮುಂದಿನ ವರ್ಷ ಅಂದರೆ 2024 ರ ಜೂನ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ನತ್ತ (T20 World Cup 2024) ತನ್ನ ದೃಷ್ಟಿ ನೆಟ್ಟಿದೆ. ಈಗಾಗಲೇ ಈ ಚುಟುಕು ಸಮರದ ಆತಿಥ್ಯದ ಹಕ್ಕನ್ನು ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ಗೆ ನೀಡಲಾಗಿದೆ. ಅದರಂತೆ ಈ ಎರಡು ದೇಶಗಳ ವಿವಿದ ನಗರಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲ್ಲಿವೆ. ಈ ನಡುವೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲ್ಲಿದೆ ಎಂಬುದರ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ದಿ ಗಾರ್ಡಿಯನ್ ಸುದ್ದಿ ಪ್ರಕಾರ, ಈ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ನ್ಯೂಯಾರ್ಕ್ ನಗರದಲ್ಲಿ ಮುಖಾಮುಖಿಯಾಗಲಿವೆ ಎಂದು ವರದಿಯಾಗಿದೆ.
ತಾತ್ಕಾಲಿಕ ಕ್ರೀಡಾಂಗಣ ನಿರ್ಮಾಣ
ದಿ ಗಾರ್ಡಿಯನ್ ವರದಿ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಕದನವನ್ನು ಪಾಪ್-ಅಪ್ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಈ ಪಂದ್ಯಕ್ಕಾಗಿ ನ್ಯೂಯಾರ್ಕ್ ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ವರದಿಯಾಗಿದೆ. ಇದಕ್ಕೆ ಕಾರಣವೂ ಇದ್ದು, ಇತ್ತೀಚಿನ ಜನಗಣತಿಯ ಮಾಹಿತಿಯ ಪ್ರಕಾರ ನ್ಯೂಯಾರ್ಕ್‌ನಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಹಾಗಾಗಿ ನ್ಯೂಯಾರ್ಕ್‌ನಲ್ಲಿ ಈ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
T20 World Cup 2023: ‘ನನಗೆ ಈಗಲೇ ಹೇಳಿಬಿಡಿ’: ಬಿಸಿಸಿಐಗೆ ಸ್ಪಷ್ಟ ಸಂದೇಶ ರವಾನಿಸಿದ ರೋಹಿತ್ ಶರ್ಮಾ
ಅಮೇರಿಕಾದಲ್ಲಿ ಭಾರತದ ಪಂದ್ಯಗಳು
ಇದು ಮಾತ್ರವಲ್ಲದೆ, ನವದೆಹಲಿ ಮತ್ತು ನ್ಯೂಯಾರ್ಕ್ ನಡುವಿನ ಸಮಯದ ವ್ಯತ್ಯಾಸವನ್ನು ಪರಿಗಣಿಸಿ ಟೀಂ ಇಂಡಿಯಾದ ಪಂದ್ಯಗಳನ್ನು ನಿಗದಿಪಡಿಸಲಾಗುವುದು ಎಂದು ವರದಿಗಳು ಹೇಳಿವೆ. ಹೀಗಾಗಿ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ. ಸದ್ಯದ ವರದಿ ಪ್ರಕಾರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ಎಲ್ಲಾ ಗುಂಪು ಪಂದ್ಯಗಳನ್ನು ಕೆರಿಬಿಯನ್‌ನಲ್ಲಿ ಆಡಲಿವೆ. ಇನ್ನುಳಿದಂತೆ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ, ಈ ಹಿಂದೆ ಅಂದರೆ 2007 ರ ಏಕದಿನ ವಿಶ್ವಕಪ್ ಮತ್ತು 2010 ರ ಟಿ20 ವಿಶ್ವಕಪ್ ಫೈನಲ್‌ಗಳನ್ನು ಆಯೋಜಿಸಿದ್ದ ಬಾರ್ಬಡೋಸ್‌ನಲ್ಲಿ ಮುಂಬರುವ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
INDIA VS PAKISTAN WILL BE PLAYED IN NEW YORK CITY IN THE 2024 T20 WORLD CUP….!!! (The Guardian). pic.twitter.com/RbqrkYD2lj
— Mufaddal Vohra (@mufaddal_vohra) December 15, 2023
ಮೇಲೆ ಹೇಳಿದಂತೆ ಟಿ20 ವಿಶ್ವಕಪ್ಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯ ವಹಿಸಿದ್ದರೂ, ಭಾರತ ತಂಡದ ಎಲ್ಲಾ ಪಂದ್ಯಗಳು ಅಮೆರಿಕದಲ್ಲಿ ಮಾತ್ರ ನಡೆಯಲ್ಲಿವೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಸಂಪೂರ್ಣ ವೇಳಾಪಟ್ಟಿ ಹೊರಬಂದ ಮೇಲಷ್ಟೇ ಈ ಬಗ್ಗೆ ಗೊಂದಲಗಳು ನಿವಾರಣೆಯಾಗಲಿದೆ.
ಟಿ20ಯಲ್ಲಿ ಭಾರತ-ಪಾಕ್ ಮುಖಾಮುಖಿ ವರದಿ
ಟಿ20 ಮಾದರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಇದುವರೆಗೆ ಒಟ್ಟು 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಂ ಇಂಡಿಯಾ, ಪಾಕ್ ವಿರುದ್ಧ ಮೇಲುಗೈ ಸಾಧಿಸಿದ್ದು, ಆಡಿರುವ 12 ಪಂದ್ಯಗಳ ಪೈಕಿ ಒಂಬತ್ತು ಪಂದ್ಯಗಳಲ್ಲಿ ಗೆದ್ದುಬೀಗಿದೆ. ಆದರೆ ಪಾಕಿಸ್ತಾನ ತಂಡ ಭಾರತದ ವಿರುದ್ಧ ಕೇವಲ ಮೂರು ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Fri, 15 December 23