NAM vs OMN: ಸೂಪರ್ ಓವರ್​ನಲ್ಲಿ ರೋಚಕ ಜಯ ಸಾಧಿಸಿದ ನಮೀಬಿಯಾ

|

Updated on: Jun 04, 2024 | 12:53 PM

T20 World Cup 2024: ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ನಸೀಮ್ ಖುಷಿ (6) ವಿಕೆಟ್ ಪಡೆಯುವಲ್ಲಿ ರೂಬೆನ್ ಟ್ರಂಪೆಲ್ಮನ್ ಯಶಸ್ವಿಯಾದರು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಝೀಶಾನ್ ಮಖ್ಸೂದ್ 22 ರನ್​ಗಳ ಕೊಡುಗೆ ನೀಡಿದರೆ, ಖಾಲಿದ್ ಖೈಲಿ 34 ರನ್ ಬಾರಿಸಿದರು. ಇನ್ನು ಅಯಾನ್ ಖಾನ್ 15 ರನ್​ಗಳ ಕೊಡುಗೆ ನೀಡಿದರು.

NAM vs OMN: ಸೂಪರ್ ಓವರ್​ನಲ್ಲಿ ರೋಚಕ ಜಯ ಸಾಧಿಸಿದ ನಮೀಬಿಯಾ
NAM vs OMN
Follow us on

T20 World Cup 2024: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ 3ನೇ ಪಂದ್ಯದಲ್ಲಿ ನಮೀಬಿಯಾ ತಂಡ ಜಯ ಸಾಧಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತ್ತು. ಅದರಂತೆ ಸೂಪರ್ ಓವರ್​ನತ್ತ ಸಾಗಿದ ಪಂದ್ಯದಲ್ಲಿ ನಮೀಬಿಯಾ ತಂಡ 11 ರನ್​ಗಳ ರೋಚಕ ಜಯ ಸಾಧಿಸಿದೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಒಮಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ರೂಬೆನ್ ಟ್ರಂಪೆಲ್ಮನ್ ಯಶಸ್ವಿಯಾದರು.

ಮೊದಲ ಓವರ್​ನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ ಕಶ್ಯಪ್ ಪ್ರಜಾಪತಿ (0) ಯನ್ನು ಎಲ್​ಬಿಡಬ್ಲ್ಯೂ ಮಾಡಿದ ರೂಬೆನ್ ಟ್ರಂಪೆಲ್ಮನ್, 2ನೇ ಎಸೆತದಲ್ಲಿ ಒಮಾನ್ ತಂಡದ ನಾಯಕ ಅಖಿಬ್ ಇಲ್ಯಾಸ್ (0) ವಿಕೆಟ್ ಪಡೆದರು. ಅಂದರೆ ಶೂನ್ಯಕ್ಕೆ 2 ವಿಕೆಟ್ ಉರುಳಿಸಿ ಒಮಾನ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು.

ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ನಸೀಮ್ ಖುಷಿ (6) ವಿಕೆಟ್ ಪಡೆಯುವಲ್ಲಿ ರೂಬೆನ್ ಟ್ರಂಪೆಲ್ಮನ್ ಯಶಸ್ವಿಯಾದರು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಝೀಶಾನ್ ಮಖ್ಸೂದ್ 22 ರನ್​ಗಳ ಕೊಡುಗೆ ನೀಡಿದರೆ, ಖಾಲಿದ್ ಖೈಲಿ 34 ರನ್ ಬಾರಿಸಿದರು. ಇನ್ನು ಅಯಾನ್ ಖಾನ್ 15 ರನ್​ಗಳ ಕೊಡುಗೆ ನೀಡಿದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ ಒಮಾನ್ ತಂಡವು 19.4 ಓವರ್​ಗಳಲ್ಲಿ 109 ರನ್​ಗಳಿಗೆ ಆಲೌಟ್ ಆಯಿತು.

110 ರನ್​ಗಳ ಸುಲಭ ಗುರಿ ಬೆನ್ನತ್ತಿದ ನಮೀಬಿಯಾ ತಂಡದ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮೈಕೆಲ್ ವ್ಯಾನ್ ಲಿಂಗೆನ್ (0) ಬಿಲಾಲ್ ಖಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಿಕೋಲಸ್ ಡೆವಿನ್ ಹಾಗೂ ಜಾನ್ ಫ್ರೈಲಿಂಕ್ 42 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಈ ಹಂತದಲ್ಲಿ ನಿಕೋಲಸ್ ಡೆವಿನ್ (24) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಕೇವಲ 13 ರನ್​ಗಳಿಸಲಷ್ಟೇ ಶಕ್ತರಾದರು. ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಜಾನ್ ಫ್ರೈ ಲಿಂಕ್ 48 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 45 ರನ್ ಬಾರಿಸಿ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಪರಿಣಾಮ ಅಂತಿಮ ಓವರ್​ನ ಕೊನೆಯ 5 ಎಸೆತಗಳಲ್ಲಿ 5 ರನ್​ಗಳು ಬೇಕಿತ್ತು. ಅದ್ಭುತ ದಾಳಿ ಸಂಘಟಿಸಿದ ಮೆಹ್ರಾನ್ ಖಾನ್ 2ನೇ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಅಲ್ಲದೆ 3ನೇ ಎಸೆತದಲ್ಲಿ ಝೇನ್ ಗ್ರೀನ್ (0) ಅವರನ್ನು ಎಲ್​ಬಿಡಬ್ಲ್ಯೂ ಮಾಡಿದರು.

ನಮೀಬಿಯಾ ತಂಡಕ್ಕೆ ಕೊನೆಯ 3 ಎಸೆತಗಳಲ್ಲಿ 5 ರನ್​ಗಳು ಬೇಕಿತ್ತು. 4ನೇ ಎಸೆತದಲ್ಲಿ ಮಲನ್ ಕುಗ್ರರ್ 1 ರನ್ ಗಳಿಸಿದರು. 5ನೇ ಎಸೆತದಲ್ಲಿ ಡೇವಿಡ್ ವೀಝ 2 ರನ್​ ಬಾರಿಸಿದರು. ಕೊನೆಯ ಎಸೆತದಲ್ಲಿ 2 ರನ್​ಗಳು ಬೇಕಿತ್ತು. ಅಂತಿಮ ಎಸೆತದಲ್ಲಿ ಒಂದು ರನ್ ಓಡುವ ಮೂಲಕ ನಮೀಬಿಯಾ ತಂಡ ಪಂದ್ಯವನ್ನು ಟೈ ಮಾಡಿಕೊಂಡಿತು.

ಒಮಾನ್– 109 (19.4)

ನಮೀಬಿಯಾ– 109/6 (20)

ಸೂಪರ್ ಓವರ್ ಪಂದ್ಯ:

ಬಿಲಾಲ್ ಖಾನ್ ಎಸೆದ ಸೂಪರ್ ಓವರ್​ನ ಮೊದಲ ಎಸೆತದಲ್ಲಿ ನಮೀಬಿಯಾ ಬ್ಯಾಟರ್ ಡೇವಿಡ್ ವೀಝ ಫೋರ್ ಬಾರಿಸಿದರು. 2ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು. ಮೂರನೇ ಎಸೆತದಲ್ಲಿ 2 ರನ್. ನಾಲ್ಕನೇ ಎಸೆತದಲ್ಲಿ 1 ರನ್​. ಐದನೇ ಎಸೆತದಲ್ಲಿ ಎರಾಸ್ಮಸ್ ಲೆಗ್ ಸೈಡ್​ನತ್ತ ಫೋರ್ ಬಾರಿಸಿದರು. ಆರನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸುವ ಮೂಲಕ ನಮೀಬಿಯಾ ತಂಡ ಸೂಪರ್​ ಓವರ್​ನಲ್ಲಿ 21 ರನ್​ ಕಲೆಹಾಕಿತು.

22 ರನ್​ಗಳ ಗುರಿ ಪಡೆದ ಒಮಾನ್, ಮೊದಲ ಎಸೆತದಲ್ಲಿ 2 ರನ್ ಕಲೆಹಾಕಿತು. ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಮೂರನೇ ಎಸೆತದಲ್ಲಿ ನಸೀಮ್ ಖುಷಿ ಬೌಲ್ಡ್ ಆದರು. ನಾಲ್ಕನೇ ಎಸೆತದಲ್ಲಿ 1 ರನ್​. ಐದನೇ ಎಸೆತದಲ್ಲಿ ಕೇವಲ 1 ರನ್​. ಕೊನೆಯ ಎಸೆತದಲ್ಲಿ ಸಿಕ್ಸ್​. ಈ ಮೂಲಕ ಡೇವಿಡ್ ವೀಝ ಸೂಪರ್​ ಓವರ್​ನಲ್ಲಿ ನಮೀಬಿಯಾ ತಂಡಕ್ಕೆ 11 ರನ್​ಗಳ ಜಯ ತಂದು ಕೊಟ್ಟರು.

ನಮೀಬಿಯಾ ಪ್ಲೇಯಿಂಗ್ 11: ಮೈಕೆಲ್ ವ್ಯಾನ್ ಲಿಂಗೆನ್ , ನಿಕೋಲಾಸ್ ಡೇವಿನ್ , ಜಾನ್ ಫ್ರಿಲಿಂಕ್ , ಗೆರ್ಹಾರ್ಡ್ ಎರಾಸ್ಮಸ್ (ನಾಯಕ) , ಮಲನ್ ಕ್ರುಗರ್ , ಜೆಜೆ ಸ್ಮಿತ್ , ಡೇವಿಡ್ ವೈಸ್ , ಝೇನ್ ಗ್ರೀನ್ (ವಿಕೆಟ್ ಕೀಪರ್) , ರೂಬೆನ್ ಟ್ರಂಪೆಲ್ಮನ್ , ಬರ್ನಾರ್ಡ್ ಸ್ಕೋಲ್ಟ್ಜ್ , ತಂಗೇನಿ ಲುಂಗಮೆನಿ.

ಇದನ್ನೂ ಓದಿ: T20 World Cup 2024: ಎರಡು ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ರೂಬೆನ್

ಒಮಾನ್ ಪ್ಲೇಯಿಂಗ್ 11: ಕಶ್ಯಪ್ ಪ್ರಜಾಪತಿ , ನಸೀಮ್ ಖುಷಿ (ವಿಕೆಟ್ ಕೀಪರ್) , ಅಕಿಬ್ ಇಲ್ಯಾಸ್ (ನಾಯಕ) , ಜೀಶನ್ ಮಕ್ಸೂದ್ , ಖಾಲಿದ್ ಕೈಲ್ , ಅಯಾನ್ ಖಾನ್ , ಮೊಹಮ್ಮದ್ ನದೀಮ್ , ಮೆಹ್ರಾನ್ ಖಾನ್ , ಶಕೀಲ್ ಅಹ್ಮದ್ , ಕಲೀಮುಲ್ಲಾ , ಬಿಲಾಲ್ ಖಾನ್.

 

Published On - 9:43 am, Mon, 3 June 24