T20 World Cup 2024: ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ. ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಯುಎಸ್ಎ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಮಳೆಗೆ ಅಹುತಿಯಾಗುವುದರೊಂದಿಗೆ ಪಾಕ್ ತಂಡವು ವಿಶ್ವಕಪ್ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತಿದ್ದ ಪಾಕಿಸ್ತಾನ್ ತಂಡವು ತನ್ನ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮಂಡಿಯೂರಿತ್ತು.
ಇನ್ನು ಮೂರನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯಗಳಿಸುವ ಮೂಲಕ ಗೆಲುವಿನ ಖಾತೆ ತೆರೆದಿತ್ತು. ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೇರುವ ಆಸೆಯನ್ನು ಜೀವಂತವರಿಸಿಕೊಂಡಿದ್ದ ಪಾಕ್ ಪಡೆಗೆ ವರುಣ ಅಡ್ಡಿಯಾಗಿದ್ದಾನೆ. ಅಂದರೆ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ತಂಡ ಗೆದ್ದಿದ್ದರೆ, ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೂಪರ್-8 ಹಂತಕ್ಕೇರುವ ಅವಕಾಶ ಹೊಂದಿತ್ತು.
ಆದರೆ ಯುಎಸ್ಎ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಮಳೆಯಿಂದ ರದ್ದಾಗಿದ್ದು, ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ. ಇದರೊಂದಿಗೆ ಒಟ್ಟು 5 ಪಾಯಿಂಟ್ಸ್ ಪಡೆದಿರುವ ಯುಎಸ್ಎ ತಂಡವು ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಇನ್ನು ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಕೆನಡಾ ವಿರುದ್ಧ ಗೆಲುವು ಸಾಧಿಸಿದರೂ ಒಟ್ಟು 4 ಅಂಕಗಳನ್ನು ಮಾತ್ರ ಹೊಂದಲಿದೆ. ಹಾಗಾಗಿ ಅಂತಿಮ ಪಂದ್ಯಕ್ಕೂ ಮುನ್ನವೇ ಪಾಕ್ ಪಡೆ ಟಿ20 ವಿಶ್ವಕಪ್ನಿಂದ ಹೊರಬಿದ್ದಿರುವುದು ಖಚಿತವಾಗಿದೆ.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.
ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಉಗಾಂಡ ಬೌಲರ್
ಗ್ರೂಪ್-ಎ ಅಂಕ ಪಟ್ಟಿಯಲ್ಲಿ 6 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಈಗಾಗಲೇ ಸೂಪರ್-8 ಹಂತಕ್ಕೇರಿದೆ. ಇದೀಗ 5 ಅಂಕಗಳೊಂದಿಗೆ ಯುಎಸ್ಎ ತಂಡ ಕೂಡ ಮುಂದಿನ ಹಂತಕ್ಕೆ ಕಾಲಿಟ್ಟಿದೆ. ಇನ್ನು ಗ್ರೂಪ್-ಎ ನಲ್ಲಿದ್ದ ಇತರೆ ತಂಡಗಳಾದ ಐರ್ಲೆಂಡ್, ಕೆನಡಾ ಮತ್ತು ಪಾಕಿಸ್ತಾನ್ ತಂಡಗಳ ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ.