T20 World Cup 2024: ಕೆನಡಾ ವಿರುದ್ಧ ತಂಡದಲ್ಲಿ ಬದಲಾವಣೆ ಮಾಡ್ತಾರಾ ರೋಹಿತ್?
T20 World Cup 2024: ಕೆನಡಾ ವಿರುದ್ಧದ ಪಂದ್ಯ ಟೀಂ ಇಂಡಿಯಾಕ್ಕೆ ಕೇವಲ ಔಪಚಾರಿಕವಾಗಿದ್ದು, ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರನ್ನು ಹೊರಗಿಟ್ಟು, ಬೆಂಚ್ನಲ್ಲಿರುವ ಆಟಗಾರರನ್ನು ತಂಡ ಪ್ರಯತ್ನಿಸಬಹುದಾಗಿದೆ. ಆದರೆ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ತಂಡದಲ್ಲಿ ಬದಲಾವಣೆ ತರಲು ಆಯ್ಕೆ ಮಂಡಳಿ ಮುಂದಾಗುವ ಸಾಧ್ಯತೆಗಳು ತೀರ ಕಡಿಮೆ ಇವೆ.
ಭಾರತ ಮತ್ತು ಕೆನಡಾ (India vs Canada) ನಡುವಿನ ಟಿ20 ವಿಶ್ವಕಪ್ 2024 ರ (T20 World Cup 2024) ಲೀಗ್ ಪಂದ್ಯವು ಫ್ಲೋರಿಡಾದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದ್ದು, ಇಂದು ನಡೆಯಬೇಕಿದ್ದ ಟೀಂ ಇಂಡಿಯಾದ (Team India) ಅಭ್ಯಾಸವನ್ನು ಕೂಡ ಮಳೆಯಿಂದ ರದ್ದುಗೊಳಿಸಲಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ, ಫ್ಲೋರಿಡಾದಲ್ಲಿ ನಾಳೆಯೂ ರಣಭೀಕರ ಮಳೆಯಾಗಲಿದೆ ಎಂದು ವರದಿಯಾಗಿದೆ. ಹೀಗಾಗಿ ಪಂದ್ಯ ನಡೆಯುವುದು ಅನುಮಾನವಾಗಿದೆ. ಇದೆಲ್ಲದರ ನಡುವೆಯೂ ನಾಳಿನ ಪಂದ್ಯಕ್ಕೆ ವರುಣ ರಾಯ ಅನುವು ಮಾಡಿಕೊಟ್ಟರೆ, ಟೀಂ ಇಂಡಿಯಾ ಯಾವ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿಯಲಿದೆ? ಅದರಲ್ಲೂ ಆರಂಭಿಕರು ಬದಲಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಕೊಹ್ಲಿ ವಿಫಲ
ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸತತ ಮೂರು ಪಂದ್ಯಗಳನ್ನು ಗೆದ್ದರೂ ತಂಡದಲ್ಲಿ ಸಮತೋಲನ ಕಂಡು ಬರುತ್ತಿಲ್ಲ. ಆರಂಭಿಕರು ಉತ್ತಮ ಆರಂಭ ನೀಡಲು ವಿಫಲರಾಗುತ್ತಿದ್ದಾರೆ. ಐಪಿಎಲ್‌ನಲ್ಲಿ ರನ್ ಶಿಖರ ಕಟ್ಟಿ ಆರೆಂಜ್ ಕ್ಯಾಪ್ ಗೆದ್ದಿದ್ದ ಕೊಹ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದುವರೆಗೆ ಕೊಹ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 1.66 ರ ಸರಾಸರಿಯಲ್ಲಿ ಕೇವಲ ಐದು ರನ್ ಮಾತ್ರ ಕಲೆಹಾಕಿದ್ದಾರೆ. ಇದು ತಂಡದ ತಲೆನೋವಿಗೆ ಕಾರಣವಾಗಿದೆ.
ಉತ್ತಮ ಫಾರ್ಮ್ನಲ್ಲಿ ಪಂತ್
ಅಲ್ಲದೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿರುವ ಕೊಹ್ಲಿ ಬೇಗನೇ ಔಟಾಗುತ್ತಿರುವ ಕಾರಣ ತಂಡಕ್ಕೆ ಉತ್ತಮ ಆರಂಭ ಸಿಗದೆ ನಂತರ ಬರುವ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುತ್ತಿದೆ. ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಬ್ಯಾಟ್ಸ್‌ಮನ್‌ಗಳು ಕೊಹ್ಲಿಯ ಕಳಪೆ ಪ್ರದರ್ಶನವನ್ನು ಸರಿದೂಗಿಸುವಲ್ಲಿ ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಅದ್ಭುತ ಫಾರ್ಮ್ನಲ್ಲಿರುವ ಪಂತ್ ಐರ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಕ್ರಮವಾಗಿ 36 ಮತ್ತು 42 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಎರಡೂ ಪಂದ್ಯಗಳಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
IND vs CAN: ಫ್ಲೋರಿಡಾದಲ್ಲಿ ಭಾರಿ ಮಳೆ; ಭಾರತದ ಅಭ್ಯಾಸ ರದ್ದು! ಕೆನಡಾ ವಿರುದ್ಧದ ಪಂದ್ಯ ನಡೆಯುವುದು ಡೌಟ್
ಫಾರ್ಮ್ಗೆ ಮರಳಿದ ಸೂರ್ಯ- ದುಬೆ
ಪಂದ್ಯಾವಳಿಯಲ್ಲಿ ಕಳಪೆ ಆರಂಭದಿಂದ ಚೇತರಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಅಮೇರಿಕಾ ವಿರುದ್ಧ ಗೆಲುವಿನ ಅರ್ಧಶತಕ ದಾಖಲಿಸಿದ್ದರು. ಕಳಪೆ ಫಾರ್ಮ್ನಿಂದ ಬಳಲುತ್ತಿದ ಶಿವಂ ದುಬೆ ಕೂಡ ಅಮೆರಿಕ ವಿರುದ್ಧ 35 ಎಸೆತಗಳಲ್ಲಿ 31 ರನ್ ಗಳಿಸಿದರು. ಈ ಕಾರಣದಿಂದಾಗಿ ಅವರು ಮತ್ತೊಮ್ಮೆ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್‌ಗಿಂತ ಆದ್ಯತೆ ಪಡೆಯುವ ನಿರೀಕ್ಷೆಯಿದೆ. ಉಳಿದಂತೆ ಆಲ್‌ರೌಂಡರ್ ಖೋಟಾದಲ್ಲಿ ಸ್ಥಾನ ಪಡೆದಿರುವ ಮೂವರು ಆಟಗಾರರ ಪೈಕಿ ಜಡೇಜಾರನ್ನು ಹೊರತುಪಡಿಸಿ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಇದುವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ.
ಬದಲಾವಣೆ ಸಾಧ್ಯತೆ ಕಡಿಮೆ
ಆರಂಭದಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಆಟಗಾರರು ಸಮಯ ಕಳೆದಂತೆ ಫಾರ್ಮ್ಗೆ ಮರಳುತ್ತಿದ್ದಾರೆ. ಆರಂಭಿಕರಾಗಿ ಕೊಹ್ಲಿ ಒಬ್ಬರು ತಮ್ಮ ಹಳೆಯ ಫಾರ್ಮ್ಗೆ ಮರಳಿದರೆ, ಟೀಂ ಇಂಡಿಯಾ ಇನ್ನಷ್ಟು ಬಲಿಷ್ಠಗೊಳ್ಳಿದೆ. ಅಲ್ಲದೆ ಕೆನಡಾ ವಿರುದ್ಧದ ಪಂದ್ಯ ಟೀಂ ಇಂಡಿಯಾಕ್ಕೆ ಕೇವಲ ಔಪಚಾರಿಕವಾಗಿದ್ದು, ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರನ್ನು ಹೊರಗಿಟ್ಟು, ಬೆಂಚ್ನಲ್ಲಿರುವ ಆಟಗಾರರನ್ನು ತಂಡ ಪ್ರಯತ್ನಿಸಬಹುದಾಗಿದೆ. ಆದರೆ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ತಂಡದಲ್ಲಿ ಬದಲಾವಣೆ ತರಲು ಆಯ್ಕೆ ಮಂಡಳಿ ಮುಂದಾಗುವ ಸಾಧ್ಯತೆಗಳು ತೀರ ಕಡಿಮೆ ಇವೆ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ/ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್/ ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ