T20 World Cup 2024: ಇಂಚುಗಳ ಅಂತರದಲ್ಲಿ ಸೋತ ನೇಪಾಳ..!

|

Updated on: Jun 15, 2024 | 9:07 AM

T20 World Cup 2024: ನೇಪಾಳ ವಿರುದ್ಧದ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಗ್ರೂಪ್-ಡಿ ನಲ್ಲಿ ಸೋಲಿಲ್ಲದ ಸರದಾರನಾಗಿ ಲೀಗ್ ಹಂತದ ಪಂದ್ಯಗಳನ್ನು ಮುಗಿಸಿದೆ. ಈ ಮೂಲಕ ಸೌತ್ ಆಫ್ರಿಕಾ ಒಟ್ಟು 8 ಅಂಕಗಳೊಂದಿಗೆ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಇನ್ನು ನೇಪಾಳ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ.

T20 World Cup 2024: ಇಂಚುಗಳ ಅಂತರದಲ್ಲಿ ಸೋತ ನೇಪಾಳ..!
NEP vs SA
Follow us on

T20 World Cup 2024: ಟಿ20 ವಿಶ್ವಕಪ್​ನ 31ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನೇಪಾಳ ತಂಡವು ವಿರೋಚಿತ ಸೋಲನುಭವಿಸಿದೆ. ಕಿಂಗ್​ಸ್ಟೌನ್​ನ ಅರ್ನೋಸ್ ವೇಲ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೇಪಾಳ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಟಗಾರ ರೀಝ ಹೆಂಡ್ರಿಕ್ಸ್ ಉತ್ತಮ ಆರಂಭ ಒದಗಿಸಿದ್ದರು.

ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರೀಝ ಹೆಂಡ್ರಿಕ್ಸ್ 49 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 43 ರನ್ ಬಾರಿಸಿದರೆ, ಕ್ವಿಂಟನ್ ಡಿಕಾಕ್ ಕೇವಲ 10 ರನ್​ಗಳಿಸಿ ಔಟಾಗಿದ್ದರು. ಇನ್ನು ಐಡೆನ್ ಮಾರ್ಕ್ರಾಮ್ (15) ಹಾಗೂ ಹೆನ್ರಿಕ್ ಕ್ಲಾಸೆನ್ (3) ಬೇಗನೆ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಟ್ರಿಸ್ಟನ್ ಸ್ಟಬ್ಸ್ 18 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 27 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತು.

ನೇಪಾಳ ಪರ ಕುಶಾಲ್ ಭುರ್ಟೆಲ್ 4 ಓವರ್​ಗಳಲ್ಲಿ 19 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ದೀಪೇಂದ್ರ ಸಿಂಗ್ 4 ಓವರ್​ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ನೇಪಾಳ ತಂಡದ ಕೆಚ್ಚೆದೆಯ ಹೋರಾಟ:

116 ರನ್​ಗಳ ಗುರಿ ಪಡೆದ ನೇಪಾಳ ತಂಡವು ಉತ್ತಮ ಆರಂಭ ಪಡೆದಿತ್ತು. ಸೌತ್ ಆಫ್ರಿಕಾದ ಅನುಭವಿ ವೇಗಿಗಳ ವಿರುದ್ಧ ಮೊದಲ ವಿಕೆಟ್​ಗೆ ಆರಂಭಿಕರಾದ ಕುಶಾಲ್ ಭುರ್ಟೆಲ್ ಹಾಗೂ ಆಸಿಫ್ ಶೇಖ್ 35 ರನ್​ಗಳ ಜೊತೆಯಾಟವಾಡಿದ್ದರು.

ಆದರೆ 8ನೇ ಓವರ್​ನಲ್ಲಿ ಕುಶಾಲ್ ಭುರ್ಟೆಲ್ (13) ಔಟಾದರು. ಇದರ ಬೆನ್ನಲ್ಲೇ ರೋಹಿತ್ ಪೌಡೆಲ್ (0) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನಿಲ್ ಸಾಹ್ 24 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 27 ರನ್​ಗಳ ಕೊಡುಗೆ ನೀಡಿದರು.

ಇದಾಗ್ಯೂ ಮತ್ತೊಂದೆಡೆ ಆಸಿಫ್ ಶೇಖ್ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದರು. 49 ಎಸೆತಗಳನ್ನು ಎದುರಿಸಿದ ಆಸಿಫ್ 1 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 42 ರನ್ ಬಾರಿಸಿ ಔಟಾದರು. ಈ ವೇಳೆಗೆ ನೇಪಾಳ ತಂಡವು 15 ಓವರ್​ಗಳಲ್ಲಿ 100 ರನ್ ಕಲೆಹಾಕಿತ್ತು.

ಅಂತಿಮ 2 ಓವರ್​ಗಳಲ್ಲಿ ನೇಪಾಳ ತಂಡಕ್ಕೆ 16 ರನ್​ಗಳ ಅವಶ್ಯಕತೆಯಿತ್ತು. ಅನ್ರಿಕ್ ನೋಕಿಯಾ ಎಸೆದ 19ನೇ ಓವರ್​ನ ಮೊದಲ 4 ಎಸೆತಗಳಲ್ಲಿ ಯಾವುದೇ ರನ್ ಮೂಡಿ ಬಂದಿರಲಿಲ್ಲ. 5ನೇ ಎಸೆತದಲ್ಲಿ ಸೋಂಪಾಲ್ ಕಮಿ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ 2 ರನ್ ಕಲೆಹಾಕಿದರು.

ಅದರಂತೆ ಕೊನೆಯ 6 ಎಸೆತಗಳಲ್ಲಿ ನೇಪಾಳ ತಂಡಕ್ಕೆ 8 ರನ್​ಗಳ ಅವಶ್ಯಕತೆಯಿತ್ತು. ಒಟ್ನೀಲ್ ಬಾರ್ಟ್ಮನ್ ಎಸೆದ ಕೊನೆಯ ಓವರ್​ನ ಮೊದಲ 2 ಎಸೆತಗಳನ್ನು ಎದುರಿಸಿದ ಗುಲ್ಶನ್ ಜಾ ಯಾವುದೇ ರನ್ ಕಲೆಹಾಕಲಿಲ್ಲ.

3ನೇ ಎಸೆತದಲ್ಲಿ ಗುಲ್ಶನ್ ಫೋರ್ ಬಾರಿಸಿದರು. 4ನೇ ಎಸೆತದಲ್ಲಿ ಮತ್ತೆರಡು ರನ್ ಕಲೆಹಾಕಿದರು. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಕೊನೆಯ ಎಸೆತದಲ್ಲಿ 2 ರನ್​ಗಳು ಬೇಕಿತ್ತು. ಬಾರ್ಟ್ಮನ್ ಎಸೆದ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಇತ್ತ ನೇಪಾಳ ಬ್ಯಾಟರ್​ಗಳು ರನ್​ಗಾಗಿ ಓಡಿದರು.

ಆದರೆ ನಿಧಾನಗತಿಯ ಓಟದಿಂದಾಗಿ ಗುಲ್ಶನ್ ಜಾ ನಾನ್​ ಸ್ಟ್ರೈಕರ್ ಎಂಡ್​ನಲ್ಲಿ ರನೌಟ್ ಆದರು. ಈ ಮೂಲಕ ಇಂಚುಗಳ ಅಂತರದಿಂದ ನೇಪಾಳ ತಂಡವು ಸೋಲನುಭವಿಸಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು ಕೇವಲ 1 ರನ್​ಗಳ ರೋಚಕ ಜಯ ಸಾಧಿಸಿದೆ. ಈ ವಿರೋಚಿತ ಸೋಲಿನ ಬೆನ್ನಲ್ಲೇ ನೇಪಾಳ ಯುವ ಪಡೆಯ ಭರ್ಜರಿ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಅಂತಿಮ ಓವರ್​ನ ಕೊನೆಯ ಎಸೆತದ ವಿಡಿಯೋ:

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಚ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಟ್ರಿಸ್ಟನ್ ಸ್ಟಬ್ಸ್ , ಮಾರ್ಕೊ ಯಾನ್ಸೆನ್ , ಕಗಿಸೊ ರಬಾಡಾ , ಅನ್ರಿಕ್ ನೋಕಿಯಾ, ಒಟ್ನೀಲ್ ಬಾರ್ಟ್ಮನ್ , ತಬ್ರೇಝ್ ಶಮ್ಸಿ.

ಇದನ್ನೂ ಓದಿ: T20 World Cup 2026: ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ನೇರ ಅರ್ಹತೆ ಪಡೆದ ಅಮೆರಿಕ..!

ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ಅನಿಲ್ ಸಾಹ್ , ರೋಹಿತ್ ಪೌಡೆಲ್ (ನಾಯಕ) , ಕುಶಾಲ್ ಮಲ್ಲಾ , ದೀಪೇಂದ್ರ ಸಿಂಗ್ ಐರಿ , ಗುಲ್ಶನ್ ಜಾ , ಸೋಂಪಾಲ್ ಕಾಮಿ , ಕರಣ್ ಕೆಸಿ , ಸಂದೀಪ್ ಲಮಿಚಾನೆ , ಅಬಿನಾಶ್ ಬೋಹರಾ.

 

 

Published On - 9:05 am, Sat, 15 June 24