T20 World Cup 2024 Schedule: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತ- ಪಾಕ್ ಪಂದ್ಯ ಯಾವಾಗ ಗೊತ್ತಾ?

|

Updated on: Jan 05, 2024 | 7:50 PM

ಟಿ20 ವಿಶ್ವಕಪ್​ 2024 ವೇಳಾಪಟ್ಟಿ: ಈ ವರ್ಷ ಅಂದರೆ 2024 ರ ಜೂನ್​ನಲ್ಲಿ ನಡೆಯಲ್ಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ತಯಾರಿ ಶುರುವಾಗಿದೆ. ಈ ಚುಟುಕು ಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಈ ನಡುವೆ ಐಸಿಸಿ, ಈ ಮಿನಿ ವಿಶ್ವಕಪ್​ನ ವೇಳಾಪಟ್ಟಿಯನ್ನು ಸಹ ಇಂದು ಬಿಡುಗಡೆಗೊಳಿಸಿದೆ.

T20 World Cup 2024 Schedule: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತ- ಪಾಕ್ ಪಂದ್ಯ ಯಾವಾಗ ಗೊತ್ತಾ?
ಟಿ20 ವಿಶ್ವಕಪ್ 2024
Follow us on

ಈ ವರ್ಷ ಅಂದರೆ 2024 ರ ಜೂನ್​ನಲ್ಲಿ ನಡೆಯಲ್ಲಿರುವ ಐಸಿಸಿ ಟಿ20 ವಿಶ್ವಕಪ್​ಗೆ (T20 World Cup 2024) ತಯಾರಿ ಶುರುವಾಗಿದೆ. ಈ ಚುಟುಕು ಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಈಗಾಗಲೇ ಈ ವಿಶ್ವಸಮರಕ್ಕೆ 20 ತಂಡಗಳನ್ನು ಸಹ ಅಧಿಕೃತಗೊಳಿಸಲಾಗಿದೆ. ಈ ನಡುವೆ ಐಸಿಸಿ, ಈ ಮಿನಿ ವಿಶ್ವಕಪ್​ನ ವೇಳಾಪಟ್ಟಿಯನ್ನು ಸಹ ಇಂದು ಬಿಡುಗಡೆಗೊಳಿಸಿದೆ. ವೇಳಾಪಟ್ಟಿಯ ಪ್ರಕಾರ ಜೂನ್ 1 ರಿಂದ ಆರಂಭವಾಗಲಿರುವ ಟೂರ್ನಿ ಜೂನ್ 29 ರಂದು ಮುಕ್ತಾಯವಾಗಲಿದೆ. ಅಂದರೆ ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ಜೂನ್ 29 ರಂದು ನಡೆಯಲ್ಲಿದೆ. ಉದ್ಘಾಟನಾ ಪಂದ್ಯ ಆತಿಥೇಯ ಯುಎಸ್​ಎ ಹಾಗೂ ಕೆನಡಾ (USA and Canada) ನಡುವೆ ನಡೆದರೆ, ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.

ಎ ಗುಂಪಿನಲ್ಲಿ ಟೀಂ ಇಂಡಿಯಾ

ಟೀಂ ಇಂಡಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತವನ್ನು ಹೊರತುಪಡಿಸಿ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಯುಎಸ್​ಎ ಕೂಡ ಈ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 05 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಈ ಪಂದ್ಯದ ನಂತರ, ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಕಪ್‌ನ ಅತಿದೊಡ್ಡ ಪಂದ್ಯ ನಡೆಯಲಿದೆ. ಅಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತನ್ನ ಮೂರನೇ ಗುಂಪು ಹಂತದ ಪಂದ್ಯವನ್ನು ಅಮೆರಿಕ ವಿರುದ್ಧ ಜೂನ್ 12 ರಂದು ನ್ಯೂಯಾರ್ಕ್‌ನಲ್ಲಿ ಮತ್ತು ನಾಲ್ಕನೇ ಲೀಗ್ ಪಂದ್ಯವನ್ನು ಕೆನಡಾ ವಿರುದ್ಧ ಜೂನ್ 15 ರಂದು ಫ್ಲೋರಿಡಾದಲ್ಲಿ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಯುಎಸ್​ಎನಲ್ಲೇ ಆಡಲಿದ್ದು, ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಯುಎಸ್‌ಎನಲ್ಲಿ ಆಡಲಿದೆ.

ಟೀಂ ಇಂಡಿಯಾದ ವೇಳಾಪಟ್ಟಿ (ಗುಂಪು ಹಂತ)

  1. ಜೂನ್ 5 – ಭಾರತ vs ಐರ್ಲೆಂಡ್, ನ್ಯೂಯಾರ್ಕ್
  2. ಜೂನ್ 9- ಭಾರತ vs ಪಾಕಿಸ್ತಾನ, ನ್ಯೂಯಾರ್ಕ್
  3. ಜೂನ್ 12- ಭಾರತ vs ಯುಎಸ್​ಎ, ನ್ಯೂಯಾರ್ಕ್
  4. ಜೂನ್ 15- ಭಾರತ vs ಕೆನಡಾ, ಫ್ಲೋರಿಡಾ

ಯಾವ ಗುಂಪಿನಲ್ಲಿ ಯಾವ ತಂಡವಿದೆ?

  • ಗುಂಪು ಎ- ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್​ಎ.
  • ಗುಂಪು ಬಿ- ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್.
  • ಗುಂಪು ಸಿ- ನ್ಯೂಜಿಲೆಂಡ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡಾ, ಪಿಎನ್​ಜಿ.
  • ಗುಂಪು ಡಿ- ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ನೇಪಾಳ.

ಪಂದ್ಯಾವಳಿಯ ಸ್ವರೂಪ ಹೇಗಿರುತ್ತದೆ?

ಈ ಟೂರ್ನಿಯ ಸ್ವರೂಪದ ಬಗ್ಗೆ ಮಾತನಾಡುವುದಾದರೆ, ಎಲ್ಲಾ ತಂಡಗಳು ಗುಂಪು ಹಂತದಲ್ಲಿ ತಲಾ 4 ಪಂದ್ಯಗಳನ್ನು ಆಡಲಿವೆ. ಇದರ ನಂತರ, ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪುತ್ತವೆ. ಸೂಪರ್ 8 ರ ಈ ನಾಕೌಟ್ ಹಂತದ ನಂತರ, ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ನಂತರ ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಜೂನ್ 26 ಮತ್ತು 27 ರಂದು ನಡೆಯಲಿವೆ. ಜೂನ್ 29 ರಂದು ಫೈನಲ್ ಪಂದ್ಯ ನಡೆಯಲಿದೆ.

Published On - 7:05 pm, Fri, 5 January 24