ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿರುವ 2024ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಸೂಪರ್-8 ಸುತ್ತು ಆರಂಭವಾಗಿದೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಿದ್ದ ದಕ್ಷಿಣ ಆಫ್ರಿಕಾ ತಂಡ (South Africa vs United States) 18 ರನ್‌ಗಳ ಜಯ ಸಾಧಿಸಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಅಮೆರಿಕ ವಿರೋಚಿತ ಸೋಲು ಕಂಡಿತು. ಒಂದು ಹಂತದಲ್ಲಿ ಆಂಡ್ರೆಸ್ ಗೌಸ್ ಹಾಗೂ ಹರ್ಮೀತ್ ಸಿಂಗ್ (Andries Gous, Harmeet Singh) ಬ್ಯಾಟಿಂಗ್ ಮಾಡುತ್ತಿದ್ದಾಗ ಗೆಲುವು ಅಮೆರಿಕದತ್ತ ಸಾಗುವಂತಿತ್ತು.ಆದರೆ 19ನೇ ಓವರ್ನಲ್ಲಿ ಇಡೀ ಪಂದ್ಯದ ಚಿತ್ರಣ ಬದಲಾಯಿತು. ರಬಾಡ (Kagiso Rabada) ಬೌಲ್ ಮಾಡಿದ ಈ ಓವರ್ನಲ್ಲಿ ಹರ್ಮೀತ್ ಸಿಂಗ್ ವಿಕೆಟ್ ಒಪ್ಪಿಸುವ ಮೂಲಕ ಅಮೆರಿಕ ಗೆಲುವಿನ ಕನಸಿಗೆ ನೀರೇರಚಿದರು. ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ಆಂಡ್ರೆಸ್ ಗೌಸ್ 57 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 195 ರನ್‌ಗಳ ಟಾರ್ಗೆಟ್ ನೀಡಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಮೆರಿಕದ ವೇಗಿ ಸೌರಭ್ ನೇತ್ರವಾಲ್ಕರ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಆಫ್ರಿಕನ್ ಆರಂಭಿಕ ಜೋಡಿಯನ್ನು ಮುರಿದರು. ರೀಜಾ ಹೆಂಡ್ರಿಕ್ಸ್ ಕೇವಲ 11 ರನ್ ಗಳಿಸಿ ಔಟಾದರು. ಆದರೆ, ಇದಾದ ಬಳಿಕ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ಏಡನ್ ಮಾರ್ಕ್ರಾಮ್ ಶತಕದ ಜೊತೆಯಾಟ ನಡೆಸಿ ದಕ್ಷಿಣ ಆಫ್ರಿಕಾವನ್ನು ಬಲಿಷ್ಠ ಸ್ಥಿತಿಗೆ ತಂದರು. ಕ್ವಿಂಟನ್ ಡಿ ಕಾಕ್ ಅದ್ಭುತ ಇನ್ನಿಂಗ್ಸ್ ಆಡಿ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಂತಿಮವಾಗಿ ಡಿ ಕಾಕ್ 40 ಎಸೆತಗಳಲ್ಲಿ 74 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಮೆರಿಕದ ಸ್ಪಿನ್ನರ್ ಹರ್ಮೀತ್ ಸಿಂಗ್ ಮೊದಲು ಕ್ವಿಂಟನ್ ಡಿ ಕಾಕ್ ಮತ್ತು ನಂತರ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡುವ ಮೂಲಕ ಆಫ್ರಿಕಾ ರನ್ ವೇಗಕ್ಕೆ ಕಡಿವಾಣ ಹಾಕಿದರು. ಆದರೆ ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ ಔಟಾಗದೆ 36 ಮತ್ತು ಟ್ರಿಸ್ಟಾನ್ ಸ್ಟಬ್ಸ್ ಔಟಾಗದೆ 20 ರನ್ ಗಳಿಸಿ ತಂಡದ ಸ್ಕೋರನ್ನು 194ಕ್ಕೆ ಕೊಂಡೊಯ್ದರು.
The Proteas have prevailed in an humdinger 🇿🇦
Kagiso Rabada’s heroics with the ball help South Africa register their first win in the Super Eight stage 🙌#T20WorldCup | #USAvSA | 📝: https://t.co/szrtS3N6SR pic.twitter.com/N6RLEmhxMR
— ICC (@ICC) June 19, 2024
ಆ ಬಳಿಕ 195 ರನ್‌ಗಳ ಗುರಿ ಬೆನ್ನತ್ತಿದ ಅಮೆರಿಕ ಭರವಸೆಯ ಆರಂಭ ಪಡೆಯಿತು. ಸ್ಟೀವನ್ ಟೇಲರ್ ಮತ್ತು ಆಂಡ್ರೀಸ್ ಗಾಸ್ 33 ರನ್ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ನಂತರ ಅಮೇರಿಕಾ ನಿಯಮಿತ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಸ್ಟೀವನ್ 24, ನಿತೀಶ್ ಕುಮಾರ್ 8, ಆರೋನ್ ಜೋನ್ಸ್ 0, ಕೋರಿ ಆಂಡರ್ಸನ್ 12 ಮತ್ತು ಶಯಾನ್ ಜಹಾಂಗೀರ್ 3 ರನ್ ಗಳಿಸಿ ಔಟಾದರು. ಈ ವೇಳೆಗೆ ತಂಡದ ಸ್ಕೋರ್ 5 ವಿಕೆಟ್‌ಗೆ 76 ಆಗಿತ್ತು. ಆದರೆ ನಂತರ ಆಂಡ್ರೆಸ್ ಗೌಸ್ ಮತ್ತು ಹರ್ಮೀತ್ ಸಿಂಗ್ ಆರನೇ ವಿಕೆಟ್‌ಗೆ 93 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಇವರಿಬ್ಬರೂ ಅಮೆರಿಕ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಆದರೆ ಹರ್ಮೀತ್ 38 ರನ್ ಗಳಿಸಿ ಔಟಾಗಿದ್ದರಿಂದ ಪಂದ್ಯದ ತಿರುವು ಸಿಕ್ಕಿತು. ಕಗಿಸೊ ರಬಾಡ ಕೊನೆಯ ಕ್ಷಣದಲ್ಲಿ ಬಿಗಿ ಬೌಲಿಂಗ್‌ನೊಂದಿಗೆ ಆಟ ಬದಲಾಯಿಸುವ ಪ್ರದರ್ಶನ ನೀಡಿದರು. ರಬಾಡ 4 ಓವರ್ ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 pm, Wed, 19 June 24