ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಆಟಗಾರರಿಗೆ ವೀಸಾ ನಿರಾಕರಣೆ
T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಕೆಲವು ಟೀಮ್ಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರು ಇರುವುದು ಇದೀಗ ಹೊಸ ಸಮಸ್ಯೆಗೆ ಕಾರಣವಾಗಿದೆ. ಅಂದರೆ ಪಾಕ್ ಮೂಲದ ಕ್ರಿಕೆಟಿಗರಿಗೆ ಭಾರತದ ವೀಸಾ ಪಡೆಯುವುದು ಸಮಸ್ಯೆಯಾಗಿ ಮಾರ್ಪಟ್ಟಿದೆ.

ಬಹುನಿರೀಕ್ಷಿತ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದೆ. ಈ ತಂಡಗಳಲ್ಲಿ ಕೆಲ ಟೀಮ್ಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಮುಖ್ಯ ಕಾರಣ ತಮ್ಮ ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರು ಇರುವುದು.
ಭಾರತದಲ್ಲಿ ನಡೆಯಲಿರುವ ಟಿ20 ಪಂದ್ಯಗಳಿಗೆ ಯುಎಸ್ಎ ಆಟಗಾರರು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ನಾಲ್ವರು ಪಾಕಿಸ್ತಾನ್ ಮೂಲದ ಅಮರಿಕನ್ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಪಾಕಿಸ್ತಾನ್ ಮೂಲದ ಯುಎಸ್ಎ ವೇಗಿ ಅಲಿ ಖಾನ್ ಭಾರತಕ್ಕೆ ಪ್ರಯಾಣಿಸಲು ವೀಸಾ ನಿರಾಕರಿಸುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.
ಸಂಕಷ್ಟದಲ್ಲಿ 15 ಕ್ಕೂ ಹೆಚ್ಚು ಆಟಗಾರರು:
ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಹಲವು ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ. ಅದರಲ್ಲೂ ಯುಎಇ ತಂಡದಲ್ಲಿರುವ ಬಹುತೇಕರು ಪಾಕಿಸ್ತಾನ್ ಮೂಲದವರು. ಯುಎಇ ತಂಡದ ನಾಯಕ ಮುಹಮ್ಮದ್ ವಾಸಿಮ್ ಸೇರಿದಂತೆ 7 ಆಟಗಾರರು ಪಾಕಿಸ್ತಾನದಲ್ಲಿ ಜನಿಸಿದವರು. ಹೀಗಾಗಿ ವೀಸಾ ನಿರಾಕರಣೆಯಿಂದ ಯುಎಇ ತಂಡವು ಹೆಚ್ಚಿನ ತೊಂದರೆಯನ್ನು ಎದುರಿಸಲಿದೆ.
ಯುಎಇ ಜೊತೆಗೆ, ಇಂಗ್ಲೆಂಡ್, ಒಮಾನ್, ಇಟಲಿ, ಕೆನಡಾ, ಝಿಂಬಾಬ್ವೆ ಮತ್ತು ನೆದರ್‌ಲೆಂಡ್ಸ್ ತಂಡಗಳಲ್ಲೂ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ. ಅಂದರೆ 15 ಕ್ಕೂ ಹೆಚ್ಚು ಪಾಕಿಸ್ತಾನ್ ಮೂಲದ ಆಟಗಾರರು ಭಾರತಕ್ಕೆ ವೀಸಾ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪರಿಣಾಮ, ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.
ಐಸಿಸಿಯ ಸಹಾಯ ಕೇಳಿದ ಮಂಡಳಿಗಳು:
ಭಾರತದ ವೀಸಾ ಕಾನೂನುಗಳಿಂದಾಗಿ ಬೆದರಿಕೆಗಳನ್ನು ಎದುರಿಸುತ್ತಿರುವ ಕ್ರಿಕೆಟ್ ಮಂಡಳಿಗಳು ಇದೀಗ ಐಸಿಸಿಯ ಸಹಾಯವನ್ನು ಕೋರಿವೆ. ಈ ಎಲ್ಲಾ ತಂಡಗಳ ಆಟಗಾರರಿಗೆ ವೀಸಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಆದರೆ ಉನ್ನತ ಮಟ್ಟದ ಹಸ್ತಕ್ಷೇಪವಿಲ್ಲದೆ ಸಕಾಲಿಕ ಅನುಮೋದನೆ ಅಸಂಭವವಾಗಿದೆ.
ಇದನ್ನೂ ಓದಿ: ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB
ಸಕಾಲಿಕ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ಹಲವಾರು ಪ್ರಮುಖ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಪಂದ್ಯಾವಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸರಳವಾಗಿ ಹೇಳುವುದಾದರೆ, ಭಾರತದ ವೀಸಾ ಕಾನೂನು ಇದೀಗ ಐಸಿಸಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದು ಕೂಡ ಅನಿವಾರ್ಯವಾಗಿದೆ.
