T20 Cricket: ಕೇವಲ 26 ರನ್​ಗಳಿಗೆ ಆಲೌಟ್​ ಆದ ಚೀನಾ..!

| Updated By: ಝಾಹಿರ್ ಯೂಸುಫ್

Updated on: Jul 27, 2023 | 8:47 PM

T20 World Cup Asia Qualifier: ಮಲೇಷ್ಯಾದ ಕೌಲಾಲಂಪುರ್​ನಲ್ಲಿ ಮುಂಬರುವ ಟಿ20 ವಿಶ್ವಕಪ್​​ಗಾಗಿ ಏಷ್ಯನ್ ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಚೀನಾ ಭಾರೀ ಮುಖಭಂಗಕ್ಕೆ ಒಳಗಾಗಿದೆ.

T20 Cricket: ಕೇವಲ 26 ರನ್​ಗಳಿಗೆ ಆಲೌಟ್​ ಆದ ಚೀನಾ..!
ಸಾಂದರ್ಭಿಕ ಚಿತ್ರ
Follow us on

T20 World Cup Asia Qualifier: ಕೌಲಾಲಂಪುರ್​ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್​ನ 3ನೇ ಪಂದ್ಯದಲ್ಲಿ ಚೀನಾ ತಂಡವು ಕೇವಲ 26 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಥೈಲ್ಯಾಂಡ್ ತಂಡ ಚೀನಾವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಚೀನಾ ತಂಡವು 1 ರನ್​ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ವಾಂಗ್ ಲಿಯುಯಾಂಗ್ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಬಂದ ಝುವಾಂಗ್ ಝೆಲಿನ್ ಕೂಡ ಸೊನ್ನೆ ಸುತ್ತಿ ಹಿಂತಿರುಗಿದರು.

ಮತ್ತೊಂದೆಡೆ ವೀ ಗುಲೆಯಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯಾವುದೇ ಬ್ಯಾಟರ್ ಒಂದೇ ಒಂದು ಫೋರ್ ಬಾರಿಸಿಲ್ಲ ಎಂಬುದು ವಿಶೇಷ. ಅದರಲ್ಲೂ ಕೆಳ ಕ್ರಮಾಂಕದ ಐವರು ಬ್ಯಾಕ್ ಟು ಬ್ಯಾಕ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಹಾಗೆಯೇ ಒಟ್ಟು 7 ಮಂದಿ ಖಾತೆ ತೆರೆಯದೇ ಪೆವಿಲಿಯನ್​ಗೆ ಹಿಂತಿರುಗಿದ್ದರು.

ಇಲ್ಲಿ ಮತ್ತೊಂದು ಅಚ್ಚರಿಯೆಂದರೆ ಚೀನಾ ಬ್ಯಾಟ್ಸ್​ಮನ್​ಗಳು ಒಟ್ಟುಗೂಡಿ ಕಲೆಹಾಕಿದ್ದು ಕೇವಲ 17 ರನ್​ ಮಾತ್ರ. ಅಂದರೆ ಥೈಲ್ಯಾಂಡ್ ಬೌಲರ್​ಗಳು ಹೆಚ್ಚುವರಿಯಾಗಿ 8 ವೈಡ್ ಹಾಗೂ 1 ನೋಬಾಲ್​ನೊಂದಿಗೆ 9 ರನ್ ನೀಡಿದ್ದರು. ಇದು ಚೀನಾ ತಂಡದ ಆರಂಭಿಕ ಆಟಗಾರ ವೀ ಗುಲೆಯಿ (8) ಕಲೆಹಾಕಿದ ಗರಿಷ್ಠ ಸ್ಕೋರ್​ಗಿಂತ ಹೆಚ್ಚು ಎಂಬುದು ವಿಶೇಷ.

ಇನ್ನು ಈ ಪಂದ್ಯದಲ್ಲಿ 27 ರನ್​ಗಳ ಸುಲಭ ಗುರಿ ಪಡೆದ ಥೈಲ್ಯಾಂಡ್ ತಂಡವು 4.1 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

23 ರನ್​ಗೆ ಆಲೌಟ್ ಆಗಿದ್ದ ಚೀನಾ:

ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಚೀನಾ ತಂಡವು ಮಲೇಷ್ಯಾ ವಿರುದ್ಧ ಕೇವಲ 23 ರನ್​ಗಳಿಗೆ ಆಲೌಟ್ ಆಗಿತ್ತು. ಇದೇ ಪಂದ್ಯದಲ್ಲಿ ಕೇವಲ 8 ರನ್​ ನೀಡಿ 7 ವಿಕೆಟ್ ಕಬಳಿಸಿ ಮಲೇಷ್ಯಾ ವೇಗಿ ಸೈಝ್ರುಲ್ ಇದ್ರಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ತನ್ನ 2ನೇ ಪಂದ್ಯದಲ್ಲೂ ಚೀನಾ 26 ರನ್​ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.