T20 World Cup Qualifier 2023: ಕೊನೆಗೂ ಗೆದ್ದು ಬೀಗಿದ ಚೀನಾ ತಂಡ

| Updated By: ಝಾಹಿರ್ ಯೂಸುಫ್

Updated on: Jul 31, 2023 | 9:30 PM

T20 World Cup Qualifier 2023: ಟಿ20 ವಿಶ್ವಕಪ್ ಏಷ್ಯಾ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇದು ಚೀನಾ ತಂಡದ ಮೊದಲ ಗೆಲುವಾಗಿದೆ. ಇದಕ್ಕೂ ಮುನ್ನ ನಡೆದ ಮೂರು ಪಂದ್ಯಗಳಲ್ಲಿ ಚೀನಾ ತಂಡವು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದರು.

T20 World Cup Qualifier 2023: ಕೊನೆಗೂ ಗೆದ್ದು ಬೀಗಿದ ಚೀನಾ ತಂಡ
ಸಾಂದರ್ಭಿಕ ಚಿತ್ರ
Follow us on

T20 World Cup Qualifier 2023: ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್-ಬಿ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಚೀನಾ ತಂಡವು ತನ್ನ ಮೊದಲ ಗೆಲುವು ದಾಖಲಿಸಿದೆ. ಕೌಲಾಲಂಪುರದ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಚೀನಾ ತಂಡವು ಮ್ಯಾನ್ಮಾರ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮ್ಯಾನ್ಮಾರ್ ತಂಡವು ಕೇವಲ 30 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ 17 ರನ್​ಗಳ ಕೊಡುಗೆ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ನಾಯಿಂಗ್ ತುನ್ ತಂಡಕ್ಕೆ ಆಸರೆಯಾದರು.

ಆದರೆ ಮತ್ತೊಂದೆಡೆ ಚೀನಾ ಬೌಲರ್​ಗಳು ವಿಕೆಟ್​ಗಳನ್ನು ಉರುಳಿಸುತ್ತಾ ಸಾಗಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಮ್ಯಾನ್ಮಾರ್ ತಂಡವು 8 ವಿಕೆಟ್ ನಷ್ಟದೊಂದಿಗೆ ಕೇವಲ 77 ರನ್​ಗಳಿಸಲಷ್ಟೇ ಶಕ್ತರಾದರು.

78 ರನ್​ಗಳ ಸುಲಭ ಗುರಿ ಪಡೆದ ಚೀನಾ ತಂಡದ ಪರ ಆರಂಭಿಕ ಆಟಗಾರ ಝುವಾಂಗ್ ಝೆಲಿನ್ 33 ರನ್​ಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇನ್ನು ವಾಂಗ್ ಲಿಯುಯಾಂಗ್ 18 ರನ್​ಗಳ ಕೊಡುಗೆ ನೀಡಿದರೆ, ಚೆನ್ ಝೂಯುಯೆ ಅಜೇಯ 13 ರನ್​ಗಳಿಸಿ ತಂಡವನ್ನು 17.2 ಓವರ್​ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಚೀನಾ ತಂಡವು 5 ವಿಕೆಟ್​ಗಳ ಜಯ ಸಾಧಿಸಿತು.

ಚೀನಾ ತಂಡಕ್ಕೆ ಮೊದಲ ಗೆಲುವು:

ಟಿ20 ವಿಶ್ವಕಪ್ ಏಷ್ಯಾ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇದು ಚೀನಾ ತಂಡದ ಮೊದಲ ಗೆಲುವಾಗಿದೆ. ಇದಕ್ಕೂ ಮುನ್ನ ನಡೆದ ಮೂರು ಪಂದ್ಯಗಳಲ್ಲಿ ಚೀನಾ ತಂಡವು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದರು.

ಇದನ್ನೂ ಓದಿ: Team India: ಒಟ್ಟು 47 ಪ್ಲೇಯರ್ಸ್​: ಟೀಮ್ ಇಂಡಿಯಾದಿಂದ 32 ಆಟಗಾರರು ಔಟ್..!

ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 23 ರನ್​ಗಳಿಗೆ ಆಲೌಟ್ ಆಗಿದ್ದ ಚೀನಾ, ಆ ಬಳಿಕ ಥೈಲ್ಯಾಂಡ್​ ವಿರುದ್ಧ 26 ರನ್​ಗಳಿಗೆ ಮುಗ್ಗರಿಸಿದ್ದರು. ಇನ್ನು ಭೂತಾನ್ ವಿರುದ್ಧ 3ನೇ ಪಂದ್ಯದಲ್ಲಿ 48 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ 78 ರನ್​ಗಳನ್ನು ಚೇಸ್ ಮಾಡುವ ಮೂಲಕ ಚೀನಾ ತಂಡವು ತನ್ನ ಮೊದಲ ಗೆಲುವು ಸಾಧಿಸಿದೆ.

 

Published On - 9:30 pm, Mon, 31 July 23