
2025 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಏಷ್ಯಾಕಪ್ (Asia Cup) ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಭಾರತ ಏಷ್ಯಾಕಪ್ ಗೆದ್ದಿದ್ದರೂ ಇದುವರೆಗೆ ಟ್ರೋಫಿಯನ್ನು ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ವಾಸ್ತವವಾಗಿ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಅವರ ಕೈಯಿಂದ ಟ್ರೋಫಿಯನ್ನು ಪಡೆಯಲು ಭಾರತ ತಂಡ ನಿರಾಕರಿಸಿತ್ತು. ಅಂದಿನಿಂದ, ಈ ಟ್ರೋಫಿ ಮೊಹ್ಸಿನ್ ನಖ್ವಿ ಅವರ ಬಳಿಯೇ ಇದೆ. ಈ ಘಟನೆ ನಡೆದು ಈಗ ಮೂರು ತಿಂಗಳುಗಳು ಕಳೆದಿವೆ. ಆದಾಗ್ಯೂ ಭಾರತ ತಂಡಕ್ಕೆ ಟ್ರೋಫಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿ ಇರುವ ತನಕ ಭಾರತ ತಂಡದ ಕೈಗೆ ಏಷ್ಯಾಕಪ್ ಟ್ರೋಫಿ ಸಿಗುವ ಸಾಧ್ಯತೆಗಳಿಲ್ಲ. ಆರಂಭದಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಎಸಿಸಿ ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿತ್ತು. ಆ ಬಳಿಕ ಮೊಹ್ಸಿನ್ ನಖ್ವಿ ಅವರೇ ಈ ಟ್ರೋಫಿಯನ್ನು ಬೇರೆಯವರಿಗೆ ತಿಳಿಯದಂತೆ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ಏಷ್ಯಾಕಪ್ ಟ್ರೋಫಿ ಎಲ್ಲಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ನಖ್ವಿ ಅವರನ್ನು ಪ್ರಶ್ನೆ ಮಾಡಿದಾಗಲೂ ಅವರು ಯಾವುದೇ ಸ್ಪಷ್ಟ ಉತ್ತರವನ್ನು ನೀಡಿಲ್ಲ.
ಆದರೆ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಖ್ವಿ ಅವರ ಬಳಿ ಏಷ್ಯಾಕಪ್ ಟ್ರೋಫಿಯ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ವಾಸ್ತವವಾಗಿ ಕರಾಚಿಯಲ್ಲಿ ನಡೆದ ಚಾನೆಲ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನಖ್ವಿಗೆ ಈ ಪ್ರಶ್ನೆಯನ್ನು ಕೇಳಲಾಯಿತು. ಪತ್ರಕರ್ತರು ಮೊಹ್ಸಿನ್ ನಖ್ವಿ ಅವರ ಬಳಿ ಏಷ್ಯಾಕಪ್ ಟ್ರೋಫಿಯನ್ನು ಎಲ್ಲಿ ಇರಿಸಲಾಗಿದೆ? ಅದನ್ನು ಭಾರತ ತಂಡಕ್ಕೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಿಂದ ನಖ್ವಿ ಸ್ವಲ್ಪ ಗೊಂದಲಕ್ಕೊಳಗಾದರು. ಆದರೆ ಆ ನಂತರ ನೇರ ಉತ್ತರ ನೀಡಿದ ನಖ್ವಿ, ‘ಟ್ರೋಫಿ ಎಲ್ಲಿದ್ದರೂ ಅದು ಸುರಕ್ಷಿತವಾಗಿದೆ’ ಎಂದು ಉತ್ತರಿಸಿದ್ದಾರೆ. ಆದರೆ ಟ್ರೋಫಿಯನ್ನು ಭಾರತಕ್ಕೆ ಯಾವಾಗ ನೀಡಲಾಗುತ್ತದೆ ಎಂಬ ಪ್ರಶ್ನೆಗೆ ಮಾತ್ರ ಅವರ ಉತ್ತರ ಮೌನವಾಗಿತ್ತು.
ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿಯೂ ಏಷ್ಯಾಕಪ್ ಟ್ರೋಫಿಯ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ, ಬಿಸಿಸಿಐ, ಏಷ್ಯಾಕಪ್ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ ಎಂತಲೂ ವರದಿಯಾಗಿದೆ. ಸುದ್ದಿಯ ಪ್ರಕಾರ, ಐಸಿಸಿ ಮಂಡಳಿ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿಯ ಬಗ್ಗೆ ಯಾವುದೇ ಪ್ರಸ್ತಾಪ ನಡೆದಿಲ್ಲ. ಆದ್ದರಿಂದ, ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದಾಗ್ಯೂ ಈ ಟ್ರೋಫಿಯನ್ನು ಭಾರತ ತಂಡಕ್ಕೆ ಯಾವಾಗ ನೀಡಲಾಗುತ್ತದೆ ಎಂಬುದಕ್ಕೆ ಮೊಹ್ಸಿನ್ ನಖ್ವಿ ಮಾತ್ರ ಉತ್ತರಿಸಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ