ಪಾಕಿಸ್ತಾನ ಹಾಗೂ ಯುಎಇ ಆತಿಥ್ಯದಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಈಗಾಗಲೇ ತನ್ನ ಸಿದ್ಧತೆಯನ್ನು ಆರಂಭಿಸಿದೆ. ಈ ಐಸಿಸಿ ಟೂರ್ನಿಯ ತಯಾರಿಯ ಭಾಗವಾಗಿ ಇನ್ನು ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಕಾಲಿಡಲಿದೆ. ಆದರೆ ಈ ಸರಣಿ ಮಾತ್ರವಲ್ಲದೆ, ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ದುಬೈನ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಅಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲಿದೆ ಎಂದು ವರದಿಯಾಗಿದೆ
ಭಾರತ ತಂಡ ದುಬೈ ತಲುಪಿದ ಬಳಿಕ ಅಭ್ಯಾಸ ಪಂದ್ಯವನ್ನು ಆಡಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ಪಂದ್ಯ ಯಾವಾಗ ಮತ್ತು ಯಾವ ತಂಡದೊಂದಿಗೆ ನಡೆಯಲಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಭಾರತ ಸೇರಿದಂತೆ ಎಲ್ಲಾ ತಂಡಗಳಿಗೆ ಐಸಿಸಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸುತ್ತಿದೆಯೇ ಅಥವಾ ಟೀಂ ಇಂಡಿಯಾದ ಸಿದ್ಧತೆಗಳನ್ನು ಸಂಪೂರ್ಣವಾಗಿ ಮಾಡಲು ಬಿಸಿಸಿಐ ತನ್ನದೇ ಆದ ಮಟ್ಟದಲ್ಲಿ ವ್ಯವಸ್ಥೆಗಳನ್ನು ಮಾಡುತ್ತಿದೆಯೇ ಎಂಬುದು ಸಹ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಪಂದ್ಯದ ಮೂಲಕ ಟೀಂ ಇಂಡಿಯಾ ಕೌಶಲ್ಯದ ಮಟ್ಟದಲ್ಲಿ ಮಾತ್ರವಲ್ಲದೆ ಪರಿಸ್ಥಿತಿಯ ಮಟ್ಟಕ್ಕೂ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ.
ಭಾರತ-ಇಂಗ್ಲೆಂಡ್ ನಡುವಿನ ಸರಣಿಯ ಅಂತ್ಯ ಮತ್ತು ಚಾಂಪಿಯನ್ಸ್ ಟ್ರೋಫಿ ಆರಂಭದ ನಡುವೆ ಅತ್ಯಂತ ಕಡಿಮೆ ಸಮಯ ಇರುವುದರಿಂದ ಟೀಂ ಇಂಡಿಯಾ ಕೇವಲ ಒಂದು ಅಭ್ಯಾಸ ಪಂದ್ಯವನ್ನಾಡಬಹುದು ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಪರೀಕ್ಷಿಸಿಕೊಳ್ಳಬೇಕಾಗಿದೆ. ಈ ಸರಣಿಯು ಫೆಬ್ರವರಿ 6 ರಿಂದ ಆರಂಭವಾಗಲಿದ್ದು, ಸರಣಿಯ ಕೊನೆಯ ಏಕದಿನ ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯ ವಡೋದರಾದಲ್ಲಿ, ಎರಡನೇ ಪಂದ್ಯ ಕಟಕ್‌ನಲ್ಲಿ ಮತ್ತು ಮೂರನೇ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಾದ ಬಳಿಕವಷ್ಟೇ ಟೀಂ ಇಂಡಿಯಾ ದುಬೈಗೆ ತೆರಳಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆಬ್ರವರಿ 20 ರಂದು ಆಡಲಿದೆ. ಇದಾದ ಬಳಿಕ ಫೆಬ್ರವರಿ 23 ರಂದು ದುಬೈನಲ್ಲಿ ಅತ್ಯಂತ ಮಹತ್ವದ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯವನ್ನು ನಡೆಯಲಿದೆ. ಭಾರತ ತಂಡ ಸೆಮಿಫೈನಲ್ ಮತ್ತು ನಂತರ ಫೈನಲ್ ತಲುಪಿದರೆ, ಈ ಎರಡೂ ಪಂದ್ಯಗಳು ದುಬೈನಲ್ಲೇ ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ