ಟೆಸ್ಟ್ ಚಾಂಪಿಯನ್​ಶಿಪ್, ವಿಶ್ವಕಪ್, ಏಷ್ಯಾಕಪ್; 2023ರಲ್ಲಿ ಟೀಂ ಇಂಡಿಯಾಕ್ಕಿರುವ 6 ಸವಾಲುಗಳಿವು

| Updated By: ಪೃಥ್ವಿಶಂಕರ

Updated on: Dec 26, 2022 | 3:46 PM

Team India In 2023: ಮುಂದಿನ ವರ್ಷ ಅಂದರೆ 2023ರಲ್ಲಿ ಎರಡು ಪ್ರಮುಖ ಐಸಿಸಿ ಈವೆಂಟ್​ಗಳು ನಡೆಯಲಿವೆ. ಇದರೊಂದಿಗೆ ಏಷ್ಯಾಕಪ್ ಕೂಡ ನಡೆಯಲಿದೆ. ಹೀಗಾಗಿ ಈ ಸವಾಲುಗಳನ್ನು ಟೀಂ ಇಂಡಿಯಾ ಹೇಗೆ ಮೆಟ್ಟಿ ನಿಂತು ಚಾಂಪಿಯನ್ ಆಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಟೆಸ್ಟ್ ಚಾಂಪಿಯನ್​ಶಿಪ್, ವಿಶ್ವಕಪ್, ಏಷ್ಯಾಕಪ್; 2023ರಲ್ಲಿ ಟೀಂ ಇಂಡಿಯಾಕ್ಕಿರುವ 6 ಸವಾಲುಗಳಿವು
ಟೀಂ ಇಂಡಿಯಾ
Follow us on

2022 ಭಾರತ ಕ್ರಿಕೆಟ್ ತಂಡಕ್ಕೆ (Indian cricket team) ಸ್ಮರಣೀಯವಾಗಿರಲಿಲ್ಲ. ಮೊದಲು ಏಷ್ಯಾಕಪ್​ (Asia Cup) ಗೆಲ್ಲುವಲ್ಲಿ ವಿಫಲವಾಗಿದ್ದ ಟೀಂ ಇಂಡಿಯಾ, ಬಳಿಕ ಟಿ20 ವಿಶ್ವಕಪ್​ನಿಂದಲೂ (T20 World Cup) ಖಾಲಿ ಕೈಯಲ್ಲಿ ವಾಪಸ್ಸಾಗಿತ್ತು. ಆದರೆ ವರ್ಷದ ಕೊನೆಯ ಸರಣಿಯನ್ನೂ ಗೆಲುವಿನೊಂದಿಗೆ ಮುಗಿಸಿರು ಟೀಂ ಇಂಡಿಯಾ ಈ ವರ್ಷವನ್ನು ಶುಭಾಂತ್ಯಗೊಳಿಸಿದೆ. ಈಗ 2023ರ ವೇಳಾಪಟ್ಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಟೀಂ ಇಂಡಿಯಾಕ್ಕೆ ಸಾಲು ಸಾಲು ಸವಾಲುಗಳೇ ಎದುರಾಗಿವೆ. ಮುಂದಿನ ವರ್ಷ ಅಂದರೆ 2023ರಲ್ಲಿ ಎರಡು ಪ್ರಮುಖ ಐಸಿಸಿ (ICC) ಈವೆಂಟ್​ಗಳು ನಡೆಯಲಿವೆ. ಇದರೊಂದಿಗೆ ಏಷ್ಯಾಕಪ್ ಕೂಡ ನಡೆಯಲಿದೆ. ಹೀಗಾಗಿ ಈ ಸವಾಲುಗಳನ್ನು ಟೀಂ ಇಂಡಿಯಾ (Team India) ಹೇಗೆ ಮೆಟ್ಟಿ ನಿಂತು ಚಾಂಪಿಯನ್ ಆಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

2023, ಕೋಚ್ ರಾಹುಲ್ ದ್ರಾವಿಡ್‌ ಹಾಗೂ ನಾಯಕ ರೋಹಿತ್ ಶರ್ಮಾಗೆ ಸವಾಲಿನ ವರ್ಷವಾಗಿದೆ. 2023ರಲ್ಲಿ ಟೀಂ ಇಂಡಿಯಾದಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಕಾಣುವ ಸಾಧ್ಯತೆಗಳಿವೆ. ಅದರಲ್ಲೂ ಹೊಸ ವರ್ಷದಲ್ಲಿ, ಟೀಂ ಇಂಡಿಯಾ ಪ್ರಮುಖ 6 ಸವಾಲುಗಳನ್ನು ಎದುರಿಸಬೇಕಾಗಿದೆ. ಈ 6 ಸವಾಲುಗಳನ್ನು ಎದುರಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ ವಿಶ್ವ ಕ್ರಿಕೆಟ್‌ನಲ್ಲಿ ಅದರ ಕುಟುಕು ಖಂಡಿತ.

ಮೊದಲನೇ ಸವಾಲು – ಯುವ ಟಿ20 ತಂಡ

2007 ರಿಂದ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದನ್ನು ಬಿಟ್ಟರೆ, ಉಳಿದ ಆವೃತ್ತಿಗಳಲ್ಲಿ ಸತತ ವೈಫಲ್ಯಗಳನ್ನು ಅನುಭವಿಸಿದೆ. ಅದರಲ್ಲೂ 2021 ಮತ್ತು 2022 ರಲ್ಲಿ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ 2023ರಲ್ಲಿ ಟೀಂ ಇಂಡಿಯಾದ ಟಿ20 ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಇದಕ್ಕಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಟಿ20 ತಂಡಕ್ಕೆ ಹೊಸ ಕೋಚ್, ಟಿ20 ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡುವುದರೊಂದಿಗೆ ಹಲವು ಹಿರಿಯ ಆಟಗಾರರಿಗೆ ಟಿ20 ತಂಡದಿಂದ ಹೊರಹೋಗುವ ಹಾದಿಯನ್ನು ಸಹ ತೋರಿಸಬೇಕಾಗಿದೆ. ಅಲ್ಲದೆ ಮುಂದಿನ ಟಿ20 ವಿಶ್ವಕಪ್​ಗೆ ಯುವ ಟೀಂ ಇಂಡಿಯಾವನ್ನು ಕಟ್ಟುವ ಜವಬ್ದಾರಿ ಕ್ರಿಕೆಟ್​ ಬಿಗ್​ಬಾಸ್​ಗಳ ಮುಂದಿದೆ.

Year Ender 2022: ಭಾರತೀಯರದ್ದೇ ದರ್ಬಾರು; ಈ ವರ್ಷ ಟಿ20 ಕ್ರಿಕೆಟ್​ನಲ್ಲಿ ಈ ಐವರೇ ರನ್​ ಸರದಾರರು

ಎರಡನೇ ಸವಾಲು- ಬಾರ್ಡರ್ ಗವಾಸ್ಕರ್ ಟ್ರೋಫಿ

ಆಸ್ಟ್ರೇಲಿಯಾ ತಂಡ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತದ ನೆಲದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲು ಭಾರತ ತಂಡಕ್ಕೆ ಈ ಸರಣಿ ಮುಖ್ಯವಾಗಿದೆ. ಇದರೊಂದಿಗೆ ದೇಶಿಯ ದಾಖಲೆಯನ್ನೂ ಕಾಯ್ದುಕೊಳ್ಳುವ ಒತ್ತಡ ಭಾರತದ ಮೇಲಿದೆ. 2004 ರಿಂದ ಆಸ್ಟ್ರೇಲಿಯಾ ಭಾರತದಲ್ಲಿ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಈಗಾಗಲೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಭಾರತ ಈ ಸರಣಿ ಗೆಲ್ಲಲು ತನ್ನ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.

ಮೂರನೇ ಸವಾಲು – ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸೋತು ಚಾಂಪಿಯನ್ ಪಟ್ಟವನ್ನು ಮಿಸ್ ಮಾಡಿಕೊಂಡಿತ್ತು. ಈಗ 2023 ರಲ್ಲಿ ಎರಡನೇ ಬಾರಿಗೆ WTC ಫೈನಲ್ಸ್ ನಡೆಯಲಿದ್ದು, ಈ WTC ಫೈನಲ್‌ನಲ್ಲಿ ಸ್ಥಾನ ಪಡೆಯುವುದು ಟೀಮ್ ಇಂಡಿಯಾದ ಮೊದಲ ಗುರಿಯಾಗಿದೆ. ಟೀಮ್ ಇಂಡಿಯಾ ಪ್ರಸ್ತುತ ಈ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಅಲ್ಲದೆ ಈ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಟೀಂ ಇಂಡಿಯಾ, ಹೊಸ ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲ್ಲಿರುವ 4 ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಸರಣಿಯನ್ನು ಗೆಲ್ಲಲೇಬೇಕಾಗಿದೆ. ಅಲ್ಲದೆ ಟೀಂ ಇಂಡಿಯಾ ಈ ಟ್ರೋಫಿಯನ್ನು ಗೆದ್ದರೆ, ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನಾಲ್ಕನೇ ಸವಾಲು – ವಿಶ್ವಕಪ್

ಟೀಂ ಇಂಡಿಯಾ ಮುಂದಿರುವ ಮೂರನೇ ಸವಾಲು ತುಂಬಾ ದೊಡ್ಡದಾಗಿದೆ. ಈ ಬಾರಿಯ ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿದ್ದು, ಟೀಂ ಇಂಡಿಯಾ ಚಾಂಪಿಯನ್ ಆಗುವ ನಿರೀಕ್ಷೆ ಹೆಚ್ಚಿದೆ. ಭಾರತ ಕೊನೆಯ ಬಾರಿಗೆ 2011 ರಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. ಅಲ್ಲದೆ 2013ರ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಆದ್ದರಿಂದ ಈ ಬಾರಿ ವಿಶ್ವಕಪ್‌ ಗೆಲ್ಲುವ ಗುರಿ ಭಾರತದ ಮುಂದಿದೆ.

ಐದನೇ ಸವಾಲು – ಏಷ್ಯಾಕಪ್

ಟೀಂ ಇಂಡಿಯಾಗೆ ನಾಲ್ಕನೇ ಸವಾಲು ಏಷ್ಯಾಕಪ್. ಕಳೆದ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಬಹಳ ಮುಜುಗರ ತಂದಿತ್ತು. ತಂಡಕ್ಕೆ ಫೈನಲ್‌ಗೂ ತಲುಪಲು ಸಾಧ್ಯವಾಗಲಿಲ್ಲ. ಈ ಬಾರಿಯ ಏಷ್ಯಾಕಪ್ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ಈ ಬಾರಿ ಪಾಕಿಸ್ತಾನದೊಂದಿಗೆ ಸಮಬಲ ಸಾಧಿಸುವ ಮೂಲಕ ದಾಖಲೆಯ 8ನೇ ಬಾರಿ ಈ ಟೂರ್ನಿಯನ್ನು ಗೆಲ್ಲುವುದು ಟೀಂ ಇಂಡಿಯಾದ ಉದ್ದೇಶವಾಗಿದೆ.

ಆರನೇ ಸವಾಲು- ಹಿರಿಯ ಆಟಗಾರರ ಭವಿಷ್ಯ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಈಗಾಗಲೇ 30 ವರ್ಷ ದಾಟಿದ್ದಾರೆ. ಕೊಹ್ಲಿ-ರೋಹಿತ್, ಭುವಿ ಮತ್ತು ಶಮಿ ಸತತ ಎರಡು ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ. ಅದೇ ಸಮಯದಲ್ಲಿ, ರವೀಂದ್ರ ಜಡೇಜಾ ಗಾಯದ ಕಾರಣ 2022 ರ ಪಂದ್ಯಾವಳಿಯಿಂದ ಹೊರಗುಳಿದಿದ್ದರು. ಉಪನಾಯಕನಾಗಿ ಕೆಎಲ್ ರಾಹುಲ್ ಅಗ್ರ ಕ್ರಮಾಂಕದಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಅದೇ ಸಮಯದಲ್ಲಿ, ಅಶ್ವಿನ್ ಮತ್ತು ದಿನೇಶ್ ಕಾರ್ತಿಕ್ ಇನ್ನೂ ಟಿ20 ಕ್ರಿಕೆಟ್​ನಿಂದ ನಿವೃತ್ತಿಯಾಗಿಲ್ಲ. ಹೀಗಾಗಿ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಬಿಸಿಸಿಐ ಹೊಸ ವರ್ಷದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 26 December 22