
2023ರ ಏಕದಿನ ವಿಶ್ವಕಪ್‌ನ (ICC World Cup 2023) ಫೈನಲ್‌ನಲ್ಲಿ ಸ್ಥಾನ ಪಡೆಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಭಾರತ (India Vs New Zealand) ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ತಂಡ ಟ್ರೋಫಿಯಿಂದ ಒಂದು ಹೆಜ್ಜೆ ದೂರದಲ್ಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ (Team India) ಇದುವರೆಗೆ ಎಷ್ಟು ಬಾರಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದೆ? ಮತ್ತು ಎಷ್ಟು ಪಂದ್ಯಗಳನ್ನು ಗೆದ್ದಿದೆ ಎಂಬುದನ್ನು ಒಮ್ಮೆ ಗಮನಿಸೋಣ.
ಟೀಂ ಇಂಡಿಯಾ ಇದುವರೆಗೆ 3 ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ತಂಡ ಎರಡು ಬಾರಿ ಟ್ರೋಫಿ ವಶಪಡಿಸಿಕೊಂಡಿದ್ದು, ಒಮ್ಮೆ ಮಾತ್ರ ಸೋಲು ಕಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇದೀಗ ನಾಲ್ಕನೇ ಬಾರಿಗೆ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವನ್ನಾಡಲಿದೆ. ಕಪಿಲ್ ದೇವ್, ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಇದುವರೆಗೆ ಏಕದಿನ ವಿಶ್ವಕಪ್‌ನ ಅಂತಿಮ ಪಂದ್ಯವನ್ನು ಆಡಿದೆ.
ಸೌರವ್ ಗಂಗೂಲಿ ಅವರ 20 ವರ್ಷಗಳ ಹಳೆಯ ದಾಖಲೆ ಮುರಿದ ರೋಹಿತ್..!
1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಏಕದಿನ ವಿಶ್ವಕಪ್ ಗೆದ್ದಿತ್ತು. ಈ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ವೆಸ್ಟ್ ಇಂಡೀಸ್ಗೆ 183 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಇಡೀ ವೆಸ್ಟ್ ಇಂಡೀಸ್ ತಂಡ 140 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಈ ಪಂದ್ಯವನ್ನು ಟೀಂ ಇಂಡಿಯಾ 43 ರನ್‌ಗಳಿಂದ ಗೆದ್ದುಕೊಂಡಿತು.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್‌ನ ಎರಡನೇ ಫೈನಲ್ ಪಂದ್ಯವನ್ನು ಆಡಿತ್ತು. ಆದರೆ ಈ ಪಂದ್ಯವನ್ನು ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 359 ರನ್ ಕಲೆಹಾಕಿತು. ಆದರೆ ಈ ದೊಡ್ಡ ಗುರಿ ಬೆನ್ನತ್ತಿದ ಟೀಂ ಇಂಡಿಯಾ 234 ರನ್‌ಗಳಿಗೆ ಆಲೌಟ್ ಆಗಿದ್ದು, 125 ರನ್‌ಗಳಿಂದ ಸೋಲನುಭವಿಸಬೇಕಾಯಿತು.
2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಏಕದಿನ ವಿಶ್ವಕಪ್‌ನಲ್ಲಿ ಮೂರನೇ ಫೈನಲ್ ಆಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಭಾರತ ತಂಡಕ್ಕೆ ಗೆಲ್ಲಲು 275 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿತು. ಈ ಗೆಲುವಿನೊಂದಿಗೆ ಭಾರತ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. ಇದೀಗ ಟೀಂ ಇಂಡಿಯಾ ಮತ್ತೊಮ್ಮೆ ಫೈನಲ್‌ನಲ್ಲಿದೆ ಮತ್ತು ಟ್ರೋಫಿ ಗೆಲ್ಲುವ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Thu, 16 November 23