ಮಧ್ಯಪ್ರದೇಶದ ವೇಗದ ಬೌಲರ್ ಈಶ್ವರ್ ಪಾಂಡೆ (Ishwar Pandey )ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ದೇಶೀಯ ಅಂಗಳದಲ್ಲಿ ಮಿಂಚುತ್ತಿದ್ದ ಈಶ್ವರ್ಗೆ ವರ್ಷಗಳ ಹಿಂದೆಯೇ ಟೀಮ್ ಇಂಡಿಯಾದ ಬಾಗಿಲು ತೆರೆದಿತ್ತು. ಆದರೆ ಆ ಅದೃಷ್ಟ ಆ ಬಳಿಕ ದುರಾದೃಷ್ಟವಾಗಿದ್ದು ಮಾತ್ರ ವಿಪರ್ಯಾಸ. ಅಂದರೆ ಟೀಮ್ ಇಂಡಿಯಾ ಪರ ಆಯ್ಕೆಯಾಗಿದ್ದರೂ ಒಂದೇ ಒಂದು ಪಂದ್ಯವಾಡುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಇದೀಗ ತಮ್ಮ 33ನೇ ವಯಸ್ಸಿನಲ್ಲೇ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ದೇಶೀಯ ಅಂಗಳದಲ್ಲಿ ಅತ್ಯುತ್ತಮ ಬಲಗೈ ವೇಗದ ಬೌಲರ್ ಆಗಿ ಕಾಣಿಸಿಕೊಂಡಿದ್ದ ಈಶ್ವರ್ ಪಾಂಡೆ, 75 ಪ್ರಥಮ ದರ್ಜೆ ಪಂದ್ಯಗಳಲ್ಲಿ 263 ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಲಿಸ್ಟ್ ಎ ನಲ್ಲಿ 63 ಮತ್ತು ಟಿ20 ಕ್ರಿಕೆಟ್‌ನಲ್ಲಿ 71 ವಿಕೆಟ್ ಪಡೆದು ಮಿಂಚಿದ್ದರು. ಪರಿಣಾಮ 2014 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಈಶ್ವರ್ ಪಾಂಡೆ ಆಯ್ಕೆಯಾಗಿದ್ದರು. ಆದರೆ ಕಿವೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಕಣಕ್ಕಿಳಿಯಲು ಮಾತ್ರ ಅವಕಾಶ ಸಿಕ್ಕಿರಲಿಲ್ಲ.
2013 ರಲ್ಲಿ ಪುಣೆ ವಾರಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಈಶ್ವರ್ ಪಾಂಡೆ, 2015 ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಅದರಂತೆ ಐಪಿಎಲ್‌ನಲ್ಲಿ 25 ಪಂದ್ಯಗಳನ್ನು ಆಡಿರುವ ಈಶ್ವರ್ ಪಾಂಡೆ ಒಟ್ಟು 18 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ. ಆದರೆ 2016 ರ ಬಳಿಕ ಮಧ್ಯಮ ಪ್ರದೇಶದ ಈ ವೇಗಿಯನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದರೊಂದಿಗೆ ಐಪಿಎಲ್ನಿಂದಲೂ ಪಾಂಡೆ ಹೆಸರು ಮರೆಯಾಯಿತು.
ಇದೀಗ ಮತ್ತೆ ಈಶ್ವರ್ ಪಾಂಡೆ ಹೆಸರು ಕೇಳಿ ಬಂದಿರುವುದು 33 ವಯಸ್ಸಿನಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ಮೂಲಕ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಅವಕಾಶ ಪಡೆದರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಭಾಗ್ಯ ಸಿಗದಿರುವ ನೋವು ಕಾಡುತ್ತಿದೆ ಎಂದು ಈಶ್ವರ್ ಪಾಂಡೆ ತಿಳಿಸಿದ್ದಾರೆ.