ಟೆಸ್ಟ್ ಸರಣಿ ಆರಂಭವಾದ ಕ್ಷಣದಿಂದಲೇ ಟೀಮ್ ಇಂಡಿಯ ಆಟಗಾರರು ಐಪಿಎಲ್ ನಲ್ಲಿ ಆಡಲು ಉತ್ಸುಕರಾಗಿದ್ದರು: ಗಾಫ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 19, 2021 | 1:10 AM

ಭಾರತೀಯ ಆಟಗಾರರ ನಡಾವಳಿ ತನಗೆ ಬೇಸರ ತರಿಸಿದೆ ಎಂದು ಹೇಳಿರುವ ಗಾಫ್ ಪ್ರವಾಸಿ ತಂಡದ ಸದಸ್ಯರ ನಿರ್ಲಕ್ಷ್ಯ ಧೋರಣೆ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡಿದೆ ಎಂದಿದ್ದಾರೆ.

ಟೆಸ್ಟ್ ಸರಣಿ ಆರಂಭವಾದ ಕ್ಷಣದಿಂದಲೇ ಟೀಮ್ ಇಂಡಿಯ ಆಟಗಾರರು ಐಪಿಎಲ್ ನಲ್ಲಿ ಆಡಲು ಉತ್ಸುಕರಾಗಿದ್ದರು: ಗಾಫ್
ಡೆರೆನ್ ಗಾಫ್
Follow us on

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ಕೊನೆ ಟೆಸ್ಟ್ ಪಂದ್ಯ ರದ್ದಾಗಿದ್ದು ಕ್ರಿಕೆಟ್ಗೆ ಅತ್ಯಂತ ಕೆಟ್ಟ ಜಾಹೀರಾತು ಎಂದು ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಡೆರೆನ್ ಗಾಫ್ ಹೇಳಿದ್ದಾರೆ. ಭಾರತೀಯ ಆಟಗಾರರ ನಡಾವಳಿ ತನಗೆ ಬೇಸರ ತರಿಸಿದೆ ಎಂದು ಹೇಳಿರುವ ಗಾಫ್ ಪ್ರವಾಸಿ ತಂಡದ ಸದಸ್ಯರ ನಿರ್ಲಕ್ಷ್ಯ ಧೋರಣೆ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡಿದೆ ಎಂದಿದ್ದಾರೆ. ಆಸ್ಟ್ರೇಲಿಯಾದ ಫಾಕ್ಸ್ ಸ್ಪೋರ್ಟ್ಸ್ ನ ‘ರೋಡ್ ಟು ಆಶಸ್’ ಪಾಡ್ ಕಾಸ್ಟ್ನಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ಗಳಾಗಿರುವ ಗ್ಲೆನ್ ಮ್ಯಾಕ್​ಗ್ರಾ ಮತ್ತು ಬ್ರೆಂಡನ್ ಜೂಲಿಯನ್ ಜೊತೆ ಸಂಭಾಷಣೆ ನಡೆಸಿದ ಗಾಫ್, ಮ್ಯಾಂಚೆಸ್ಟರ್ ಟೆಸ್ಟ್ ಕ್ಕಿಂತ ಮೊದಲು ಭಾರತೀಯ ಆಟಗಾರರು ಪ್ರದರ್ಶಿಸಿದ ವರ್ತನೆಯನ್ನು ಖಂಡಿಸಿದ್ದಾರೆ.

‘ಟೆಸ್ಟ್ ಪಂದ್ಯ ರದ್ದಾದೀತು ಎನ್ನುವ ಪರಿಕಲ್ಪನೆ ನನಗಿರಲಿಲ್ಲ. ನಾನು ಸಹ ಬಯೋ-ಬಬಲ್ನಲ್ಲಿ ಬದುಕು ನಡೆಸಬೇಕಾಗುತ್ತದೆ. ನನ್ನ ಹೆಂಡತಿ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾಳೆ. ಅದು ಏನು ಅಂತ ನನಗೆ ಚೆನ್ನಾಗಿ ಅರ್ಥವಾಗುತ್ತದೆ,’ ಎಂದು ಗಾಫ್ ಹೇಳಿದ್ದಾರೆ.

‘ಆದರೆ ಓವಲ್ ಟೆಸ್ಟ್ ಬಳಿಕ ನಡೆದಿದ್ದೇನು? ಅವರು ಬಬಲ್ ಲೈಫ್ ಶಿಷ್ಟಾಚಾರವನ್ನು ಉಲ್ಲಂಘಿಸಿದರು. ಅವರೆಲ್ಲ ಹೆಡ್ ಕೋಚ್ ರವಿ ಶಾಸ್ತ್ರಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರು. ಅದು ಎಲ್ಲೇ ನಡೆದಿರಲಿ ವಿಷಯ ಅದಲ್ಲ, ಅವರು ಸ್ವೇಚ್ಛೆಯಿಂದ, ಲಂಡನ್ ನಿಂದ ಮ್ಯಾಂಚೆಸ್ಟರ್​​ಗೆ ಸಾರ್ವಜನಿಕ ಸಾರಿಗೆ ರೈಲಿನಲ್ಲಿ ಪ್ರಯಾಣಿಸಿದರು.’

‘ಅವರು ಮ್ಯಾಂಚೆಸ್ಟರ್​ಗೆ ಹೋದ ನಂತರ ಟೆಸ್ಟ್ ಮ್ಯಾಚ್​ಗೆ ಮುನ್ನ ಕೆಲವರು ಶಾಪಿಂಗ್ ಗೆ ತೆರಳಿದರು. ನನ್ನ ಮನಸ್ಸಿಗೆ ಬಹಲ ನೋವುಂಟು ಮಾಡಿದ ಸಂಗತಿಯೆಂದರೆ, ಟೆಸ್ಟ್ ಪಂದ್ಯ ವೀಕ್ಷಿಸಲು ಬೇರೆ ಬೇರೆ ಕಡೆಯಿಂದ ಜನ ಮ್ಯಾಂಚೆಸ್ಟರ್ಗೆ ಆಗಮಿಸಿದ ನಂತರ ಅದು ರದ್ದಾಗಿದ್ದು. ಇದು ಅವ್ಯವಸ್ಥೆಯ ಪರಮಾವಧಿ ಅಂತ ನಾನು ಭಾವಿಸುತ್ತೇನೆ,’ ಎಂದು ಗಾಫ್ ಹೇಳಿದ್ದಾರೆ.
ರವಿವಾರದಿಂದ ಯುಎಈಯಲ್ಲಿ ಆರಂಭವಾಗಲಿರುವ ಐಪಿಎಲ್ 2021 ದ್ವಿತೀಯ ಭಾಗದಲ್ಲಿ ಭಾಗವಹಿಸಲು ಬಾರತೀಯ ಆಟಗಾರರು ಆರಂಭದಿಂದಲೇ ಹಾತೊರೆಯುತ್ತಿದ್ದರು ಎಂದು ಗಾಫ್ ಹೇಳಿದ್ದಾರೆ,

‘ಅದು ನಮಗೆಲ್ಲ ಗೊತ್ತಿದೆ, ಐಪಿಎಲ್, ಪಿ ಎಸ್ ಎಲ್ ಮತ್ತು ಬಿಗ್ ಬ್ಯಾಶ್ನಂತೆ ಒಂದು ದೊಡ್ಡ ಟೂರ್ನಮೆಂಟ್. ಅದರೆ ಅವರು ಬಬಲ್ ಲೈಫ್ ಬಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಈಗ ಆವರು ದುಬೈಗೆ ಹೋಗಿದ್ದಾರೆ, ಅಲ್ಲಿ ಅವರು ಆರು ದಿನಗಳ ಕಾಲ ಕಠಿಣ ಕ್ವಾರಂಟೀನ್ಗೆ ಒಳಗಾಗಬೇಕು,’ ಎಂದು ಗಾಫ್ ಹೇಳಿದ್ದಾರೆ.

‘ಅದಾದ ಮೇಲೆ ಪುನಃ ನಾಲ್ಕು ವಾರ ಅವಧಿಯ ಬಬಲ್ ಗೆ ಅವರು ಒಳಗಾಗಬೇಕು. ನಂತರ ಟಿ20 ವಿಶ್ವಕಪ್ ಟೂರ್ನಿ ಸಂದರ್ಭದಲ್ಲೂ ಅವರು ಬಬಲ್ ಲೈಫ್ ಗೆ ಒಗ್ಗಿಕೊಳ್ಳಬೇಕು. ವಿಶ್ವಕಪ್ ಮುಗಿದ ನಂತರ ನ್ಯೂಜಿಲೆಂಡ್ ತಂಡ ಇಂಡಿಯ ಪ್ರವಾಸ ತೆರಳಲಿದೆ. ಆಗ ಮತ್ತೊಂದು ಬಬಲ್ ಬದುಕು,’ ಎಂದು 51-ವರ್ಷ ವಯಸ್ಸಿನ ಗಾಫ್ ಹೇಳಿದ್ದಾರೆ,

‘ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಾನು ಹೇಳುವುದೇನೆಂದರೆ ಟೀಮ್ ಇಂಡಿಯ ಸದಸ್ಯರಿಗೆ ಯಾವಾಗ ಇಂಗ್ಲೆಂಡ್ ನಿಂದ ಹೊರ ಹೋದೆವು ಅನ್ನಿಸಿತ್ತು. ಟೆಸ್ಟ್ ಸರಣಿ ಆರಂಭವಾದ ಕ್ಷಣದಿಂದಲೇ ಅವರು ಐಪಿಎಲ್ ನಲ್ಲಿ ಆಡುವುದಕ್ಕಾಗಿ ಹಾತೊರೆಯುತ್ತಿದ್ದರು. ಅದರಿಂದ ವೈಯಕ್ತಿಕವಾಗಿ ನನಗೇನೂ ಸಮಸ್ಯೆಯಿಲ್ಲ. ಆದರೆ ಕ್ರಿಕೆಟ್ ಪ್ರೇಮಿಗಳಿಗೆ ಬಹು ದೊಡ್ಡ ವಂಚನೆಯಾಗಿದೆ,’ ಎಂದು ಗಾಫ್ ಹೇಳಿದ್ದಾರೆ.

ಇದನ್ನೂ ಓದಿ:  IPL 2021: ಮೊದಲಾರ್ಧದ ಕಳಪೆ ಪ್ರದರ್ಶನದಿಂದ ಮೇಲೇಳುತ್ತಾ ಕೋಲ್ಕತ್ತಾ? ಇಲ್ಲಿದೆ ಶಾರುಖ್ ತಂಡದ ವೇಳಾಪಟ್ಟಿ