ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಹಾಗೂ ಅದಕ್ಕೂ ಮುನ್ನ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಜನವರಿ 11 ರಂದು ಪ್ರಕಟಿಸಬಹುದು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಜನವರಿ 11 ರಂದು ಅಥವಾ ಜನವರಿ 12 ರೊಳಗೆ ತಂಡವನ್ನು ಪ್ರಕಟಿಸಲಾಗುವುದು. ಜನವರಿ 11 ರಂದು ಆಯ್ಕೆ ಸಮಿತಿಯು ಮುಂಬೈನಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಲಿದ್ದು, ಅಂದೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಚಾಂಪಿಯನ್ಸ್ ಟ್ರೋಫಿಗಾಗಿ ಎಲ್ಲಾ ಕ್ರಿಕೆಟ್ ಮಂಡಳಿಗಳು ಜನವರಿ 12 ರೊಳಗೆ ತಂಡವನ್ನು ಘೋಷಿಸಬೇಕು. ಐಸಿಸಿ ನಿಯಮಗಳ ಪ್ರಕಾರ, ಎಲ್ಲಾ ಎಂಟು ತಂಡಗಳು ಪ್ರಾಥಮಿಕ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಫೆಬ್ರವರಿ 13 ರವರೆಗೆ ಅವಕಾಶವಿರುತ್ತದೆ. ಹೀಗಾಗಿ ಬಿಸಿಸಿಐ ಕೂಡ ಜನವರಿ 12 ರೊಳಗೆ ತಂಡವನ್ನು ಪ್ರಕಟಿಸಲಿದೆ. ವರದಿ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿಗೆ ಕಳುಹಿಸಿರುವ ನೋಟಿಸ್ನಲ್ಲಿ ಜನವರಿ 11 ರಂದು ಟಿ20 ಸರಣಿಗೆ ಮಾತ್ರ ತಂಡದ ಆಯ್ಕೆಯನ್ನು ಉಲ್ಲೇಖಿಸಲಾಗಿದೆ. ಆದರೆ ಅದೇ ದಿನ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಬಹುದು.
ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಬಹುತೇಕ ಆಟಗಾರರು ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಯಶಸ್ವಿ ಜೈಸ್ವಾಲ್ ಈ ಸರಣಿಗೆ ಆಯ್ಕೆಯಾಗುವುದು ಖಚಿತ. ಆದಾಗ್ಯೂ ಜೈಸ್ವಾಲ್ಗೆ ಏಕದಿನ ತಂಡದಲ್ಲಿ ಆಡುವ ಚೊಚ್ಚಲ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಜೈಸ್ವಾಲ್ 2023 ರಲ್ಲೇ ಭಾರತದ ಪರ ಟೆಸ್ಟ್ ಮತ್ತು ಟಿ 20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರಾದರೂ ಅವರಿಗೆ ಇನ್ನೂ ಏಕದಿನದಲ್ಲಿ ಅವಕಾಶ ಸಿಕ್ಕಿಲ್ಲ. ಒಂದು ವೇಳೆ ಏಕದಿನ ಸರಣಿಗೆ ಸ್ಥಾನ ಪಡೆದರೆ ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆಯಾಗುವುದು ಖಚಿತ.
ಟೆಸ್ಟ್ ಮಾದರಿಯಲ್ಲಿ ರನ್ ಕಲೆಹಾಕಲು ಪರದಾಡುತ್ತಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ತಂಡದಲ್ಲಿ ಆಯ್ಕೆಯಾಗುವುದು ಖಚಿತ. ಇವರೊಂದಿಗೆ ಶುಭ್ಮನ್ ಗಿಲ್ಗೂ ತಂಡದಲ್ಲಿ ಸ್ಥಾನ ಸಿಗಲಿದೆ. ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರಲ್ಲಿ ಇಬ್ಬರು ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೆ ಆಯ್ಕೆ ಸಮಿತಿಯ ಮುಂದಿರುವ ಪ್ರಮುಖ ಪ್ರಶ್ನೆಯೆಂದರೆ ಸ್ಟಾರ್ ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಫಿಟ್ನೆಸ್.
ಬುಮ್ರಾ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬುದರ ಮೇಲೆ ಅವರು ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುತ್ತಾರೆಯೇ? ಎಂಬುದು ತಿಳಿಯಲಿದೆ. ಒಂದು ವೇಳೆ ಬುಮ್ರಾ ಫಿಟ್ ಆಗದಿದ್ದರೆ ಮೊಹಮ್ಮದ್ ಶಮಿ ಆಯ್ಕೆಯಾಗುವುದು ಖಚಿತ. ಏಕೆಂದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಮಿ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಹಾಗೂ ಅವರು ಅನುಭವದ ಆಧಾರದ ಮೇಲೆ ಐಸಿಸಿ ಟೂರ್ನಿಗೆ ಆಯ್ಕೆ ಮಾಡಬಹುದು.
ಚಾಂಪಿಯನ್ಸ್ ಟ್ರೋಫಿ ಮತ್ತು ಏಕದಿನ ಸರಣಿಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ/ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್/ಮೊಹಮ್ಮದ್ ಶಮಿ, ರಿಂಕು ಸಿಂಗ್/ತಿಲಕ್ ವರ್ಮಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 pm, Wed, 8 January 25