ಅಫ್ಘನ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಯಾವಾಗ ಪ್ರಕಟ?

India T20 Squad vs Afghanistan: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಆಯ್ಕೆ ಸೆಪ್ಟೆಂಬರ್ 3 ರಂದು ನಡೆಯಲಿದೆ. ಈ ಸರಣಿ ಸೆಪ್ಟೆಂಬರ್ 13 ರಿಂದ ದೆಹಲಿಯಲ್ಲಿ ಆರಂಭವಾಗಲಿದೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯರಂತಹ ಪ್ರಮುಖ ಆಟಗಾರರ ಫಿಟ್ನೆಸ್ ಕುರಿತು ಕಳವಳವಿದೆ. ಶ್ರೇಯಸ್ ಅಯ್ಯರ್ ನಾಯಕರಾಗಿರುವ ಸಂಭಾವ್ಯ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಆಯ್ಕೆ ಸಮಿತಿ ಪ್ರಮುಖ ನಿರ್ಧಾರ ಕೈಗೊಳ್ಳಲಿದೆ.

ಅಫ್ಘನ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಯಾವಾಗ ಪ್ರಕಟ?
Team India

Updated on: Aug 30, 2026 | 5:58 PM

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ (India vs Afghanistan) ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಈ ಮೂರು ಪಂದ್ಯಗಳ ಸರಣಿ ಸೆಪ್ಟೆಂಬರ್ 13 ರಿಂದ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಸರಣಿ ಭಾರತದಲ್ಲಿ ನಡೆಯುತ್ತಿದೆಯಾದರೂ ಟೀಂ ಇಂಡಿಯಾ ಪ್ರವಾಸಿ ತಂಡವಾಗಿ ಆಡಲಿದೆ. ಅಂದರೆ ಈ ಸರಣಿಯ ಆತಿಥ್ಯದ ಹಕ್ಕನ್ನು ಅಫ್ಘಾನಿಸ್ತಾನ ಹೊಂದಿದೆ. ಹೀಗಾಗಿ ಈ ಸರಣಿಗೆ ಆತಿಥೇಯ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಟೀಂ ಇಂಡಿಯಾವನ್ನು ಮಾತ್ರ ಇದುವರೆಗೆ ಪ್ರಕಟಿಸಲಾಗಿಲ್ಲ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಆಯ್ಕೆ ಸಮಿತಿಯೂ ಸೆಪ್ಟೆಂಬರ್ 3 ರಂದು ಸಭೆ ಸೇರಿ ಅಫ್ಘಾನ್ ಸರಣಿಗೆ ಭಾರತೀಯ ತಂಡವನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

  • ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತೀಯ ತಂಡವನ್ನು ಅಂತಿಮಗೊಳಿಸಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸೆಪ್ಟೆಂಬರ್ 3 ರಂದು ಸಭೆ ಸೇರಲಿದೆ.
  • ಟಿ20 ತಂಡದ ಹಾಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
  • ಹಾಗೆಯೇ ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಣಕ್ಕಿಳಿಯುವ ತಂಡವೇ ಅಫ್ಘನ್ ವಿರುದ್ಧದ ಸರಣಿಯಲ್ಲಿ ಆಡುವ ಸಾಧ್ಯತೆಗಳಿವೆ.
  • ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ. ಹೀಗಾಗಿ ಬುಮ್ರಾ ಅಫ್ಘನ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿಲ್ಲ.
  • ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಫಿಟ್‌ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಅವರು ತರಬೇತಿಯಲ್ಲಿ ಕಾಣಿಸಿಕೊಂಡಿದ್ದರೂ, ಆಗಸ್ಟ್‌ನಲ್ಲಿ ಮತ್ತೊಂದು ಗಾಯಕ್ಕೆ ಒಳಗಾಗಿರುವುದು ಅವರ ಲಭ್ಯತೆಯ ಬಗ್ಗೆಯೂ ಅನುಮಾನ ಮೂಡಿಸಿದೆ.
  • ಮತ್ತೊಬ್ಬ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡಿದ್ದ ಅವರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ.
  • ಏತನ್ಮಧ್ಯೆ, ಐಪಿಎಲ್ 2026 ರ ಸಮಯದಲ್ಲಿ ಕಾಲಿನ ಗಾಯಕ್ಕೆ ತುತ್ತಾಗಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರು ಆಡುವ ಸಾಧ್ಯತೆಗಳಿವೆ.

ಭಾರತ ಸಂಭಾವ್ಯ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ, ಸೂರ್ಯಾಂಶ್ ಶೆಡ್ಗೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us