India vs Namibia: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಗೆಲುವಿನ ವಿದಾಯ: ವಿರಾಟ್ ನಾಯಕತ್ವದ ಯುಗ ಅಂತ್ಯ

| Updated By: Vinay Bhat

Updated on: Nov 09, 2021 | 7:20 AM

IND vs NAM, T20 World Cup: ಆರಂಭದ ಎರಡು ಪಂದ್ಯಗಳ ಸೋಲಿನ ಕಾರಣದಿಂದ ಭಾರತ ಇಂದು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ನಂತರದ ಮೂರು ಪಂದ್ಯಗಳಲ್ಲಿ ಕೊಹ್ಲಿ ಪಡೆ ಅಮೋಘ ಗೆಲುವು ಕಂಡರು ಸೆಮಿ ಫೈನಲ್​ಗೇರಲು ಸಾಧ್ಯವಾಗಲಿಲ್ಲ. ಭಾರತ ಸದ್ಯ ತವರಿಗೆ ಮರಳಲಿದ್ದು, ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ.

India vs Namibia: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಗೆಲುವಿನ ವಿದಾಯ: ವಿರಾಟ್ ನಾಯಕತ್ವದ ಯುಗ ಅಂತ್ಯ
India vs Namibia
Follow us on

ಆರನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಭಾರತ ಕ್ರಿಕೆಟ್ ತಂಡ (Indian Cricket Team) ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಸೋಮವಾರ ನಡೆದ ಕೊನೇ ಪಂದ್ಯದಲ್ಲಿ ನಮೀಬಿಯಾ (India vs Namibia) ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಕಾಣುವ ಮೂಲಕ ಗೆಲುವಿನ ವಿದಾಯ ಹೇಳಿತು. ಇದರೊಂದಿಗೆ ಟಿ20 ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ಯುಗವೂ ಅಂತ್ಯಕಂಡಿದೆ. ಜೊತೆಗೆ ಮುಖ್ಯಕೋಚ್ ರವಿಶಾಸ್ತ್ರಿ (Ravi Shastri) ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗದ ಪಯಣವೂ ಮುಗಿದಿದೆ. 2012ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಮೊದಲ ಬಾರಿಗೆ ನಾಕೌಟ್ ಹಂತಕ್ಕೇರಲು ವಿಫಲವಾದ ಟೀಮ್ ಇಂಡಿಯಾ ಬರಿಗೈಲಿ ತವರಿಗೆ ಮರಳಲಿದೆ.

ಕೊನೇ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ನಮೀಬಿಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಮೀಬಿಯಾ ಹಾಗೂ ಹೀಗೂ ರನ್ ಗಳಿಸುತ್ತಾ ಕಲೆಹಾಕಿದ್ದು ಕೇವಲ 132 ರನ್​ಗಳನ್ನಷ್ಟೆ. ಸ್ಟೀಫ‌ನ್‌ ಬಾರ್ಡ್‌ ಮತ್ತು ಮೈಕಲ್‌ ವಾನ್‌ ಲಿಂಜೆನ್‌ ತಂಡಕ್ಕೆ ಕ್ವಿಕ್‌ ಸ್ಟಾರ್ಟ್‌ ನೀಡಲು ಪ್ರಯತ್ನಿಸಿದರು. ಶಮಿ, ಬುಮ್ರಾ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 4.4 ಓವರ್‌ಗಳಿಂದ 33 ರನ್‌ ಪೇರಿಸಿದರು. ಆದರೆ ಒಂದೇ ರನ್‌ ಅಂತರದಲ್ಲಿ 2 ವಿಕೆಟ್‌ ಕೆಡವಿದ ಭಾರತ ತಿರುಗೇಟು ನೀಡಿತು.

14 ರನ್‌ ಮಾಡಿದ ಲಿಂಜೆನ್‌ ಅವರನ್ನು ಬುಮ್ರಾ ಉರುಳಿಸಿದರೆ, ಕ್ರೆಗ್‌ ವಿಲಿಯಮ್ಸ್‌ ಖಾತೆ ತೆರೆಯುವ ಮೊದಲೇ ಜಡೇಜ ಅವರ ಮೊದಲ ಓವರ್‌ನಲ್ಲೇ ಸ್ಟಂಪ್ಡ್ ಆದರು. ಮುಂದಿನ ಓವರಿನಲ್ಲಿ ಬಾರ್ಡ್‌ (21) ವಿಕೆಟ್‌ ಕಿತ್ತ ಜಡೇಜ ನಮೀಬಿಯಕ್ಕೆ ಮತ್ತೊಂದು ಆಘಾತವಿಕ್ಕಿದರು. ನಾಯಕ ಜೆರಾರ್ಡ್ ಎರಾಸ್ಮಸ್ ಮತ್ತು ಡೇವಿಡ್ ವಿಯೆಸ್ ಮಧ್ಯೆ 5ನೇ ವಿಕೆಟ್​ಗೆ 25 ರನ್ ಜೊತೆಯಾಟ ಬಂದದ್ದು ನಮೀಬಿಯಾಗೆ ಡಿಫೆಂಡ್ ಮಾಡಿಕೊಳ್ಳಲು ಒಂದಷ್ಟು ಸ್ಕೋರ್ ಸಿಕ್ಕಿತು. ಅಂತಿಮವಾಗಿ 8 ವಿಕೆಟ್‌ಗೆ 132 ರನ್‌ಗಳಿಸಿತು.

ಭಾರತದ ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ತಲಾ 3 ವಿಕೆಟ್ ಪಡೆದು ಗಮನ ಸೆಳೆದರು. ವರುಣ್ ಚಕ್ರವರ್ತಿ ಬದಲು ಸ್ಥಾನ ಪಡೆದಿದ್ದ ರಾಹುಲ್ ಚಾಹರ್ ಅವರಿಗೆ ಒಂದೂ ವಿಕೆಟ್ ದಕ್ಕದೆ ನಿರಾಸೆ ಆಯಿತು.

ಗೆಲ್ಲಲು ಸಾಧಾರಣ 133 ರನ್​ಗಳ ಗುರಿ ಪಡೆದ ಭಾರತ 28 ಬಾಲ್ ಬಾಕಿ ಇರುವಂತೆಯೇ ಚೇಸ್ ಮಾಡಿ ಗೆದ್ದಿತು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಆಟ ಭಾರತದ ಚೇಸಿಂಗ್​ನ ಹೈಲೈಟ್ ಎನಿಸಿತು. ಇಬ್ಬರೂ ಅರ್ಧಶತಕಗಳನ್ನ ಭಾರಿಸಿದರು. ರೋಹಿತ್ ಶರ್ಮಾ ಕೇವಲ 37 ಬಾಲ್​ನಲ್ಲಿ 56 ರನ್ ಗಳಿಸಿ ಔಟಾದರೆ ಕೆಎಲ್ ರಾಹುಲ್ (54*) ಅಜೇಯರಾಗಿ ಉಳಿದರು. ಸೂರ್ಯಕುಮಾರ್ ಯಾದವ್ ಕೂಡ ಕೆಎಲ್ ರಾಹುಲ್ ಜೊತೆ ಸೇರಿ ಟೀಮ್ ಇಂಡಿಯಾವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.

ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಆರಂಭದ ಎರಡು ಪಂದ್ಯಗಳ ಸೋಲಿನ ಕಾರಣದಿಂದ ಭಾರತ ಇಂದು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ನಂತರದ ಮೂರು ಪಂದ್ಯಗಳಲ್ಲಿ ಕೊಹ್ಲಿ ಪಡೆ ಅಮೋಘ ಗೆಲುವು ಕಂಡರು ಸೆಮಿ ಫೈನಲ್​ಗೇರಲು ಸಾಧ್ಯವಾಗಲಿಲ್ಲ. ಭಾರತ ಸದ್ಯ ತವರಿಗೆ ಮರಳಲಿದ್ದು, ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ.

Virat Kohli: ನಿರಾಸೆಯೊಂದಿಗೆ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ

(Team India T20 World Cup campaign finishing with a 9-wicket win in their final group game vs Namibia)