Ashes 2023: 4ನೇ ಟೆಸ್ಟ್​​ ಪಂದ್ಯ ಮಳೆಗಾಹುತಿ: ಕಮರಿದ ಇಂಗ್ಲೆಂಡ್ ತಂಡದ​ ಸರಣಿ ಗೆಲ್ಲುವ ಕನಸು..!

| Updated By: ಝಾಹಿರ್ ಯೂಸುಫ್

Updated on: Jul 23, 2023 | 10:16 PM

England vs Australia: ಆ್ಯಶಸ್ ಟೆಸ್ಟ್ ಸರಣಿಯ 5ನೇ ಪಂದ್ಯವು ಜೂನ್ 27 ರಿಂದ ಶುರುವಾಗಲಿದ್ದು, ಈ ಪಂದ್ಯವು ಆಸ್ಟ್ರೇಲಿಯಾ-ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ.

Ashes 2023: 4ನೇ ಟೆಸ್ಟ್​​ ಪಂದ್ಯ ಮಳೆಗಾಹುತಿ: ಕಮರಿದ ಇಂಗ್ಲೆಂಡ್ ತಂಡದ​ ಸರಣಿ ಗೆಲ್ಲುವ ಕನಸು..!
England Team
Follow us on

Ashes 2023: ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಮ್ಯಾಚೆಂಸ್ಟರ್​ನ ಓಲ್ಡ್​ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯವು ನಾಲ್ಕು ದಿನಗಳಾಟದವರೆಗೆ ಸರಾಗವಾಗಿ ಸಾಗಿತ್ತು. ಆದರೆ ನಿರ್ಣಾಯಕವಾಗಿದ್ದ 5ನೇ ದಿನದಾಟವು ಸಂಪೂರ್ಣ ಮಳೆಗೆ ಅಹುತಿಯಾಗುವುದರೊಂದಿಗೆ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶೇನ್ (51) ಹಾಗೂ ಮಿಚೆಲ್ ಮಾರ್ಷ್ (51) ಅರ್ಧಶತಕ ಬಾರಿಸಿ ಮಿಂಚಿದ್ದರು. ಇತ್ತ ಬಿಗಿ ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ 5 ವಿಕೆಟ್​ ಕಬಳಿಸುವುದರೊಂದಿಗೆ ಆಸ್ಟ್ರೇಲಿಯಾವನ್ನು 317 ರನ್​ಗಳಿಗೆ ಆಲೌಟ್ ಮಾಡಿದ್ದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ಪರ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಸ್ಪೋಟಕ ಇನಿಂಗ್ಸ್​ ಆಡಿದ್ದರು. ಕೇವಲ 93 ಎಸೆತಗಳಲ್ಲಿ ಶತಕ ಸಿಡಿಸಿದ್ದ ಕ್ರಾಲಿ 182 ಎಸೆತಗಳಲ್ಲಿ 21 ಫೋರ್ ಹಾಗೂ 3 ಸಿಕ್ಸ್​ಗಳೊಂದಿಗೆ 189 ರನ್ ಬಾರಿಸಿದ್ದರು. ಇನ್ನು ಮೊಯೀನ್ ಅಲಿ (54), ಜೋ ರೂಟ್ (84) , ಹ್ಯಾರಿ ಬ್ರೂಕ್ (61), ಬೆನ್ ಸ್ಟೋಕ್ಸ್ (51) ಹಾಗೂ ಜಾನಿ ಬೈರ್​ಸ್ಟೋವ್ (99) ಅರ್ಧಶತಕ ಸಿಡಿಸುವ ಮೂಲಕ ಪ್ರಥಮ ಇನಿಂಗ್ಸ್​ನಲ್ಲಿ ತಂಡದ ಮೊತ್ತವನ್ನು 592 ರನ್​ಗಳಿಗೆ ತಂದು ನಿಲ್ಲಿಸಿದ್ದರು.

275 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 214 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 5ನೇ ದಿನದಾಟದಲ್ಲಿ ಉಳಿದ 5 ವಿಕೆಟ್ ಕಬಳಿಸಿ ಪಂದ್ಯ ಗೆಲ್ಲುವ ಉತ್ತಮ ಅವಕಾಶ ಇಂಗ್ಲೆಂಡ್ ಮುಂದಿತ್ತು.

ಆದರೆ ಇಂಗ್ಲೆಂಡ್​ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ವರುಣ ತಲೆಕೆಳಗಾಗಿಸಿದೆ. 5ನೇ ದಿನದಾಟವು ಸಂಪೂರ್ಣ ಮಳೆಗಾಹುತಿಯಾದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಇದರೊಂದಿಗೆ 4ನೇ ಟೆಸ್ಟ್ ಪಂದ್ಯ ಗೆದ್ದು ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವ ಇಂಗ್ಲೆಂಡ್ ಪ್ಲ್ಯಾನ್ ಕೂಡ ಕಮರಿದೆ.

ಇದೀಗ 4ನೇ ಟೆಸ್ಟ್ ಪಂದ್ಯ ಡ್ರಾ ಆದರೂ ಸರಣಿ ಗೆಲ್ಲುವ ಉತ್ತಮ ಅವಕಾಶ ಆಸ್ಟ್ರೇಲಿಯಾ ಮುಂದಿದೆ. ಅಂದರೆ ಸದ್ಯ ಸರಣಿಯಲ್ಲಿ 2-1 ಅಂತರದಿಂದ ಆಸ್ಟ್ರೇಲಿಯಾ ಮುಂದಿದ್ದು, ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಅಥವಾ ಡ್ರಾ ಸಾಧಿಸಿದರೆ ಸರಣಿಯನ್ನು 3-1 ಅಥವಾ 2-1 ಅಂತರದಿಂದ ವಶಪಡಿಸಿಕೊಳ್ಳಬಹುದು.

ಇತ್ತ ಇಂಗ್ಲೆಂಡ್ ತಂಡವು ಸರಣಿ ಸೋಲುವುದನ್ನು ತಪ್ಪಿಸಿಕೊಳ್ಳಲು ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಲೇಬೇಕು. ಈ ಮೂಲಕ ಸರಣಿಯನ್ನು 2-2 ರಂತೆ ಡ್ರಾ ಗೊಳಿಸಬಹುದು.

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಝಾಕ್ ಕ್ರಾಲಿ , ಮೊಯಿನ್ ಅಲಿ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಸ್ಟುವರ್ಟ್ ಬ್ರಾಡ್ , ಜೇಮ್ಸ್ ಅ್ಯಂಡರ್ಸನ್.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಕ್ಯಾಮೆರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಜೋಶ್ ಹ್ಯಾಝಲ್​ವುಡ್​.