
ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅದರಲ್ಲೂ ಚುಟುಕು ಕ್ರಿಕೆಟ್ನಲ್ಲಿ ಒಂದು ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲದು. ಹೀಗಾಗಿಯೇ ಫೀಲ್ಡರ್ಗಳು ಕ್ಯಾಚ್ಗಳನ್ನು ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಅಂತಹದೊಂದು ಅದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ ರಾಸ್ ವೈಟ್ಲಿ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನ 22ನೇ ಪಂದ್ಯದಲ್ಲಿ ಸದರ್ನ್ ಬ್ರೇವ್ ಹಾಗೂ ವೆಲ್ಶ್ ಫೈರ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಶ್ ಫೈರ್ ತಂಡವು ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿತ್ತು.
ಆದರೆ ಕೊನೆಯ ಹಂತದಲ್ಲಿ ಕಂಬ್ಯಾಕ್ ಮಾಡಿದ ಸದರ್ನ್ ಬೌಲರ್ಗಳು ರನ್ ಗತಿಯನ್ನು ನಿಯಂತ್ರಿಸಿದರು. ಅದರಲ್ಲೂ ಸೌತ್ ಆಫ್ರಿಕಾ ಆಟಗಾರ ಡ್ವೇನ್ ಪ್ರಿಟೊರಿಯಸ್ ವಿಕೆಟ್ ಪಡೆಯುವ ಮೂಲಕ ಬೃಹತ್ ಮೊತ್ತವನ್ನು ಪೇರಿಸುವುದನ್ನು ತಡೆದರು. 7 ಎಸೆತಗಳಲ್ಲಿ 15 ರನ್ ಬಾರಿಸಿ ಕೊನೆಯ ಹಂತದಲ್ಲಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಪ್ರಿಟೊರಿಯಸ್ ಮೈಕೆಲ್ ಹೊಗನ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ್ದರು.
ಅತ್ತ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ರಾಸ್ ವೈಟ್ಲಿ ಕಡೆಗೆ ರಾಕೆಟ್ ವೇಗದಲ್ಲಿ ಚೆಂಡು ತೂರಿ ಬಂತು. ಇನ್ನೇನು ಬಾಲ್ ನೆಲಕ್ಕೆ ಬೀಳಲಿದೆ ಅನ್ನುವಷ್ಟರಲ್ಲಿ ವೈಟ್ಲಿ ಅದ್ಭುತವಾಗಿ ಸ್ವಿಮ್ಮಿಂಗ್ ಡೈವ್ ಹೊಡೆದರು. ಕಡಿಮೆ ಸಮಯದಲ್ಲಿ ಹಿಡಿದ ಈ ಪರಿಪೂರ್ಣ ಕ್ಯಾಚ್ನೊಂದಿಗೆ ಡ್ವೇನ್ ಪ್ರಿಟ್ರೊರಿಯಸ್ ಇನಿಂಗ್ಸ್ ಅಂತ್ಯವಾಯಿತು. ರಾಸ್ ವೈಟ್ಲಿ ಹಿಡಿದ ಈ ಅದ್ಭುತ ಕ್ಯಾಚ್ಗೆ ಪ್ರೇಕ್ಷಕರು ತಲೆದೂಗಿದರು.
ಈ ಉತ್ತಮ ಕ್ಯಾಚ್ ಪರಿಣಾಮ ವೇಲ್ಶ್ ಫೈರ್ ತಂಡವು ನಿಗದಿತ 100 ಎಸೆತಗಲಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಸುಲಭ ಸವಾಲನ್ನು ಬೆನ್ನತ್ತಿದ ಸದರ್ನ್ ಬ್ರೇವ್ ತಂಡವು 82 ಎಸೆತಗಳಲ್ಲಿ 1 ವಿಕೆಟ್ ನಷ್ಟಕ್ಕೆ 132 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.