
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಮಹಿಳಾ ದಿ ಹಂಡ್ರೆಡ್ 2026 ಫೈನಲ್ನಲ್ಲಿ (Women’s The Hundred 2026 Final) ಕಾವ್ಯ ಮಾರನ್ ( Kavya Maran ) ಒಡೆತನದ ಸನ್ರೈಸರ್ಸ್ ಲೀಡ್ಸ್ ತಂಡವು ಹೀನಾಯ ಸೋಲು ಅನುಭವಿಸಿತು. ಟ್ರೆಂಟ್ ರಾಕೆಟ್ಸ್ ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿ, ಸನ್ರೈಸರ್ಸ್ ತಂಡವನ್ನು (Trent Rockets vs Sunrisers Leeds) 8 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಕೇವಲ 91 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟ್ರೆಂಟ್ ರಾಕೆಟ್ಸ್ 46 ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ಗಳನ್ನು ಕಳೆದುಕೊಂಡು 92 ರನ್ಗಳ ಗುರಿಯನ್ನು ಸುಲಭವಾಗಿ ತಲುಪಿತು. ಈ ಮೂಲಕ ಈ ಸೀಸನ್ ಆರಂಭಕ್ಕೂ ಮುನ್ನ ಕಳೆದ ಬಾರಿಯ ಚಾಂಪಿಯನ್ ನಾರ್ದರ್ನ್ ಸೂಪರ್ಚಾರ್ಜರ್ಸ್ ತಂಡವನ್ನು ಖರೀದಿಸಿ ಸನ್ರೈಸರ್ಸ್ ಲೀಡ್ಸ್ ಎಂಬ ಹೆಸರಿನೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿದಿದ್ದ ಕಾವ್ಯ ಮಾರನ್ ತಂಡಕ್ಕೆ ಸೋಲಿನ ಆಘಾತ ಎದುರಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ರೈಸರ್ಸ್ ಲೀಡ್ಸ್ ತಂಡ ಕಳಪೆ ಆರಂಭ ಪಡೆಯಿತು. ಫೋಬೆ ಲಿಚ್ಫೀಲ್ಡ್ ಉತ್ತಮ ಆರಂಭ ಒದಗಿಸಿಕೊಡಲು ಪ್ರಯತ್ನಿಸಿದರಾದರೂ ಕಿಮ್ ಗಾರ್ತ್ ಮತ್ತು ಜಾರ್ಜಿಯಾ ಆಡಮ್ಸ್ ಅವರ ತಂತ್ರಗಳ ಮುಂದೆ ಸನ್ರೈಸರ್ಸ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣ ಕುಸಿಯಿತು. ಇದರ ಪರಿಣಾಮವಾಗಿ ಸನ್ರೈಸರ್ಸ್ ಲೀಡ್ಸ್ ಕೇವಲ 26 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.
ಆ ನಂತರ ಬಂದ ದೀಪ್ತಿ ಶರ್ಮಾ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಅನ್ನಾಬೆಲ್ಲೆ ಸದರ್ಲ್ಯಾಂಡ್ ಕೂಡ ಬೇಗನೇ ಇನ್ನಿಂಗ್ಸ್ ಮುಗಿಸಿದರು. ಅಂತಿಮವಾಗಿ ತಂಡವು 91 ರನ್ಗಳಿಗೆ ಆಲೌಟ್ ಆಯಿತು. ಇತ್ತ ಟ್ರೆಂಟ್ ರಾಕೆಟ್ಸ್ ಪರ ಕಿಮ್ ಗಾರ್ತ್, ಸಮಂತಾ ಬೇಟ್ಸ್, ಚಾರ್ಲಿ ಫಿಲಿಪ್ಸ್ ಮತ್ತು ಜಾರ್ಜಿಯಾ ಆಡಮ್ಸ್ ತಲಾ ಎರಡು ವಿಕೆಟ್ ಪಡೆದರು.
92 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಸೋಫಿಯಾ ಡಂಕ್ಲಿ ಮತ್ತು ಬೆತ್ ಮೂನಿ ಭರ್ಜರಿ ಆರಂಭ ನೀಡಿದರು. ಆರಂಭಿಕರಾದ ಇಬ್ಬರೂ ಕೇವಲ 40 ಎಸೆತಗಳಲ್ಲಿ 69 ರನ್ಗಳ ಭರ್ಜರಿ ಜೊತೆಯಾಟ ನಡೆಸಿ, ಸನ್ರೈಸರ್ಸ್ ತಂಡದ ಗೆಲುವಿನ ನಿರೀಕ್ಷೆಯನ್ನು ಕೊನೆಗೊಳಿಸಿದರು. ಸೋಫಿಯಾ ಡಂಕ್ಲಿ 23 ಎಸೆತಗಳಲ್ಲಿ 41 ರನ್ ಗಳಿಸಿದರೆ, ಬೆತ್ ಮೂನಿ ಔಟಾಗದೆ 31 ರನ್ ಗಳಿಸಿದರು. ನಾಯಕಿ ಆಶ್ಲೀ ಗಾರ್ಡ್ನರ್ ಗೆಲುವಿನ ಬೌಂಡರಿ ಬಾರಿಸಿ ತಂಡಕ್ಕೆ ಎಂಟು ವಿಕೆಟ್ಗಳ ಐತಿಹಾಸಿಕ ಜಯ ತಂದುಕೊಟ್ಟರು.
Published On - 10:00 pm, Sun, 16 August 26