ಟೀಮ್ ಇಂಡಿಯಾದ (Team India) ಹೀನಾಯ ಪ್ರದರ್ಶನವನ್ನು ಭಾರತ ತಂಡದ ಮಾಜಿ ಆಟಗಾರ ದಿಲೀಪ್ ವೆಂಗ್ಸರ್ಕಾರ್ (Dilip Vengsarkar) ಕಟುವಾಗಿ ಟೀಕಿಸಿದ್ದಾರೆ. ಕಳೆದೊಂದು ದಶಕದಲ್ಲಿ ಭಾರತ ತಂಡವು ಪ್ರಮುಖ ಟೂರ್ನಿಗಳಲ್ಲಿ ಸೋಲಲು ಮುಖ್ಯ ಕಾರಣ ಆಯ್ಕೆ ಸಮಿತಿ ಎಂದಿದ್ದಾರೆ. ಏಕೆಂದರೆ ಕಳೆದ ಐದಾರು ವರ್ಷಗಳಲ್ಲಿ ಬಂದ ಎಲ್ಲಾ ಆಯ್ಕೆಗಾರರಲ್ಲಿ ದೂರದೃಷ್ಟಿಯ ಕೊರತೆಯಿದೆ. ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ, ಅವರನ್ನು ಈ ಹಿಂದೆ ಟೀಮ್ ಇಂಡಿಯಾದ ಹಂಗಾಮಿ ನಾಯಕರನ್ನಾಗಿ ಮಾಡಲಾಗಿತ್ತು.
ಇದೇ ವೇಳೆ ಧವನ್ ಬದಲಿಗೆ ಯುವ ಆಟಗಾರನಿಗೆ ಈ ಜವಾಬ್ದಾರಿಯನ್ನು ನೀಡಬೇಕಾಗಿತ್ತು. ಭವಿಷ್ಯದ ದೃಷ್ಟಿಯಲ್ಲಿ ನಾಯಕನನ್ನು ರೂಪಿಸಬೇಕಿತ್ತು. ಆದರೆ ಬಿಸಿಸಿಐ ಆಯ್ಕೆ ಸಮಿತಿಯು ನಿವೃತ್ತಿ ಅಂಚಿನಲ್ಲಿರುವ ಶಿಖರ್ ಧವನ್ ಅವರಿಗೆ ನಾಯಕನ ಪಟ್ಟ ನೀಡಿತ್ತು. ಅದೇ ಯುವ ಆಟಗಾರನಿಗೆ ನಾಯಕತ್ವ ನೀಡಿದ್ದರೆ ಭವಿಷ್ಯಕ್ಕಾಗಿ ಒಬ್ಬ ನಾಯಕನನ್ನು ರೂಪಿಸಿಕೊಳ್ಳಬಹುದಿತ್ತು ಎಂದು ವೆಂಗ್ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿದೆ. ಇದರೊಂದಿಗೆ ಮತ್ತೊಮ್ಮೆ ಐಸಿಸಿ ಪ್ರಶಸ್ತಿ ಗೆಲ್ಲುವ ತಂಡದ ಕನಸು ಭಗ್ನಗೊಂಡಿದೆ. ಭಾರತ ತಂಡವು ಕಳೆದ 10 ವರ್ಷಗಳಿಂದ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ನಾಕೌಟ್‌ಗಳಲ್ಲಿ ನಿರಂತರವಾಗಿ ಸೋಲುತ್ತಿದೆ. ಇದಕ್ಕೆಲ್ಲಾ ಕಾರಣ ಆಯ್ಕೆಗಾರರು ಎಂದು ವೆಂಗ್ಸರ್ಕಾರ್ ಆರೋಪಿಸಿದ್ದಾರೆ.
ಏಕೆಂದರೆ ಟೀಮ್ ಇಂಡಿಯಾದ ಆಯ್ಕೆಗಾರರಿಗೆ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನ ಇಲ್ಲ. ಹಾಗೆಯೇ ದೂರದೃಷ್ಟಿ ಕೂಡ ಇಲ್ಲ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ದಿಲೀಪ್ ವೆಂಗ್ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬಿಸಿಸಿಐ ವಿರುದ್ಧ ಹರಿಹಾಯ್ದ ವೆಂಗ್ಸರ್ಕಾರ್, ನೀವು ನಮ್ಮದು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಮಾತನಾಡುತ್ತೀರಿ. ಆದರೆ ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂತ್ ಎಲ್ಲಿದೆ ಹೇಳಿ. ಐಪಿಎಲ್ನಲ್ಲಿ ಆಡಿ ಮೀಡಿಯಾ ರೈಟ್ಸ್ ಮೂಲಕ ಕೋಟಿಗಟ್ಟಲೆ ಹಣ ಗಳಿಸುವುದೊಂದೇ ಸಾಧನೆಯಾಗಬಾರದು ಎಂದು ವೆಂಗ್ಸರ್ಕಾರ್ ಹೇಳಿದರು.
ಇದೀಗ ಬಿಸಿಸಿಐ ಆಯ್ಕೆದಾರರ ವಿರುದ್ಧ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ದಿಲೀಪ್ ವೆಂಗ್ಸರ್ಕಾರ್ ಮಾಡಿರುವ ಆರೋಪಗಳು ಭಾರೀ ವೈರಲ್ ಆಗಿದ್ದು, ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಆಟಗಾರನ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.