TNPL 2024: 4 ಸಿಕ್ಸರ್, 4 ಬೌಂಡರಿ, 57 ರನ್; ಅಶ್ವಿನ್ ಸಿಡಿಲಬ್ಬರಕ್ಕೆ ಮಣಿದ ಚೆಪಾಕ್ ಸೂಪರ್ ಗಿಲ್ಲಿಸ್

|

Updated on: Aug 01, 2024 | 4:47 PM

TNPL 2024: ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿದ ಅಶ್ವಿನ್, ಕಠಿಣ ಪರಿಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಅಶ್ವಿನ್ ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ 4 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿದರು. ಅಶ್ವಿನ್ 8 ಎಸೆತಗಳಲ್ಲಿ ಕಲೆಹಾಕಿದ ಈ 40 ರನ್‌ಗಳು ಎದುರಾಳಿ ತಂಡದ ಸೋಲಿಗೆ ಕಾರಣವಾಯಿತು.

TNPL 2024: 4 ಸಿಕ್ಸರ್, 4 ಬೌಂಡರಿ, 57 ರನ್; ಅಶ್ವಿನ್ ಸಿಡಿಲಬ್ಬರಕ್ಕೆ ಮಣಿದ ಚೆಪಾಕ್ ಸೂಪರ್ ಗಿಲ್ಲಿಸ್
ಆರ್​. ಅಶ್ವಿನ್
Follow us on

ಪ್ರಸ್ತುತ ತಮಿಳುನಾಡಿನಲ್ಲಿ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್. ಅಶ್ವಿನ್ ನಾಯಕತ್ವದ ದಿಂಡಿಗಲ್ ಡ್ರಾಗನ್ಸ್ ತಂಡ, ಚೆಪಾಕ್ ಸೂಪರ್ ಗಿಲ್ಲಿಸ್ ತಂಡವನ್ನು 4 ವಿಕೆಟ್​ ಮಣಿಸಿ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ 19.5 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ದಿಂಡಿಗಲ್ ಡ್ರಾಗನ್ಸ್ ತಂಡ ನಾಯಕ ಅಶ್ವಿನ್ ಹಾಗೂ ಶಿವಂ ಸಿಂಗ್ ಅವರ ಸಿಡಿಲಬ್ಬರದ ಅರ್ಧಶತಕದ ಆಧಾರದ ಮೇಲೆ ಇನ್ನೊಂದು ಎಸೆತ ಬಾಕಿ ಇರುವಂತೆ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಮೊದಲು ಬ್ಯಾಟ್ ಮಾಡಿದ ಚೆಪಾಕ್ ಸೂಪರ್ ಗಿಲ್ಲಿಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 2 ರನ್ ಕಲೆಹಾಕಿದ್ದಾಗ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಒಂದಾದ ಎನ್ ಜಗದೀಸನ್ ಹಾಗೂ ಬಾಬಾ ಅಪರಾಜಿತ್ ತಂಡದ ಮೊತ್ತವನ್ನು 41 ರನ್​ಗಳಿಗೇರಿಸಿದರು. ಈ ವೇಳೆ ಜಗದೀಸನ್ 25 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆದರೆ ನಾಯಕನ ಇನ್ನಿಂಗ್ಸ್ ಮುಂದುವರೆಸಿದ ಅಪರಾಜಿತ್ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 72 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ಪ್ರದೋಶ್ ರಂಜನ್ ಪಾಲ್ 19 ರನ್​ಗಳ ಇನ್ನಿಂಗ್ಸ್ ಆಡಿದರೆ, ಕೊನೆಯಲ್ಲಿ ಅಭಿಷೇಕ್ ತನ್ವರ್ 22 ರನ್​ ಕಲೆಹಾಕಿ ತಂಡವನ್ನು 158 ರನ್​ಗಳಿಗೆ ಕೊಂಡೊಯ್ದರು.

ಈ ಗುರಿ ಬೆನ್ನಟ್ಟಿದ ದಿಂಡಿಗಲ್ ತಂಡ ಕೂಡ 3 ರನ್​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಬ್ಬ ಆರಂಭಿಕ ಶಿವಂ ಸಿಂಗ್ (64 ರನ್) ಹಾಗೂ ನಾಯಕ ಆರ್ ಅಶ್ವಿನ್ (57 ರನ್) ಜೊತೆಗೂಡಿ ಶತಕದ ಜೊತೆಯಾಟ ನಡೆಸಿದರು. ಜೊತೆಗೆ ಇಬ್ಬರು ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ತಂಡದ ಮಧ್ಯಮ ಕ್ರಮಾಂಕ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಕೊನೆಯಲ್ಲಿ ಶರತ್ ಕುಮಾರ್ ಹಾಗೂ ಸುಬೋತ್ ಭಾಟಿ ಕ್ರಮವಾಗಿ 12 ಹಾಗೂ 14 ರನ್ ಸಿಡಿಸಿದರೆ, ದಿನೇಶ್ ರಾಜ್ 2 ಎಸೆತಗಳಲ್ಲಿ 4 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಅಶ್ವಿನ್ ಅದ್ಭುತ ಬ್ಯಾಟಿಂಗ್

ಈ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಅವರು 4 ಓವರ್‌ಗಳಲ್ಲಿ 33 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿದ ಅಶ್ವಿನ್, ಕಠಿಣ ಪರಿಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಅಶ್ವಿನ್ ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ 4 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿದರು. ಅಶ್ವಿನ್ 8 ಎಸೆತಗಳಲ್ಲಿ ಕಲೆಹಾಕಿದ ಈ 40 ರನ್‌ಗಳು ಎದುರಾಳಿ ತಂಡದ ಸೋಲಿಗೆ ಕಾರಣವಾಯಿತು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡದ ಗೆಲುವಿಗೆ ಕಾರಣರಾದ ಅಶ್ವಿನ್, ಈ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

ನಿರ್ಣಾಯಕ ಪಂದ್ಯದಲ್ಲಿ ಅಶ್ವಿನ್ ಸ್ಫೋಟ

ವಾಸ್ತವವಾಗಿ ಅಶ್ವಿನ್ ಈ ಟೂರ್ನಿಯಲ್ಲಿ ವಿಶೇಷ ಪ್ರದರ್ಶನವನ್ನೇನೂ ನೀಡಿಲ್ಲ. ಈ ಇನ್ನಿಂಗ್ಸ್‌ಗೂ ಮೊದಲು, ಅಶ್ವಿನ್ 7 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಆದರೆ ನಾಕ್ ಔಟ್ ಪಂದ್ಯದಲ್ಲಿ ಫಾರ್ಮ್​ ಕಂಡುಕೊಂಡ ಅಶ್ವಿನ್ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇದೀಗ ಅಶ್ವಿನ್ ನಾಯಕತ್ವದಲ್ಲಿ ದಿಂಡುಗಲ್ ತಂಡ ಕ್ವಾಲಿಫೈಯರ್​ನಲ್ಲಿ ತ್ರಿಪುರ ತಮಿಜಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಶುಕ್ರವಾರ ನಡೆಯಲಿದೆ. ತಮಿಳುನಾಡು ಪ್ರೀಮಿಯರ್ ಲೀಗ್‌ನ ಫೈನಲ್ ಆಗಸ್ಟ್ 4 ರಂದು ನಡೆಯಲಿದ್ದು, ಈಗಾಗಲೇ ಲಿಕಾ ಕೋವೈ ಕಿಂಗ್ಸ್ ತಂಡ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ