India vs New Zealand 1st Test: ಕಿವೀಸ್ ವಿಕೆಟ್ ಕೀಳಬೇಕಿದೆ ಭಾರತೀಯ ಬೌಲರ್​ಗಳು: ಕುತೂಹಲ ಮೂಡಿಸಿದೆ ಮೂರನೇ ದಿನದಾಟ

| Updated By: Vinay Bhat

Updated on: Nov 27, 2021 | 7:08 AM

IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದ ಗೌರವವನ್ನು ಕೇನ್ ವಿಲಿಯಮ್ಸನ್ ಪಡೆ ಸಂಪಾದಿಸಿತು. ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್​ಗಳಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನ ಮೂರನೇ ದಿನದಾಟ ಭಾರತಕ್ಕೆ ಮುಖ್ಯವಾಗಿದೆ.

India vs New Zealand 1st Test: ಕಿವೀಸ್ ವಿಕೆಟ್ ಕೀಳಬೇಕಿದೆ ಭಾರತೀಯ ಬೌಲರ್​ಗಳು: ಕುತೂಹಲ ಮೂಡಿಸಿದೆ ಮೂರನೇ ದಿನದಾಟ
Tom Latham and Will Young
Follow us on

ಕಾನ್ಪುರದ ಗ್ರೀನ್ ಪಾರ್ಕ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತವನ್ನು 345 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಕೇನ್ (Kane Williamson) ಪಡೆ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿದೆ. 2ನೇ ದಿನ ಒಂದೂ ವಿಕೆಟ್ ಕೀಳಲು ಭಾರತೀಯ ಬೌಲರ್​ಗಳಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಂದಿನ ಮೂರನೇ ದಿನದಾಟ ಟೀಮ್ ಇಂಡಿಯಾಕ್ಕೆ (Team India) ಬಹುಮುಖ್ಯವಾಗಿದ್ದು, ನ್ಯೂಜಿಲೆಂಡ್ ಅನ್ನು ಆದಷ್ಟು ಬೇಗ ಕಟ್ಟಿಹಾಕಬೇಕಿದೆ. ಮೂವರು ಸ್ಪಿನ್ನರ್​ಗಳನ್ನು ಒಳಗೊಂಡಿರುವ ಭಾರತ ವಿಕೆಟ್ ಕೀಳುವತ್ತ ಹೆಚ್ಚಿನ ಗಮನ ಹರಿಸಬೇಕಿದೆ. ನ್ಯೂಜಿಲೆಂಡ್ ಇನ್ನು 216 ರನ್​ಗಳ ಹಿನ್ನಡೆಯಲ್ಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದ ಗೌರವವನ್ನು ಕೇನ್ ವಿಲಿಯಮ್ಸನ್ ಪಡೆ ಸಂಪಾದಿಸಿತು. ಮೊದಲು ಭಾರತೀಯ ಬ್ಯಾಟರ್ ಗಳನ್ನು ಕಟ್ಟಿಹಾಕಿದರೆ, ನಂತರ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕಿವೀಸ್ ದ್ವಿತೀಯ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ. ಶ್ರೇಯಸ್ ಅಯ್ಯರ್ ಚೊಚ್ಚಲ ಪಂದ್ಯದಲ್ಲಿ ಶತಕ ಸಂಭ್ರಮ ಸಿಕ್ಕಿದ್ದು ಭಾರತದ ಪಾಲಿನ ಸಮಾಧಾನಕರ ಬಹುಮಾನ. ಟಿಮ್ ಸೌದಿ 5 ವಿಕೆಟ್ ಪಡೆದು ವಿಜೃಂಬಿಸಿದರು.

ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 258 ರನ್ ದಾಖಲಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಮೂರನೇ ಓವರ್‌ನಲ್ಲೇ ಜಡೇಜಾ ವಿಕೆಟ್ ಕಳೆದುಕೊಂಡಿತು. ಒಟ್ಟು 12 ಎಸೆತಗಳನ್ನ ಎದುರಿಸಿದ ರವೀಂದ್ರ ಜಡೇಜಾ ಇಂದು ಒನ್ ರನ್ ಸೇರಿಸದೆ, ಟಿಮ್ ಸೌಥಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಈ ಮೂಲಕ ಜಡ್ಡು ಇನ್ನಿಂಗ್ಸ್‌ 50 ರನ್‌ಗೆ ಕೊನೆಗೊಂಡಿತು.

ವೃದ್ಧಿಮಾನ್ ಸಾಹ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಅದಾದ ಬಳಿಕ ಶ್ರೇಯಸ್ ಅಯ್ಯರ್ ಚೊಚ್ಚಲ ಟೆಸ್ಟ್ ಶತಕ ಗಳಿಸಿ ಔಟಾದರು.ರವಿಚಂದ್ರನ್ ಅಶ್ವಿನ್ ಬಹುತೇಕ ಏಕಾಂಗಿಯಾಗಿ ಹೋರಾಡಿ ಒಂದಷ್ಟು ಉಪಯುಕ್ತವೆನಿಸುವ ರನ್ ಗಳನ್ನ ಗಳಿಸಿದ ಪರಿಣಾಮ ಟೀಮ್ ಇಂಡಿಯಾ 345 ರನ್​ಗಳ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟಾಮ್ ಲ್ಯಾಥಂ ಮತ್ತು ವಿಲ್ ಯಂಗ್ ಭಾರತೀಯ ಬೌಲರ್​ಗಳನ್ನು ಸರಾಗವಾಗಿ ಎದುರಿಸಿದರು. ಇಶಾಂತ್ ಶರ್ಮಾ, ಉಮೇಶ್ ಯಾದವ್, ಆರ್. ಅಶ್ವಿನ್, ಆರ್. ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಿರುವ ಭಾರತೀಯ ಬೌಲಿಂಗ್ ಪಡೆ ಬಿಸಿಲಿನಲ್ಲಿ ಬೆವರಳಿಸಿತೇ ವಿನಃ ವಿಕೆಟ್ ಮಾತ್ರ ದಕ್ಕಿಸಿಕೊಳ್ಳಲಿಲ್ಲ. ಟಾಮ್ ಲ್ಯಾಥಂ ಟೆಸ್ಟ್‌ ಕ್ರಿಕೆಟ್‌ನಲ್ಲಿ 21ನೇ ಅರ್ಧಶತಕ ದಾಖಲಿಸಿದರು. 165 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿ ಕ್ರೀಸ್​ನಲ್ಲಿದ್ದಾರೆ. ವಿಲ್‌ ಯಂಗ್ ತಮ್ಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ಪ್ರದರ್ಶಿಸಿ 180 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕಿದ್ದಾರೆ. ಇವರಿಬ್ಬರೂ ಅಜೇಯ 129 ರನ್ ಜೊತೆಯಾಟವಾಡಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

2ನೇ ದಿನದಾಟದ ಅಂತ್ಯಕ್ಕೆ ಸ್ಕೋರು ವಿವರ:

ಭಾರತ ಮೊದಲ ಇನ್ನಿಂಗ್ಸ್ 345/10 (111.1 ಓವರ್)

(ಶ್ರೇಯಸ್ ಅಯ್ಯರ್ 105, ಶುಭ್ಮನ್ ಗಿಲ್ 52, ರವೀಂದ್ರ ಜಡೇಜಾ 50, ಆರ್ ಅಶ್ವಿನ್ 38 ರನ್ – ಕೈಲ್ ಜೇಮಿಸನ್ 91/3, ಟಿಮ್ ಸೌದಿ 69/5, ಅಜಾಜ್ ಪಟೇಲ್ 90/2)

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 129/0 (57 ಓವರ್)

(ವಿಲ್ ಯಂಗ್ ಅಜೇಯ 75, ಟಾಮ್ ಲ್ಯಾಥಂ ಅಜೇಯ 50 ರನ್)

ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ನೆದರ್ಲೆಂಡ್ಸ್‌ ಪ್ರವಾಸ ಅರ್ಧಕ್ಕೆ ರದ್ದು! ಭಾರತ ಪ್ರವಾಸವೂ ಅನುಮಾನ?

(Tom Latham and Will Young stitched an unbeaten 129-run partnership as New Zealand ended Day 2)