ICC World Cup: ಏಕದಿನ ವಿಶ್ವಕಪ್​ನಲ್ಲಿ ಕಂಡು ಬಂದ 5 ಪ್ರಮುಖ ವಿವಾದಗಳು

| Updated By: ಝಾಹಿರ್ ಯೂಸುಫ್

Updated on: Nov 07, 2023 | 5:50 PM

ICC ODI World Cup: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಹೊಸ ತೀರ್ಪಿಗೆ ಸಾಕ್ಷಿಯಾಯಿತು. ಶ್ರೀಲಂಕಾ ತಂಡದ 4ನೇ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್​ಗೆ ಆಗಮಿಸಿದ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ ಆರಂಭಿಸಲು ತಡ ಮಾಡಿದ್ದರು.

ICC World Cup: ಏಕದಿನ ವಿಶ್ವಕಪ್​ನಲ್ಲಿ ಕಂಡು ಬಂದ 5 ಪ್ರಮುಖ ವಿವಾದಗಳು
ಸಾಂದರ್ಭಿಕ ಚಿತ್ರ
Follow us on

ಏಕದಿನ ವಿಶ್ವಕಪ್​ 2023 ರ 38ನೇ ಪಂದ್ಯವು ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಾಂಗ್ಲಾದೇಶ್-ಶ್ರೀಲಂಕಾ ನಡುವಣ ಪಂದ್ಯದಲ್ಲಿ ಏಂಜೆಲೊ ಮ್ಯಾಥ್ಯೂಸ್ ಟೈಮ್ ಔಟ್ ಆಗಿ ನಿರ್ಗಮಿಸಿದ್ದರು. ಆದರೆ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರ ಈ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಶ್ರೀಲಂಕಾ ಆಟಗಾರರು ಪಂದ್ಯದ ಬಳಿಕ ಪರಸ್ಪರ ಹಸ್ತಲಾಘವ ಮಾಡದೇ ಹೊರ ನಡೆದಿದ್ದರು. ಒಂದು ಔಟ್​ನಿಂದ ಶುರುವಾದ ಈ ವಿವಾದ ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆದಿರುವುದು ವಿಪರ್ಯಾಸ. ಅಂದಹಾಗೆ ಏಕದಿನ ವಿಶ್ವಕಪ್​ನಲ್ಲಿ ಇಂತಹ ವಿವಾದ ಕಂಡು ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ವಿವಾದಗಳಿಂದ ಒಡಿಐ ವರ್ಲ್ಡಕಪ್​ ಗಮನ ಸೆಳೆದಿದೆ. ಆ ವಿವಾದಗಳಾವುವು ಎಂಬುದರ ಮಾಹಿತಿ ಇಲ್ಲಿದೆ…

  1.  ಏಕದಿನ ವಿಶ್ವಕಪ್ 2023: ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್​ ಔಟ್: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಹೊಸ ತೀರ್ಪಿಗೆ ಸಾಕ್ಷಿಯಾಯಿತು. ಶ್ರೀಲಂಕಾ ತಂಡದ 4ನೇ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್​ಗೆ ಆಗಮಿಸಿದ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್ ಆರಂಭಿಸಲು ತಡ ಮಾಡಿದ್ದರು. ಐಸಿಸಿ ನಿಯಮಗಳ ಪ್ರಕಾರ, ಹೊಸ ಬ್ಯಾಟರ್ ಚೆಂಡನ್ನು ಎದುರಿಸಲು ಸಿದ್ಧವಾಗಲು ಎರಡು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಆದರೆ ಮ್ಯಾಥ್ಯೂಸ್ ತನ್ನ ಮೊದಲ ಎಸೆತವನ್ನು ಆಡುವ ಮುನ್ನ ಮೂರು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರು. ಇದನ್ನು ಪ್ರಸ್ತಾಪಿಸಿ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಂಪೈರ್​ಗೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಏಂಜೆಲೊ ಮ್ಯಾಥ್ಯೂಸ್​ರನ್ನು ಟೈಮ್ ಔಟ್ ನೀಡಿದರು. ಇದರೊಂದಿಗೆ ಮ್ಯಾಥ್ಯೂಸ್ ಕ್ರಿಕೆಟ್​ ಇತಿಹಾಸದಲ್ಲಿ ಟೈಮ್ ಔಟ್ ಆದ ಮೊದಲ ಆಟಗಾರ ಎನಿಸಿಕೊಂಡರು.
  2.  ಏಕದಿನ ವಿಶ್ವಕಪ್ 1992 ಮಳೆ ನಿಮಯ: 1992 ರ ವಿಶ್ವಕಪ್​ನ 2ನೇ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಮಳೆಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 45 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿತು.
    ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ಕೊನೆಯ 13 ಎಸೆತಗಳಲ್ಲಿ ಕೇವಲ 22 ರನ್​ಗಳ ಅವಶ್ಯಕತೆಯಿತ್ತು. ಇದೇ ವೇಳೆ ಸುರಿದ ಮಳೆಯಿಂದಾಗಿ ಕೆಲಕಾಲ ಆಟ ಸ್ಥಗಿತಗೊಂಡಿತು. ಆ ಬಳಿಕ ಪಂದ್ಯ ಶುರುವಾದಾಗ ಅಂದಿನ ನಿಯಮದಂತೆ ಸೌತ್ ಆಫ್ರಿಕಾಗೆ 1 ಎಸೆತಗಳಲ್ಲಿ 22 ರನ್​ಗಳ ಟಾರ್ಗೆಟ್ ನೀಡಲಾಯಿತು. ಇದರೊಂದಿಗೆ ಸೌತ್ ಆಫ್ರಿಕಾ ತಂಡ ಫೈನಲ್​ಗೇರುವ ಅವಕಾಶವನ್ನು ಕಳೆದುಕೊಂಡಿತು.
  3. ಏಕದಿನ ವಿಶ್ವಕಪ್​ 1996ರ ಬೆಂಕಿ: 1996ರ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು.
    252 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ 98 ರನ್​ಗಳವರೆಗೆ ಕಳೆದುಕೊಂಡಿದ್ದು ಕೇವಲ 1 ವಿಕೆಟ್ ಮಾತ್ರ. ಹೀಗಾಗಿಯೇ ಎಲ್ಲರೂ ಗೆಲುವು ಭಾರತ ತಂಡದ್ದೇ ಎಂದು ಭಾವಿಸಿದ್ದರು. ಆದರೆ 65 ರನ್​ಗಳಿಸಿದ್ದ ಸಚಿನ್ ತೆಂಡೂಲ್ಕರ್ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ದಿಢೀರ್ ಕುಸಿತಕ್ಕೊಳಗಾಯಿತು.
    34.1 ಓವರ್​ಗಳ ವೇಳೆ 120 ರನ್​ಗಳಿಗೆ 8 ವಿಕೆಟ್ ಕಳೆದುಕೊಂಡು ಭಾರತ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಟೀಮ್ ಇಂಡಿಯಾದ ಈ ಪ್ರದರ್ಶನದಿಂದ ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ಬಾಟಲಿಗಳನ್ನು ಎಸೆಯಲು ಪ್ರಾರಂಭಿಸಿದರು. ಅಲ್ಲದೆ ಕ್ರೀಡಾಂಗಣದ ಆಸನಗಳಿಗೆ ಬೆಂಕಿ ಹಚ್ಚಿದರು.
    ಭಾರತೀಯ ಅಭಿಮಾನಿಗಳನ್ನು ಶಾಂತಗೊಳಿಸಲು ಭದ್ರತಾ ಸಿಬ್ಬಂದಿಯ ಪ್ರಯತ್ನಗಳು ವ್ಯರ್ಥವಾಯಿತು. ಹೀಗಾಗಿ ಮ್ಯಾಚ್ ರೆಫರಿ ಕ್ಲೈವ್ ಲಾಯ್ಡ್ ಶ್ರೀಲಂಕಾ ತಂಡವನ್ನು ವಿಜೇತ ಎಂದು ಘೋಷಿಸಿದರು. ಈ ಪಂದ್ಯವನ್ನು ಭಾರತೀಯ ಕ್ರಿಕೆಟ್​ನ ಕಪ್ಪು ಚುಕ್ಕೆ ಎಂದು ಇಂದಿಗೂ ಪರಿಗಣಿಸಲಾಗುತ್ತಿದೆ.
  4.  ಏಕದಿನ ವಿಶ್ವಕಪ್ 1996 ರಲ್ಲಿ ವಾಕ್ ಓವರ್​: 1996 ರ ವಿಶ್ವಕಪ್​ಗೆ ಪಾಕಿಸ್ತಾನ, ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಿತ್ತು. ಅದರಂತೆ ಲಂಕಾದಲ್ಲಿ 4 ಪಂದ್ಯಗಳು ನಡೆಯಬೇಕಿತ್ತು. ಆದರೆ ಅಂದು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಎಲಾಮ್ (ಎಲ್‌ಟಿಟಿಇ) ಉಗ್ರಗಾಮಿ ಸಂಘಟನೆಯ ಬೆದರಿಕೆಯ ಕಾರಣ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಶ್ರೀಲಂಕಾದಲ್ಲಿ ಪಂದ್ಯವಾಡಲು ನಿರಾಕರಿಸಿತು. ಹೀಗಾಗಿ ಶ್ರೀಲಂಕಾ ತಂಡವನ್ನು ವಾಕ್ ಓವರ್ ವಿಜಯಿ ಎಂದು ಘೋಷಿಸಲಾಯಿತು.
  5.  ಏಕದಿನ ವಿಶ್ವಕಪ್ 2003 ರಲ್ಲಿ ಶೇನ್ ವಾರ್ನ್ ಬ್ಯಾನ್: 2003 ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಸ್ಪಿನ್ ದಂತಕಥೆ ಶೇನ್ ವಾರ್ನ್​ ಕಣಕ್ಕಿಳಿದಿರಲಿಲ್ಲ. ಪಂದ್ಯಾವಳಿಯ ಒಂದು ದಿನದ ಮೊದಲು, ಶೇನ್ ವಾರ್ನ್ ಉದ್ದೀಪನ ಟೆಸ್ಟ್ ಪಾಸಿಟಿವ್ ಬಂದಿತ್ತು. ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಅವರನ್ನು ಟೂರ್ನಿಯಿಂದ ನಿಷೇಧಿಸಲಾಯಿತು. ಇದಾಗ್ಯೂ ಆ ವರ್ಷ ಭಾರತಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ ಚಾಂಪಿಯನ್​ ಪಟ್ಟ ಅಲಂಕರಿಸಿದ್ದು ವಿಶೇಷ.

 

Published On - 5:49 pm, Tue, 7 November 23