ಟೀಂ ಇಂಡಿಯಾ, ಪಾಕಿಸ್ತಾನ ಪ್ರವಾಸ ಮಾಡಿ ಬಹಳ ವರ್ಷಗಳೇ ಕಳೆದಿವೆ. ಉಭಯ ತಂಡಗಳ ನಡುವೆ ಹಲವು ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳು (Bilateral series) ನಡೆದಿಲ್ಲ. ಹೀಗಾಗಿ ಐಸಿಸಿ ಈವೆಂಟ್ಗಳಲ್ಲಿ (ICC tournament) ಮಾತ್ರ ಈ ಎರಡೂ ದೇಶಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದವು. ಆದರೀಗ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಮಾಡುವ ಕಾಲ ಸನಿಹವಾಗಿದೆ. ಮುಂದಿನ ವರ್ಷದ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿದ್ದು, ಹೀಗಾಗಿ ಏಷ್ಯಾಕಪ್‌ನಲ್ಲಿ (Asia Cup) ಪಾಲ್ಗೊಳ್ಳಬೇಕೆಂದರೆ ಟೀಂ ಇಂಡಿಯಾ ಪಾಕ್ ನೆಲಕ್ಕೆ ಕಾಲಿಡಲೇಬೇಕಿದೆ. ಈಗ ಇದಕ್ಕೆ ಪೂರಕವೆಂಬಂತೆ ಏಷ್ಯಾಕಪ್‌ನಲ್ಲಿ ಭಾಗವಹಿಸಲು ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ (BCCI) ಸಿದ್ಧವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
2008 ರಿಂದ ಪಾಕಿಸ್ತಾನ ಭಾರತಕ್ಕೆ ಭೇಟಿ ನೀಡಿಲ್ಲ
ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಸ್ತುತ ಐಸಿಸಿ ಟೂರ್ನಮೆಂಟ್‌ಗಳು ಮತ್ತು ಏಷ್ಯಾಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. 2008 ರಿಂದ ಉಭಯ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಭಾರತವು 2008 ರಲ್ಲಿ ಪಾಕಿಸ್ತಾನಕ್ಕೆ ಕೊನೆಯ ಬಾರಿಗೆ ಹೋಗಿತ್ತು. ಅಲ್ಲಿ ಈ ಉಭಯ ತಂಡಗಳು ಕರಾಚಿಯಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಡಿದ್ದವು. ಈ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವುದರೊಂದಿಗೆ ಸಮಬಲದೊಂದಿಗೆ ಸರಣಿ ಕೊನೆಗೊಳಿಸಿದ್ದವು.
ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧ
ಅಕ್ಟೋಬರ್ 18 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಬಿಸಿಸಿಐ ಗುರುವಾರ ಎಲ್ಲಾ ರಾಜ್ಯ ಸಂಘಗಳಿಗೆ ಟಿಪ್ಪಣಿಯನ್ನು ಕಳುಹಿಸಿದ್ದು, ಇದು ಮುಂದಿನ ವರ್ಷದವರೆಗೆ ಭಾರತದ ವೇಳಾಪಟ್ಟಿಯನ್ನು ಹೊಂದಿದೆ. ಈ ಟಿಪ್ಪಣಿಯ ಪ್ರಕಾರ, ಭಾರತವು ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಟಿ20 ವಿಶ್ವಕಪ್ ಮತ್ತು ನಂತರ 19 ವರ್ಷದೊಳಗಿನವರ ಟಿ20 ವಿಶ್ವಕಪ್ ಅನ್ನು ಆಡಬೇಕಾಗಿದೆ. ಹಾಗೆಯೇ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕೂಡ ಈ ಯೋಜನೆಯ ಭಾಗವಾಗಿದೆ. ಏಷ್ಯಾಕಪ್ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಈ ಏಷ್ಯಾಕಪ್ ಬಳಿಕ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ.
ಸರ್ಕಾರದ ಅನುಮತಿ ಅಗತ್ಯವಿದೆ
ಈ ವರ್ಷದ ವಾರ್ಷಿಕ ಸಾಮಾನ್ಯ ಸಭೆಯ ಟಿಪ್ಪಣಿಯ ಪ್ರಕಾರ ಸರ್ಕಾರ ಅನುಮತಿಸಿದರೆ, ಭಾರತವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ ಬಿಸಿಸಿಐ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹಿಂದೇಟು ಹಾಕಿತ್ತು. ಆದ್ದರಿಂದ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಪಂದ್ಯಾವಳಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿತ್ತು. ಈಗ ಮುಂದಿನ ವರ್ಷದ ಏಷ್ಯಾಕಪ್ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಹೊಂದಿದ್ದು, ಬಿಸಿಸಿಐ ಕೂಡ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ. ಕ್ರೀಕ್ಬಜ್ ವರದಿ ಮಾಡಿರುವಂತೆ ಈ ಕುರಿತು ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಎಂದಿನಂತೆ ಇದು ಸರ್ಕಾರದ ಡೊಮೇನ್‌ನಲ್ಲಿರುವ ಕಾರಣ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಈಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವುದರಿಂದ ಟೂರ್ನಿಯನ್ನು ಬೇರೆಡೆ ಆಯೋಜಿಸುವುದು ಕಷ್ಟದ ಕೆಲಸವೇನಲ್ಲ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
Published On - 2:49 pm, Fri, 14 October 22