ಟ್ರೋಫಿ ಗೆಲ್ಲದ ಮಾತ್ರಕ್ಕೆ ದುರ್ಬಲ ನಾಯಕನಲ್ಲ: ಕೊಹ್ಲಿ ಪರ ಬ್ಯಾಟ್ ಬೀಸಿದ ಕ್ರಿಕೆಟ್ ದಂತಕಥೆ

| Updated By: ಝಾಹಿರ್ ಯೂಸುಫ್

Updated on: Nov 09, 2021 | 7:40 PM

TV9 Digital Exclusive: ಕ್ಲೈವ್ ಲಾಯ್ಡ್​ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕಂಡ ಸರ್ವ ಶ್ರೇಷ್ಠ ನಾಯಕ. 1975 ಹಾಗೂ 1979 ರಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಏಕದಿನ ವಿಶ್ವಕಪ್​ ತಂದುಕೊಟ್ಟ ನಾಯಕ ಎಂಬ ಹೆಗ್ಗಳಿಕೆ ಲಾಯ್ಡ್ ಅವರದ್ದು. ಇದಾದ ಬಳಿಕ ವೆಸ್ಟ್ ಇಂಡೀಸ್ ತಂಡ ಇದುವರೆಗೆ ಏಕದಿನ ವಿಶ್ವಕಪ್ ಗೆದ್ದಿಲ್ಲ ಎಂಬುದು ವಿಶೇಷ. ವಿಂಡೀಸ್​ ಪರ 110 ಟೆಸ್ಟ್ ಪಂದ್ಯಗಳನ್ನಾಡಿರುವ ಲಾಯ್ಡ್​ 7515 ರನ್ ಹಾಗೂ 87 ಏಕದಿನ ಪಂದ್ಯಗಳಿಂದ 1977 ರನ್​ ಕಲೆಹಾಕಿದ್ದಾರೆ.

ಟ್ರೋಫಿ ಗೆಲ್ಲದ ಮಾತ್ರಕ್ಕೆ ದುರ್ಬಲ ನಾಯಕನಲ್ಲ: ಕೊಹ್ಲಿ ಪರ ಬ್ಯಾಟ್ ಬೀಸಿದ ಕ್ರಿಕೆಟ್ ದಂತಕಥೆ
Follow us on

TV9 Digital Exclusive: ಟಿ20 ವಿಶ್ವಕಪ್​ 2021 ರಲ್ಲಿ ಲೀಗ್ ಹಂತದಲ್ಲೇ ಪರಾಜಯಗೊಳ್ಳುವ ಮೂಲಕ ಟೀಮ್ ಇಂಡಿಯಾ ಹೊರಬಿದ್ದಿದೆ. ಇದರೊಂದಿಗೆ ತಮ್ಮ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ವಿರಾಟ್ ಕೊಹ್ಲಿ ಅವರ ಕನಸು ಮತ್ತೊಮ್ಮೆ ಕಮರಿದೆ. ಆದರೆ ಐಸಿಸಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲು ವಿಫಲರಾಗಿದ್ದರೂ, ಅವರನ್ನು ದುರ್ಬಲ ನಾಯಕ ಎನ್ನಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ದಿ ಲೆಜೆಂಡ್ ಸರ್ ಕ್ಲೈವ್ ಲಾಯ್ಡ್​. ನ್ಯೂಸ್ 9 ಜೊತೆಗಿನ ಸಂವಾದದಲ್ಲಿ ಮಾತನಾಡಿದ ವೆಸ್ಟ್‌ಇಂಡೀಸ್‌ನ ದಂತಕಥೆ ಲಾಯ್ಡ್, ಕೇವಲ ಐಸಿಸಿ ಟೂರ್ನಿಯಲ್ಲಿ ಕಪ್ ಗೆಲ್ಲದ ಮಾತ್ರಕ್ಕೆ ಕಳಪೆ ನಾಯಕ ಎಂದೇಳಲಾಗುವುದಿಲ್ಲ. ಅವರ ಒಟ್ಟಾರೆ ಪ್ರದರ್ಶನವನ್ನು ಗಮನಿಸಿದರೆ ಕೊಹ್ಲಿ ಉತ್ತಮ ನಾಯಕ ಎಂಬುದು ತಿಳಿಯುತ್ತೆ ಎಂದರು.

ಯುಎಇನಲ್ಲಿ ಟೀಮ್ ಇಂಡಿಯಾ ವಿಫಲವಾಗಿತ್ತು. ಇದು ಕೊಹ್ಲಿ ಪಾಲಿಗೆ ಪ್ರಮುಖ ಟೂರ್ನಿಯಾಗಿದ್ದರಿಂದ ಎಲ್ಲರೂ ಗಮನಿಸುವಂತಾಯಿತು. ಅವರು ತಂಡವನ್ನು ಮುನ್ನಡೆಸಿದ ನಾಲ್ಕು ICC ಈವೆಂಟ್‌ಗಳಲ್ಲಿ ಟ್ರೋಫಿ ಗೆಲ್ಲಲು ವಿಫಲರಾಗಿದ್ದಾರೆ, ಇದು ಅವರ ಕೆರಿಯರ್​ನ ಕಪ್ಪು ಚುಕ್ಕೆಯಾಗಿರಲಿದೆ ಎಂದು ತಿಳಿಸಿದರು. ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ಭಾರತದ ಮೊದಲ ಟೆಸ್ಟ್ ಸರಣಿಯನ್ನು ಗೆದ್ದಿರುವುದು ಒಳಗೊಂಡಿರುವಂತೆ, ಕೊಹ್ಲಿ ನೇತೃತ್ವದಲ್ಲಿ ಭಾರತವು ಅಸಾಧಾರಣ ಪ್ರದರ್ಶನ ನೀಡಿದೆ ಎಂದು ಕ್ಲೈವ್ ಲಾಯ್ಡ್​ ತಿಳಿಸಿದರು.

ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದರೂ, ವಿಶ್ವ ಕ್ರಿಕೆಟ್‌ನಲ್ಲಿ ಪ್ರಬಲ ತಂಡಗಳಲ್ಲಿ ಒಂದಾಗಿ ಉಳಿದಿದ್ದಾರೆ. ಇದಕ್ಕೆ ಕಾರಣ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿರುವುದು. ಬಹುಶಃ ವಿಶ್ವ ಕಪ್ ಅನ್ನು ಗೆದ್ದಿಲ್ಲ ಎಂಬ ಕಾರಣಕ್ಕೆ ಅವರದ್ದು ಕಳಪೆ ನಾಯಕತ್ವ ಎನ್ನಲಾಗುವುದಿಲ್ಲ ಎಂದು ಲಾಯ್ಡ್ ನ್ಯೂಸ್ 9ಗೆ​ ತಿಳಿಸಿದರು.

ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಭಾರತ ತಂಡದ ಪ್ರಚಂಡ ಆಟಗಾರ. ಮುಂದಿನ ದಿನಗಳಲ್ಲಿ ಅವರೇನು ಮಾಡಬೇಕು ಅದನ್ನು ಮುಂದುವರೆಸಲಿದ್ದಾರೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಜನರು ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಲಿದ್ದಾರೆ. ಬ್ಯಾಟ್‌ ಮೂಲಕ ಕೊಹ್ಲಿಯು ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ” ಎಂದು ವೆಸ್ಟ್ ಇಂಡೀಸ್ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಕ್ಲೈವ್ ಲಾಯ್ಡ್​ ತಿಳಿಸಿದರು.

ಭಾರತ ತನ್ನ ಅಭಿಯಾನವನ್ನು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡು ಹೀನಾಯ ಸೋಲಿನೊಂದಿಗೆ ಪ್ರಾರಂಭಿಸಿತು. ಇದು ಅವರ ನಾಕೌಟ್ ಭರವಸೆಯನ್ನು ಹಳಿತಪ್ಪಿಸಿತು. ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ದೊಡ್ಡ ಗೆಲುವು ಮೂಡಿಬಂದರೂ, 2012 ರ ನಂತರ ಮೊದಲ ಬಾರಿಗೆ ಸೆಮಿಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ, ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಭಾರತಕ್ಕೆ ಹೆಮ್ಮೆಪಡುವ ಹಲವಾರು ಕ್ಷಣಗಳನ್ನು ನೀಡಿದ್ದಾರೆ. ಈಗಲೂ ಟೀಮ್ ಇಂಡಿಯಾ ಟಿ20 ಕ್ರಿಕೆಟ್​ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿ ಉಳಿದಿದೆ ಎಂದು ಕ್ಲೈವ್ ಲಾಯ್ಡ್​ ಹೇಳಿದರು.

ಟೀಮ್ ಇಂಡಿಯಾ ODI ಮತ್ತು T20I ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಭಾರತ ತಂಡವು ಬಲಿಷ್ಠವಾಗಿದೆ. ಮುಂದಿನ ಸೀಸನ್​ಗಳಲ್ಲಿ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆ. ಇದಾಗ್ಯೂ ಟೂರ್ನಿಯಿಂದ ಭಾರತ ತಂಡವು ಹೊರಬಿದ್ದಿದ್ದರ ಪರಿಣಾಮ ಕಾಣಿಸಲಿದೆ ಎಂದು ಲಾಯ್ಡ್ ಅಭಿಪ್ರಾಯಪಟ್ಟರು. ಏಕೆಂದರೆ ಭಾರತ ತಂಡದ ನಿರ್ಗಮನವು ಉಳಿದ ಪಂದ್ಯಗಳಿಗೆ ವೀಕ್ಷಕರ ಕೊರತೆಯನ್ನು ಉಂಟು ಮಾಡಲಿದೆ. ಉಳಿದ ಪಂದ್ಯಗಳ ವೀಕ್ಷಕರ ಸಂಖ್ಯೆಯ ಮೇಲೆ ಏರಿಳಿತದ ಪರಿಣಾಮವನ್ನು ಬೀರುವ ನಿರೀಕ್ಷೆಯಿದೆ ಎಂದು ಲಾಯ್ಡ್ ಹೇಳಿದರು.

ಭಾರತವು ಸೆಮಿಫೈನಲ್‌ಗೆ ಪ್ರವೇಶಿಸದಿರುವ ಬಗ್ಗೆ ನನಗೆ ನಿರಾಶೆಯಾಗಿದೆ. ಸೆಮಿಫೈನಲ್‌ನಲ್ಲಿ ಭಾರತ ಇದ್ದಿದ್ದರೆ, ಸ್ಟೇಡಿಯಂ ತುಂಬಿ ತುಳುಕುತ್ತಿತ್ತು. ಭಾರತ ತಂಡವು ನಾಕೌಟ್ ಪಂದ್ಯವನ್ನು ಆಡುವಾಗ ಕ್ರೀಡಾಂಗಣದೊಳಗಿನ ವಾತಾವರಣ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆ. ಆದರೆ ಈ ಬಾರಿ ಸ್ವಲ್ಪ ನಿರಾಶಾದಾಯಕವಾಗಿದೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ನ್ಯೂಸ್ 9ಗೆ ತಿಳಿಸಿದರು.

ಇನ್ನು ವೆಸ್ಟ್ ಇಂಡೀಸ್ ತಂಡದ ಈ ಬಾರಿ ಪ್ರದರ್ಶನದ ಬಗ್ಗೆ ಮಾತನಾಡಿದ ಲಾಯ್ಡ್, ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ವಿಂಡೀಸ್‌ನ ಕಳಪೆ ಪ್ರದರ್ಶನ ನೀಡಿರುವುದು ನಿರಾಶೆಯನ್ನು ಹೆಚ್ಚಿಸಿದೆ. ಎರಡು ಬಾರಿ (2012 ಮತ್ತು 2016) ಚಾಂಪಿಯನ್ ಆಗಿರುವ ಕೆರಿಬಿಯನ್ನರು (ವೆಸ್ಟ್ ಇಂಡೀಸ್​) 2022 ರ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಏಕೆಂದರೆ ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ಸ್ವಲ್ಪ ಸಿಂಹಾವಲೋಕನ ಮಾಡುತ್ತಾರೆ ಮತ್ತು ಮುಂದಿನ ವಿಶ್ವಕಪ್‌ನಲ್ಲಿ ಉತ್ತಮ ತಂಡವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ವಿಂಡೀಸ್ ದಂತಕಥೆ ಕ್ಲೈವ್ ಲಾಯ್ಡ್ ತಿಳಿಸಿದರು.

ಇದೇ ವೇಳೆ ಈ ಬಾರಿಯ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಲೈವ್ ಲಾಯ್ಡ್​, ಸೆಮಿ-ಫೈನಲ್ ಲೈನ್-ಅಪ್‌ಗಳಿಂದ ನಾಲ್ಕು ತಂಡಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸುಲಭವಲ್ಲ. ಆದರೆ ನ್ಯೂಜಿಲೆಂಡ್‌ನ ಸೈಲೆಂಟ್ ವಿನ್ನರ್‌ಗಳ ಪ್ರವೃತ್ತಿಯು ಈ ಬಾರಿ ಕೂಡ ನಡೆಯಲಿದೆ ಎಂದು ಭಾವಿಸುತ್ತೇನೆ. ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಕಿವೀಸ್ ಇಂಗ್ಲೆಂಡ್ ವಿರುದ್ಧ ಸೆಣಸಿದರೆ, ಗುರುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನವನ್ನು ಎದುರಿಸಲಿದೆ. ಫೈನಲ್ ಪಂದ್ಯ ಭಾನುವಾರ ದುಬೈನಲ್ಲಿ ನಡೆಯಲಿದೆ. ಆದರೆ ಫೈನಲ್​ ಯಾರು ಗೆಲ್ತಾರೆ ಎಂಬುದನ್ನು ನಾನು ಹೇಳಲಾರೆ ಎಂದರು.

ಇದಾಗ್ಯೂ ಆಸ್ಟ್ರೇಲಿಯಾ ಸಾಕಷ್ಟು ಚೆನ್ನಾಗಿ ಆಡಿದೆ, ಪಾಕಿಸ್ತಾನವು ಉತ್ತಮವಾಗಿ ಆಡಿದೆ. ಇನ್ನು ಇಂಗ್ಲೆಂಡ್ ಬಿಳಿ-ಬಾಲ್ ಕ್ರಿಕೆಟ್‌ನ ಶಕ್ತಿಯಾಗಿ ಮಾರ್ಪಟ್ಟಿದೆ. ಆದರೆ ನನ್ನ ಡಾರ್ಕ್ ಹಾರ್ಸ್ ನ್ಯೂಜಿಲೆಂಡ್ ಆಗಿದೆ ಎನ್ನುವ ಮೂಲಕ ಈ ಸಲ ಕಿವೀಸ್ ಪಡೆ ಕಪ್ ಗೆಲ್ಲುವ ಫೇವರೇಟ್ ತಂಡ ಎಂದು ಪರೋಕ್ಷವಾಗಿ ತಿಳಿಸಿದರು.

ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಆಡಿದ ರೀತಿಯಲ್ಲಿ ತಮ್ಮ ಪ್ರತಿಭೆ ಮತ್ತು ಕೌಶಲ್ಯತೆಯನ್ನು ಪ್ರದರ್ಶಿಸಿದ್ದರು. ಅವರು ಆಡಿದ ಎಲ್ಲಾ ಪಂದ್ಯಗಳಲ್ಲಿ ಅವರ ಬುದ್ಧಿವಂತಿಕೆಯನ್ನು ತೋರಿಸಿದ್ದಾರೆ. ನ್ಯೂಜಿಲೆಂಡ್​ಗೆ ಗೆಲುವಿಗಾಗಿ ಏನು ಮಾಡಬೇಕೆಂಬ ಕೌಶಲ್ಯವಿದೆ. ಹೀಗಾಗಿ ಕಿವೀಸ್ ಪಡೆ ಸೆಮಿ-ಫೈನಲ್‌ನಲ್ಲಿ ಮತ್ತು ಬಹುಶಃ ಫೈನಲ್‌ನಲ್ಲಿಯೂ ಪ್ರಬಲ ತಂಡವಾಗಿ ಕಾಣಿಸಲಿದೆ ಎಂದು ಕ್ಲೈವ್ ಲಾಯ್ಡ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

 

(T20 WC failure a blot, not defining moment of Virat Kohli, says Clive Lloyd)

Published On - 7:38 pm, Tue, 9 November 21