U-19 Asia Cup: ಚೊಚ್ಚಲ ಅಂಡರ್-19 ಏಷ್ಯಾಕಪ್‌ ಗೆದ್ದ ಬಾಂಗ್ಲಾ; ಯುಎಇಗೆ ನಿರಾಸೆ

|

Updated on: Dec 17, 2023 | 8:15 PM

U-19 Asia Cup 2023: ಡಿಸೆಂಬರ್ 17 ರ ಭಾನುವಾರದಂದು ದುಬೈನಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಯುಎಇ ನಡುವಿನ ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಯುಎಇ ತಂಡವನ್ನು 195 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಬಾಂಗ್ಲಾದೇಶ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

U-19 Asia Cup: ಚೊಚ್ಚಲ ಅಂಡರ್-19 ಏಷ್ಯಾಕಪ್‌ ಗೆದ್ದ ಬಾಂಗ್ಲಾ; ಯುಎಇಗೆ ನಿರಾಸೆ
ಬಾಂಗ್ಲಾದೇಶ ತಂಡ
Follow us on

ಡಿಸೆಂಬರ್ 17 ರ ಭಾನುವಾರದಂದು ದುಬೈನಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಯುಎಇ (BAN vs UAE) ನಡುವಿನ ಅಂಡರ್ 19 ಏಷ್ಯಾಕಪ್ ಫೈನಲ್ (U19 Asia Cup Final) ಪಂದ್ಯದಲ್ಲಿ ಯುಎಇ ತಂಡವನ್ನು 195 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಬಾಂಗ್ಲಾದೇಶ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪಡೆ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 282 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಯುಎಇ ತಂಡ, ಬಾಂಗ್ಲಾ ಬೌಲಿಂಗ್ ದಾಳಿಗೆ ನಲುಗಿ ಕೇವಲ 87 ರನ್​​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿಯುವ ಅವಕಾಶದಿಂದ ವಂಚಿತವಾಯಿತು. ಬಾಂಗ್ಲಾ ತಂಡದ ಪರ 129 ರನ್‌ಗಳ ಸ್ಮರಣೀಯ ಇನಿಂಗ್ಸ್‌ ಆಡಿದ ಆರಂಭಿಕ ಆಶಿಕುರ್‌ ರೆಹಮಾನ್‌ ಶಿಬ್ಲಿ (Ashiqur Rahman Shibli) ಪಂದ್ಯ ಶ್ರೇಷ್ಠ ಪ್ರಶಸ್ತಿಯ ಜೊತೆಗೆ ಸರಣಿ ಶ್ರೇಷ್ಠರಾಗಿಯೂ ಆಯ್ಕೆಯಾದರು.

ರೆಹಮಾನ್ ಶಿಬ್ಲಿ ಶತಕ

ಸೆಮಿಫೈನಲ್‌ನಲ್ಲಿ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸಿದ್ದ ಯುಎಇ ತಂಡ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಇದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಹಫೂಜುರ್ ರೆಹಮಾನ್ ನಾಯಕತ್ವದ ಬಾಂಗ್ಲಾದೇಶ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 14 ರನ್​ಗಳಿರುವಾಗ ಜೀಶನ್ ಆಲಂ ರೂಪದಲ್ಲಿ ಮೊದಲ ವಿಕೆಟ್ ಪತನವಾಯಿತು. ಆದರೆ ಆ ಬಳಿಕ ಜೊತೆಯಾದ ಅಶಿಕುರ್ ರೆಹಮಾನ್ ಶಿಬ್ಲಿ ಹಾಗೂ ಚೌಧರಿ ಮೊಹಮ್ಮದ್ ರಿಜ್ವಾನ್ ಶತಕದ ಜೊತೆಯಾಟ ಆಡಿದರು. ಅಲ್ಲದೆ ಇಬ್ಬರು ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ವೇಳೆ 60 ರನ್​ಗಳಿಸಿದ್ದ ರಿಜ್ವಾನ್ ವಿಕೆಟ್ ಒಪ್ಪಿಸಿದರೆ, ಆರಂಭಿಕ ರೆಹಮಾನ್ ಶಿಬ್ಲಿ ಮಾತ್ರ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದರು.

282 ರನ್​ಗಳ ಬೃಹತ್ ಟಾರ್ಗೆಟ್

ಶತಕ ಸಿಡಿಸಿದ ರೆಹಮಾನ್​ಗೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಅರಿಫುಲ್ ಇಸ್ಲಾಂ ಕೂಡ ಅರ್ಧಶತಕದ ಇನ್ನಿಂಗ್ಸ್ ಮೂಲಕ ಉತ್ತಮ ಸಾಥ್ ನೀಡಿದರು. ಆದರೆ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಉಳಿದಂತೆ ಕೆಳಕ್ರಮಾಂಕದಲ್ಲಿ ಮಹ್ಫುಜುರ್ ರೆಹಮಾನ್ 21 ರನ್​ಗಳ ಇನ್ನಿಂಗ್ಸ್ ಆಡಿದರೆ, ಆರಂಭಿಕರಾಗಿ ಕಣಕ್ಕಿಳಿದು ಕೊನೆಯ ಓವರ್​ವರೆಗೂ ಬ್ಯಾಟ್ ಬೀಸಿದ ರೆಹಮಾನ್ 149 ಎಸೆತಗಳಲ್ಲಿ 129 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಆರಂಭದಲ್ಲೇ ತತ್ತರಿಸಿದ ಯುಎಇ

ಈ ಗುರಿ ಬೆನ್ನಟ್ಟಿದ ಯುಎಇಗೆ ಹೇಳಿಕೊಳ್ಳುವ ಆರಂಭ ಸಿಗಲಿಲ್ಲ. ಹೀಗಾಗಿ ತಂಡ ಕೇವಲ 45 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ಅಲ್ಲದೆ ತಂಡದ ವಿಕೆಟ್‌ಗಳು ನಿರಂತರವಾಗಿ ಬೀಳುತ್ತಲೇ ಇದ್ದವು. ಅಂತಿಮವಾಗಿ ಇಡೀ ತಂಡವು 24.5 ಓವರ್‌ಗಳಲ್ಲಿ ಕೇವಲ 87 ರನ್‌ಗಳಿಸಲಷ್ಟೇ ಶಕ್ತವಾಗಿ ಆಲೌಟ್ ಆಯಿತು. ಇನ್ನು ಬಾಂಗ್ಲಾ ಪರ ಮರೂಫ್ ಮೃಧಾ ಮತ್ತು ರುಹಾನತ್ ಬೋರ್ಸನ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಇಕ್ಬಾಲ್ ಮತ್ತು ಪರ್ವೇಜ್ ರೆಹಮಾನ್ ತಲಾ 2 ವಿಕೆಟ್ ಪಡೆದರು.

ಶಿಬ್ಲಿಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿ

ಬಾಂಗ್ಲಾದೇಶದ ವಿಕೆಟ್‌ಕೀಪರ್ ಆಶಿಕುರ್ ರೆಹಮಾನ್ ಶಿಬ್ಲಿ ಫೈನಲ್‌ನಲ್ಲಿ ಮಾತ್ರವಲ್ಲದೆ ಇಡೀ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಟೂರ್ನಿಯ 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 249 ರನ್ ಬಾರಿಸಿದ ರೆಹಮಾನ್ ಶಿಬ್ಲಿ ಪಂದ್ಯಾವಳಿಯ ಆಟಗಾರನಾಗಿ ಆಯ್ಕೆಯಾದರು. ರೆಹಮಾನ್ ಹೊರತುಪಡಿಸಿ ಪಾಕಿಸ್ತಾನದ ಅಜಾನ್ ಅವೈಸ್ ಕೂಡ ಪಂದ್ಯಾವಳಿಯ 4 ಪಂದ್ಯಗಳಲ್ಲಿ 222 ರನ್ ಬಾರಿಸಿದರು. ಇನ್ನು ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ರಾಜ್ ಲಿಂಬಾನಿ ಆಡಿದ 4 ಪಂದ್ಯಗಳಲ್ಲಿ 12 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Sun, 17 December 23