ಅಂಡರ್-19 ಏಷ್ಯಾಕಪ್ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಟೀಂ ಇಂಡಿಯಾ ಇದೀಗ ಭರ್ಜರಿ ಜಯದೊಂದಿಗೆ ಗೆಲುವಿನ ಲಯಕ್ಕೆ ಮರಳಿದೆ. ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ಭಾರತ ಯುವ ಪಡೆ, ತನ್ನ ಎರಡನೇ ಪಂದ್ಯದಲ್ಲಿ ದಾಖಲೆಯ ಜಯ ದಾಖಲಿಸಿದ್ದಾರೆ. ಶಾರ್ಜಾದಲ್ಲಿ ಇಂದು ನಡೆದ ಭಾರತ ಹಾಗೂ ಜಪಾನ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 211 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿತು. ಇದನ್ನು ಬೆನ್ನಟ್ಟಿದ ಜಪಾನ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಈ ಬೃಹತ್ ಗೆಲುವಿನಲ್ಲಿ ನಾಯಕ ಮೊಹಮ್ಮದ್ ಅಮಾನ್ ಸಿಡಿಸಿದ ಅಜೇಯ ಶತಕ ಪ್ರಮುಖ ಪಾತ್ರವಹಿಸಿತು.
ಪಂದ್ಯದಲ್ಲಿ ಟಾಸ್ ಸೋತು ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ 13 ವರ್ಷದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ತಂಡಕ್ಕೆ ಬಿರುಸಿನ ಆರಂಭ ನೀಡಿದರು. ಇವರಿಬ್ಬರು 7.1 ಓವರ್‌ಗಳಲ್ಲಿ 65 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ವೈಭವ್ 23 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು. ವೈಭವ್ ವಿಕೆಟ್ ಪತನದ ನಂತರವೂ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಆಯುಷ್, 186ರ ಸ್ಟ್ರೈಕ್ ರೇಟ್‌ನಲ್ಲಿ 29 ಎಸೆತಗಳಲ್ಲಿ 54 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಹೀಗಾಗಿ 10.5 ಓವರ್‌ಗಳಲ್ಲಿ 81 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುವ ಜವಬ್ದಾರಿಯನ್ನು ತಂಡದ ನಾಯಕ ಮೊಹಮ್ಮದ್ ಅಮಾನ್ ವಹಿಸಿಕೊಂಡರು. ಅವರು ಮೂರನೇ ವಿಕೆಟ್‌ಗೆ ಆಂಡ್ರೆ ಸಿದಾರ್ಥ್ ಅವರೊಂದಿಗೆ 58 ರನ್ ಮತ್ತು ಕೆಪಿ ಕಾರ್ತಿಕೇಯ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 122 ರನ್‌ಗಳ ಎರಡು ಪ್ರಮುಖ ಪಾಲುದಾರಿಕೆಗಳನ್ನು ಮಾಡಿದರು.
ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾದ ನಂತರವೂ ಕೊನೆಯವರೆಗೂ ಉಳಿದು 118 ಎಸೆತಗಳಲ್ಲಿ 122 ರನ್‌ಗಳ ನಾಯಕತ್ವದ ಇನ್ನಿಂಗ್ಸ್‌ಗಳನ್ನು ಆಡಿ ತಂಡದ ಸ್ಕೋರ್ ಅನ್ನು 339ಕ್ಕೆ ಕೊಂಡೊಯ್ದರು. ಈ ಬೃಹತ್ ಗುರಿ ಬೆನ್ನಟ್ಟಿದ ಜಪಾನ್ ತಂಡವನ್ನು ಅಲ್ಪ ರನ್‌ಗಳಿಗೆ ಕಟ್ಟಿಹಾಕುವ ಕೆಲಸವನ್ನು ಟೀಂ ಇಂಡಿಯಾ ವೇಗಿಗಳು ಅಚ್ಚುಕಟ್ಟಾಗಿ ಮಾಡಿದರು. ಹೀಗಾಗಿ ಜಪಾನ್ ತಂಡ 50 ಓವರ್‌ಗಳಲ್ಲಿ ಕೇವಲ 128 ರನ್ಗಳಿಸಲಷ್ಟೇ ಶಕ್ತವಾಗಿ 211 ರನ್ಗಳಿಂದ ಸೋಲೊಪ್ಪಿಕೊಂಡಿತು.
ಭಾರತ ತಂಡ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿತ್ತು. ಇದು ತಂಡಕ್ಕೆ ದೊಡ್ಡ ಹೊಡೆತವಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕಂಡುಕೊಂಡ ಭಾರತ, ಜಪಾನ್ ವಿರುದ್ಧ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಯುವ ಪಡೆ ಸೆಮಿಫೈನಲ್ ತಲುಪುವ ಸನಿಹದಲ್ಲಿದ್ದು, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಯುಎಇ ತಂಡವನ್ನು ಸೋಲಿಸಿದರೆ ಸುಗಮವಾಗಿ ಸೆಮೀಸ್ಗೇರಲಿದೆ. ಪ್ರಸ್ತುತ, ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ಮತ್ತು +1.680 ನೆಟ್ ರನ್ ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಯುಎಇ 2 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಈಗಾಗಲೇ ಸೆಮಿಫೈನಲ್ ತಲುಪಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Mon, 2 December 24