U19 ಏಷ್ಯಾಕಪ್ ಫೈನಲ್ಗೇರಿದ ಟೀಂ ಇಂಡಿಯಾ; ಫೈನಲ್ ಎದುರಾಳಿ ಯಾರು ಗೊತ್ತಾ?
U19 Asia Cup Semi-final: ಭಾರತ ಅಂಡರ್-19 ತಂಡ ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಮಳೆಯಿಂದಾಗಿ 20 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ, ಶ್ರೀಲಂಕಾ 138 ರನ್ ಗಳಿಸಿತ್ತು. ಇದನ್ನು ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 18 ಓವರ್‌ಗಳಲ್ಲಿ ಮುಗಿಸಿತು. ಅಜೇಯವಾಗಿ ಮುನ್ನಡೆದ ಭಾರತ, ಪ್ರಶಸ್ತಿ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ನಡೆದ ಅಂಡರ್-19 ಏಷ್ಯಾಕಪ್‌ನ ಸೆಮಿಫೈನಲ್ (U19 Asia Cup Semi-final) ಪಂದ್ಯದಲ್ಲಿ ಭಾರತ ಯುವ ಪಡೆ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರಿಂದ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 138 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಸವಾಲನ್ನು ಪೂರ್ಣಗೊಳಿಸಿತು. ಈ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದರೆ, ಇತ್ತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇಂದೇ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್ಪ್ರವೇಶಿಸಿದೆ.
ಲಂಕಾ ತಂಡಕ್ಕೆ ಕಳಪೆ ಆರಂಭ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕಳಪೆ ಆರಂಭ ಕಂಡಿತು. ಕಿಶನ್ ಸಿಂಗ್ ಇನ್ನಿಂಗ್ಸ್ನ ಮೂರನೇ ಓವರ್ನಲ್ಲೇ ಆರಂಭಿಕ ದುಲ್ನಿತ್ ಸಿಗೇರಾ ಅವರ ವಿಕೆಟ್ ಉರುಳಿಸಿದರು. ಮತ್ತೊಬ್ಬ ಆರಂಭಿಕ ವೀರನ್ ಚಾಮುದಿತಾ ಕೂಡ 19 ರನ್‌ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಕವಿಜ ಗಮಗೆ ಕೂಡ ಕೇವಲ 1 ರನ್‌ಗಳಿಸಿ ರನೌಟ್ಗೆ ಬಲಿಯಾದರು. ಹೀಗಾಗಿ ಲಂಕಾ ತಂಡ 38 ರನ್ಗಳಿಗೆ 3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಬಳಿಕ ಜೊತೆಯಾದ ವಿಮತ್ ದಿನ್ಸಾರ ಹಾಗೂ ಚಾಮಿಕಾ ತಂಡವನ್ನು 70 ರನ್ಗಳ ಗಡಿ ದಾಟಿಸಿದರು.
ಈ ವೇಳೆ ವಿಮತ್ ದಿನ್ಸಾರ 32 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಚಾಮಿಕಾ 42 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯಲ್ಲಿ ಸೀತ್ಮಿಕಾ ಸೆನೆವಿರತ್ನೆ ಕೂಡ 30 ರನ್ಗಳ ಕಾಣಿಕೆ ನೀಡಿದರು. ಭಾರತದ ಪರ ಹೆನಿಲ್ ಪಟೇಲ್ ಮತ್ತು ಕನಿಷ್ಕ್ ಚೌಹಾಣ್ ತಲಾ ಎರಡು ವಿಕೆಟ್ ಪಡೆದರೆ, ಕಿಶನ್ ಸಿಂಗ್, ದೀಪೇಶ್ ದೇವೇಂದ್ರನ್ ಮತ್ತು ಖಿಲನ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಆಯುಷ್- ವೈಭವ್ ಫೇಲ್
ಶ್ರೀಲಂಕಾ ನೀಡಿದ 139 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್ನಲ್ಲಿ ನಾಯಕ ಆಯುಷ್ ಮ್ಹಾತ್ರೆ ಅವರ ರೂಪದಲ್ಲಿ ಟೀಂ ಇಂಡಿಯಾ ಆಘಾತ ಎದುರಿಸಿತು. ಆದ್ದರಿಂದ ವೈಭವ್ ಸೂರ್ಯವಂಶಿ ಉತ್ತಮ ಇನ್ನಿಂಗ್ಸ್ ನೀಡುವ ನಿರೀಕ್ಷೆಯಿತ್ತು. ಆದರೆ ವೈಭವ್ ಕೂಡ 6 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 9 ರನ್ ಗಳಿಸಿ ಔಟಾದರು. ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡ ನಂತರ ಟೀಂ ಇಂಡಿಯಾದ ಮೇಲೆ ಒತ್ತಡ ಹೆಚ್ಚಾಯಿತು. ಆದರೆ ಆ ಬಳಿಕ ಜೊತೆಯಾದ ಆರನ್ ಜಾರ್ಜ್ ಮತ್ತು ವಿಹಾನ್ ಮಲ್ಹೋತ್ರಾ ತಂಡದ ಇನ್ನಿಂಗ್ಸ್ ಕಟ್ಟಿದರು.
125 ಎಸೆತಗಳಲ್ಲಿ 209 ರನ್..! ಏಷ್ಯಾಕಪ್‌ನಲ್ಲಿ ಅಜೇಯ ಶತಕ ಸಿಡಿಸಿದ ಅಭಿಗ್ಯಾನ್ ಕುಂಡು
ಜಾರ್ಜ್-ವಿಹಾನ್ ಗೆಲುವಿನ ಅರ್ಧಶತಕ
ಇದೇ ವೇಳೆ ವಿಹಾನ್ ಮಲ್ಹೋತ್ರಾ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಆರನ್ ಜಾರ್ಜ್ ಕೂಡ 42 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಅಂತಿಮವಾಗಿ ವಿಹಾನ್ ಮಲ್ಹೋತ್ರಾ ಔಟಾಗದೆ 61 ರನ್ ಗಳಿಸಿದರೆ, ಆರನ್ ಜಾರ್ಜ್ ಔಟಾಗದೆ 58 ರನ್ ಬಾರಿಸಿದರು. ಇಬ್ಬರ ಶತಕದ ಜೊತೆಯಾಟವು ಟೀಂ ಇಂಡಿಯಾ ಗೆಲುವಿಗೆ ಕಾರಣವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Fri, 19 December 25
