
ದುಬೈನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾಕಪ್ (U19 Asia Cup) ಟೂರ್ನಿಯ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಭಾರತ ಯುವ ಪಡೆ ಮಲೇಷ್ಯಾ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬರೋಬ್ಬರಿ 408 ರನ್ ಕಲೆಹಾಕಿದೆ. ತಂಡ ಇಷ್ಟು ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಭಿಗ್ಯಾನ್ ಕುಂಡು ( Abhigyan Kundu) ಅಜೇಯ ದ್ವಿಶತಕ ಬಾರಿಸಿದ್ದಾರೆ. ಮಾತ್ರವಲ್ಲದೆ ವೇದಾಂತ್ ತ್ರಿವೇದಿ ಅವರೊಂದಿಗೆ 209 ರನ್‌ಗಳ ಜೊತೆಯಾಟವನ್ನು ನಡೆಸಿ ತಂಡವನ್ನು ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು.
ದುಬೈನ ಸೆವೆನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಲೇಷ್ಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಆಯುಷ್ 14 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ವಿಹಾನ್ ಕೂಡ 7 ರನ್‌ಗಳಿಗೆ ಸುಸ್ತಾದರು. ಆದಾಗ್ಯೂ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಎಡವಿದ ವೈಭವ್ 50 ರನ್‌ಗಳಿಗೆ ಔಟಾದರು.
ಆ ಬಳಿಕ ಜೊತೆಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಭಿಗ್ಯಾನ್ ಕುಂಡು ಮತ್ತು ವೇದಾಂತ್ ತ್ರಿವೇದಿ ತಂಡದ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ 209 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಕುಂಡು 125 ಎಸೆತಗಳಲ್ಲಿ 16 ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್‌ಗಳ ಸಹಿತ ಅಜೇಯ 209 ರನ್ ಬಾರಿಸಿದರೆ, ಶತಕ ವಂಚಿತರಾದ ವೇದಾಂತ್ ತ್ರಿವೇದಿ 106 ಎಸೆತಗಳಲ್ಲಿ 90 ರನ್ ಗಳಿಸಿದರು. ಆರಂಭಿಕ ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಮಲೇಷ್ಯಾ ಪರ, ಮುಹಮ್ಮದ್ ಅಕ್ರಮ್ 89 ರನ್‌ಗಳಿಗೆ 5 ವಿಕೆಟ್ ಪಡೆದರು.
ಬ್ಯಾಟಿಂಗ್ನಲ್ಲಿ ವಿಫಲ, ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್; ವಿಡಿಯೋ
ಯೂತ್ ಏಕದಿನ ಪಂದ್ಯಗಳಲ್ಲಿ ದಾಖಲೆಯನ್ನು ಎಣಿಸಲಾಗುವುದಿಲ್ಲ. ಕುಂಡು ಅವರ ರನ್ ಮತ್ತು ಶತಕವನ್ನು ಯೂತ್ ಏಕದಿನ ಪಂದ್ಯಗಳ ದಾಖಲೆಗೆ ಸೇರಿಸಲಾಗುವುದಿಲ್ಲ. ಏಕೆಂದರೆ ಮಲೇಷ್ಯಾ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿಲ್ಲ. ಆದ್ದರಿಂದ ಈ ಪಂದ್ಯವು 19 ವರ್ಷದೊಳಗಿನವರ ಅಂತರರಾಷ್ಟ್ರೀಯ ಪಂದ್ಯದ ಸ್ಥಾನಮಾನವನ್ನು ಹೊಂದಿಲ್ಲ. ಪಾಕಿಸ್ತಾನದ ಸಮೀರ್ ಮಿನ್ಹಾಸ್ ಮಲೇಷ್ಯಾ ವಿರುದ್ಧ 177 ರನ್ ಗಳಿಸಿದ್ದರು. ಆ ರನ್ ಅನ್ನು ಯೂತ್ ಏಕದಿನ ಪಂದ್ಯಗಳ ದಾಖಲೆಯಲ್ಲಿ ಎಣಿಸಲಾಗುವುದಿಲ್ಲ. ಬಾಂಗ್ಲಾದೇಶದ ಸೌಮ್ಯ ಸರ್ಕಾರ್ ಕೂಡ 2012 ರ ಏಷ್ಯಾಕಪ್‌ನಲ್ಲಿ ಕತಾರ್ ವಿರುದ್ಧ ದ್ವಿಶತಕ ಗಳಿಸಿದರು. ಆ ದಾಖಲೆಯನ್ನು ಯೂತ್ ಏಕದಿನ ಪಂದ್ಯಗಳಲ್ಲಿಯೂ ಎಣಿಸಲಾಗುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Tue, 16 December 25