
ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ 2026 ರ ಅಂಡರ್-19 ವಿಶ್ವಕಪ್ (U19 World Cup) ಪ್ರಾರಂಭವಾಗಿದೆ. ಅದರಂತೆ ಪಂದ್ಯಾವಳಿಯ 6ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಹೀನಾಯ ಸೋಲನ್ನು ಅನುಭವಿಸಿದೆ. ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 28 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ (Afghanistan vs South Africa) ಎಲ್ಲರನ್ನೂ ಅಚ್ಚರಿಗೊಳಿಸಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 266 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 238 ರನ್‌ಗಳಿಗೆ ಆಲೌಟ್ ಆಗುವ ಮೂಲಕ 28 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ವಿಶ್ವಕಪ್‌ನ ಈ ಆರನೇ ಪಂದ್ಯವು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್‌ಗೆ 266 ರನ್ ಗಳಿಸಿತು. ಮೊದಲ ವಿಕೆಟ್ ಬೇಗನೆ ಕಳೆದುಕೊಂಡ ನಂತರ, ಖಾಲಿದ್ ಅಹ್ಮದ್‌ಜೈ ಮತ್ತು ಫೈಸಲ್ ಶಿನೋಜಾಡಾ 152 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು. ಇಬ್ಬರೂ ಅರ್ಧಶತಕ ಬಾರಿಸಿದರಾದರೂ ಶತಕದ ಗಡಿ ತಲುಪುವ ಮೊದಲೇ ಔಟಾದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಔಟಾದರು. ನಂತರ ಉಜೈರುಲ್ಲಾ ನಿಯಾಜೈ 51 ಎಸೆತಗಳಲ್ಲಿ 51 ರನ್ ಗಳಿಸಿ ತಂಡವನ್ನು 266 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಮತ್ತೊಂದೆಡೆ ಕಳಪೆ ಆರಂಭ ಪಡೆದ ದಕ್ಷಿಣ ಆಫ್ರಿಕಾ ಕೇವಲ 49 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಹತ್ತು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳು ರನ್ ಔಟ್‌ಗಳ ಮೂಲಕ ಬಿದ್ದಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಜೇಸನ್ ರೋಲ್ಯಾಂಡ್ಸ್ 98 ರನ್ ಬಾರಿಸಿ ರನೌಟ್ಗೆ ಬಲಿಯಾದರು. ಉಳಿದಂತೆ ಯಾವ ಬ್ಯಾಟ್ಸ್ಮನ್ಗೂ 30 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೂವರು ಬ್ಯಾಟ್ಸ್‌ಮನ್‌ಗಳು 20 ರನ್‌ಗಳ ಗಡಿ ದಾಟಿದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಇದು ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಗೆಲುವು ಕಷ್ಟಕರವಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 47.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Sat, 17 January 26