ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಯಂಗ್ ಇಂಡಿಯಾಗೆ ಕ್ರಿಕೆಟ್ ದೇವರ ಪಾಠ

U19 World Cu, India vs Pakistan: ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸೆಮಿಫೈನಲ್ ಪ್ರವೇಶಕ್ಕೆ ನಿರ್ಣಾಯಕವಾಗಿರುವ ಈ ಪಂದ್ಯಕ್ಕೂ ಮುನ್ನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾರತದ ಯುವ ಆಟಗಾರರೊಂದಿಗೆ ವೀಡಿಯೊ ಸಂವಾದ ನಡೆಸಿದ್ದಾರೆ. ಏಷ್ಯಾಕಪ್ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿರುವ ಟೀಂ ಇಂಡಿಯಾಗೆ ಸಚಿನ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಆತ್ಮವಿಶ್ವಾಸ ತುಂಬಿದ್ದಾರೆ. ಫೆಬ್ರವರಿ 1ರಂದು ನಡೆಯುವ ಈ ಕದನದಲ್ಲಿ ಭಾರತ ಗೆದ್ದರೆ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.

ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಯಂಗ್ ಇಂಡಿಯಾಗೆ ಕ್ರಿಕೆಟ್ ದೇವರ ಪಾಠ
Ind Vs Pak

Updated on: Jan 31, 2026 | 5:41 PM

ಅಂಡರ್ 19 ವಿಶ್ವಕಪ್​ನಲ್ಲಿ (U19 World Cup) ಫೆಬ್ರವರಿ 1 ರಂದು ಭಾರತ ಹಾಗೂ ಪಾಕಿಸ್ತಾನದ (India vs Pakistan) ಯುವ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಈ ಹಿಂದೆ ನಡೆದಿದ್ದ ಏಷ್ಯಾಕಪ್​ ಫೈನಲ್​ನಲ್ಲಿ ಭಾರತಕ್ಕೆ ಸೋಲಿನ ಆಘಾತ ನೀಡಿದ್ದ ಪಾಕ್ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿ ಟೀಂ ಇಂಡಿಯಾವಿದೆ. ಅದಕ್ಕೆ ಪೂರಕವೆಂಬಂತೆ ಯುವ ಆಟಗಾರರಿಗೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಪಂದ್ಯಕ್ಕೆ ಒಂದು ದಿನ ಮೊದಲು ವಿಡಿಯೋ ಕರೆಯ ಮುಖಾಂತರ ಸವಾಂದ ನಡೆಸಿದ್ದಾರೆ. ಈ ವೇಳೆ ತಮ್ಮ ಅನುಭವಗಳನ್ನು ಧಾರೆ ಎರೆಯುವ ಮೂಲಕ ಯಂಗ್ ಇಂಡಿಯಾದ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ವೀಡಿಯೊ ಕರೆ

ಅಂಡರ್-19 ವಿಶ್ವಕಪ್ ಸೂಪರ್-6 ರ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ಭಾನುವಾರ ಪರಸ್ಪರ ಮುಖಾಮುಖಿಯಾಗಲಿವೆ. ಗ್ರೂಪ್-1 ರಿಂದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮತ್ತು ಗ್ರೂಪ್-2 ರಿಂದ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ತಲುಪಿದ್ದು, ಉಳಿದ ಸ್ಥಾನಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಪೈಪೋಟಿಯಲ್ಲಿವೆ. ಈ ಹೆಚ್ಚಿನ ಒತ್ತಡದ ಪಂದ್ಯಕ್ಕೂ ಮುನ್ನ, ಬಿಸಿಸಿಐ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಮ್ಮ ಯುವ ಆಟಗಾರರೊಂದಿಗೆ ವೀಡಿಯೊ ಕರೆಯ ಮೂಲಕ ಸಂವಾದ ನಡೆಸಿದರು. ಬ್ಯಾಟಿಂಗ್ ತಂತ್ರ ಮಾತ್ರವಲ್ಲದೆ, ಮಾನಸಿಕವಾಗಿ ಬಲಶಾಲಿ, ಶಿಸ್ತು ಮತ್ತು ನಮ್ರತೆ ಯಶಸ್ಸಿಗೆ ಎಷ್ಟು ಮುಖ್ಯ ಎಂಬುದರ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಂಕಪಟ್ಟಿಯಲ್ಲಿ ಭಾರತದ ಮೇಲುಗೈ

ಭಾರತ ತಂಡವು ಪ್ರಸ್ತುತ 3 ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅದರ ನೆಟ್ ರನ್​ರೇಟ್ +3.337 ಆಗಿದೆ. ಇತ್ತ ಪಾಕಿಸ್ತಾನ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾನುವಾರ ಪಾಕಿಸ್ತಾನ ಗೆದ್ದರೂ ಸಹ ನೆಟ್​ ರನ್ ರೇಟ್​ನಲ್ಲಿ ಭಾರತವನ್ನು ಮೀರಿಸುವುದು ತುಂಬಾ ಕಷ್ಟಕರ. ಆದ್ದರಿಂದ ಪಾಕ್ ತಂಡ ಭಾರತದ ವಿರುದ್ಧ ಭಾರಿ ಅಂತರದಲ್ಲಿ ಗೆಲ್ಲಬೇಕು. ಇತ್ತ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಸಾಕು ನೇರವಾಗಿ ಸೆಮಿಫೈನಲ್​ ಆಡಲಿದೆ.

ಉಭಯ ತಂಡಗಳ ನಡುವಿನ ಈ ಪಂದ್ಯವು ಫೆಬ್ರವರಿ 1 (ಭಾನುವಾರ) ರಂದು ಜಿಂಬಾಬ್ವೆಯ ಬುಲವಾಯೊದಲ್ಲಿರುವ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. ನೀವು ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ