Asia Cup 2025: 40 ರನ್​ಗಳಿಂದ ಗೆದ್ದ ಯುಎಇ; ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿ ಪಾಕ್

Asia Cup 2025: ಏಷ್ಯಾಕಪ್ 2025ರಲ್ಲಿ ಯುಎಇ ತಂಡ ಒಮಾನ್ ತಂಡವನ್ನು 40 ರನ್‌ಗಳಿಂದ ಸೋಲಿಸಿ ತನ್ನ ಮೊದಲ ಲೀಗ್ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋತ ಯುಎಇ, ಈ ಗೆಲುವಿನೊಂದಿಗೆ ಸೂಪರ್-4 ಹಂತಕ್ಕೆ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಲಿಶಾನ್ ಶರಫು (51) ಮತ್ತು ಮುಹಮ್ಮದ್ ವಾಸಿಮ್ (69) ಅವರ ಅರ್ಧಶತಕಗಳಿಂದ ಯುಎಇ 172 ರನ್ ಗಳಿಸಿತು. ಒಮಾನ್ ತಂಡ 130 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನಿಂದ ಪಾಕಿಸ್ತಾನಕ್ಕೆ ಒತ್ತಡ ಹೆಚ್ಚಿದೆ.

Asia Cup 2025: 40 ರನ್​ಗಳಿಂದ ಗೆದ್ದ ಯುಎಇ; ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿ ಪಾಕ್
Uae Team

Updated on: Sep 15, 2025 | 10:30 PM

ಏಷ್ಯಾಕಪ್ 2025 (Asia Cup 2025) ರ 7 ನೇ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್ (UAE vs Oman) ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಒಮಾನ್ ತಂಡವನ್ನು 40 ರನ್​​ಗಳಿಂದ ಮಣಿಸಿದ ಯುಎಇ ತಂಡ ಲೀಗ್​ನಲ್ಲಿ ಮೊದಲ ಗೆಲುವು ದಾಖಲಿಸಿತು. ವಾಸ್ತವವಾಗಿ ಯುಎಇ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆದರೆ ತನ್ನ ಎರಡನೇ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿರುವ ಯುಎಇ ತಂಡ ಇದೀಗ ಸೂಪರ್ -4 ರೇಸ್‌ನಲ್ಲಿ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಯುಎಇ ತಂಡದ ಗೆಲುವು ಪಾಕಿಸ್ತಾನದ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಒಮಾನ್ ಸೋಲಿಸಿದ ಯುಎಇ

ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಅಲಿಶಾನ್ ಶರಫು ಮತ್ತು ನಾಯಕ ಮುಹಮ್ಮದ್ ವಾಸಿಮ್ ಯುಎಇ ಪರ ಇನ್ನಿಂಗ್ಸ್ ಆರಂಭಿಸಿ ದೊಡ್ಡ ಸ್ಕೋರ್‌ಗೆ ಅಡಿಪಾಯ ಹಾಕಿದರು. ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 88 ರನ್‌ಗಳನ್ನು ಸೇರಿಸಿದರು. ಈ ವೇಳೆ ಅಲಿಶಾನ್ ಶರಫು ಕೇವಲ 38 ಎಸೆತಗಳಲ್ಲಿ 51 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದರಲ್ಲಿ 7 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದ್ದವು. ಮುಹಮ್ಮದ್ ವಾಸಿಮ್ ಕೂಡ 54 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 69 ರನ್‌ಗಳ ನಾಯಕತ್ವದ ಇನ್ನಿಂಗ್ಸ್ ಆಡಿದರು.

ಉಳಿದಂತೆ ಮುಹಮ್ಮದ್ ಜೊಹೈಬ್ 21 ರನ್, ಹರ್ಷಿತ್ ಕೌಶಿಕ್ 8 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು, ಇದರಿಂದಾಗಿ ಯುಎಇ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿತು. ಮತ್ತೊಂದೆಡೆ, ಒಮಾನ್ ಪರ ಜಿತೇನ್ ರಮಾನಂದಿ ಗರಿಷ್ಠ 2 ವಿಕೆಟ್ ಪಡೆದರೆ, ಹಸ್ನೈನ್ ಶಾ ಮತ್ತು ಸಮಯ್ ಶ್ರೀವಾಸ್ತವ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಒಮಾನ್‌ ಬ್ಯಾಟಿಂಗ್ ವೈಫಲ್ಯ

173 ರನ್ ಗುರಿ ಬೆನ್ನಟ್ಟಿದ ಒಮಾನ್ ತಂಡದ ಬ್ಯಾಟಿಂಗ್ ತುಂಬಾ ಕಳಪೆಯಾಗಿತ್ತು. ತಂಡವು 7 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಓಮನ್ ತಂಡದ ಅರ್ಧದಷ್ಟು ಆಟಗಾರರು 50 ರನ್ ಕಲೆಹಾಕುವ ತಲುಪುವ ಹೊತ್ತಿಗೆ ಪೆವಿಲಿಯನ್ ಸೇರಿಕೊಂಡರು. ಅಚ್ಚರಿಯ ವಿಷಯವೆಂದರೆ ತಂಡದ ಯಾವುದೇ ಬ್ಯಾಟ್ಸ್​ಮನ್​ಗೂ 30 ರನ್ ಗಳ ಗಡಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಆರ್ಯನ್ ಬಿಶ್ತ್ ತಂಡದ ಪರ ಅತಿ ಹೆಚ್ಚು 24 ರನ್ ಬಾರಿಸಿದರು. ಉಳಿದಂತೆ ನಾಯಕ ಜತಿಂದರ್ ಸಿಂಗ್ 10 ಎಸೆತಗಳಲ್ಲಿ 20 ರನ್, ವಿನಾಯಕ್ ಶುಕ್ಲಾ 20 ರನ್​ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಒಮಾನ್ ತಂಡ 18.4 ಓವರ್​ಗಳಲ್ಲಿ 130 ರನ್​ಗಳಿಗೆ ಆಲೌಟ್ ಆಯಿತು. ಮತ್ತೊಂದೆಡೆ, ಯುಎಇ ಪರ ಜುನೈದ್ ಸಿದ್ದಿಕಿ ಮಾರಕ ಬೌಲಿಂಗ್ ಮಾಡಿ 4 ಓವರ್​ಗಳಲ್ಲಿ ಕೇವಲ 23 ರನ್ ನೀಡಿ 4 ವಿಕೆಟ್ ಪಡೆದರು.

IND vs PAK: ಹ್ಯಾಂಡ್‌ ಶೇಕ್ ವಿವಾದಕ್ಕೆ ಮ್ಯಾಚ್ ರೆಫರಿ ಕಾರಣ; ಐಸಿಸಿಗೆ ಪಾಕ್ ಮಂಡಳಿ ದೂರು

ಪಾಕ್- ಯುಎಇ ಫೈಟ್

ಈ ಗೆಲುವಿನೊಂದಿಗೆ ಯುಎಇ ತಂಡ ಎ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿವೆ. ಸೂಪರ್ 4 ಸುತ್ತಿಗೆ ಭಾರತದ ಸ್ಥಾನ ಖಚಿತವಾಗಿದೆ. ಉಳಿದಂತೆ ಎರಡನೇ ಸ್ಥಾನಕ್ಕೆ ಪಾಕಿಸ್ತಾನ ಹಾಗೂ ಯುಎಇ ತಂಡಗಳ ನಡುವೆ ಪೈಪೋಟಿ ಇದೆ. ಇದೀಗ ಸೆಪ್ಟೆಂಬರ್ 17 ರಂದು ಪಾಕಿಸ್ತಾನ ಹಾಗೂ ಯುಎಇ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸೂಪರ್ 4 ಸುತ್ತಿನಲ್ಲಿ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಯುಎಇ ತಂಡ ಪಾಕಿಸ್ತಾನವನ್ನು ಮಣಿಸಿದರೆ ಅದು ಸೂಪರ್ 4 ಸುತ್ತಿಗೆ ಅರ್ಹತೆ ಪಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ