IND vs PAK: ಹ್ಯಾಂಡ್ ಶೇಕ್ ವಿವಾದಕ್ಕೆ ಮ್ಯಾಚ್ ರೆಫರಿ ಕಾರಣ; ಐಸಿಸಿಗೆ ಪಾಕ್ ಮಂಡಳಿ ದೂರು
India-Pakistan Asia Cup Handshake Controversy: ಏಷ್ಯಾಕಪ್ ಪಂದ್ಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಿಸಿಬಿ ಈ ವಿಷಯದ ಬಗ್ಗೆ ಐಸಿಸಿಗೆ ದೂರು ನೀಡಿದೆ. ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ದೂರು ದಾಖಲಾಗಿದೆ. ಐಸಿಸಿ ಈ ದೂರಿನ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಏಷ್ಯಾಕಪ್ (Asia Cup) ಪಂದ್ಯದಲ್ಲಿ ಭಾರತದ ಆಟಗಾರರು ಪಾಕಿಸ್ತಾನದ (India vs Pakistan) ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವುದು ಡೊದ್ದ ವಿವಾದಕ್ಕೆ ಕಾರಣವಾಗಿದೆ. ಪಾಕ್ ಆಟಗಾರರೊಂದಿಗೆ ಶೇಕ್ ಹ್ಯಾಂಡ್ ಮಾಡದಿರುವುದಕ್ಕೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಈ ಇಡೀ ವಿಷಯದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಸಮಾಧಾನಗೊಂಡಿದ್ದು ಈ ಪಂದ್ಯದ ರೆಫರಿಯ ಬಗ್ಗೆ ನೇರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ದೂರು ನೀಡಿದೆ. ಈ ದೂರಿನಲ್ಲಿ, ಪಂದ್ಯದ ರೆಫರಿಯನ್ನು ಕೂಡಲೇ ಈ ಪಂದ್ಯಾವಳಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ.
ಐಸಿಸಿಗೆ ದೂರು ನೀಡಿದ ಪಿಸಿಬಿ
ವಾಸ್ತವವಾಗಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವಿನ 4 ದಿನಗಳ ಯುದ್ಧದ ನಂತರ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಪಂದ್ಯಕ್ಕೂ ಮುನ್ನವೇ ಈ ಪಂದ್ಯ ಭಾರತದಲ್ಲಿ ವಿವಾದ ಸೃಷ್ಟಿಸಿತ್ತು. ವಿವಾದ ನಡುವೆಯೂ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಆದರೆ ಪಂದ್ಯ ಮುಗಿದ ನಂತರ, ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ. ಇದಕ್ಕೆ ತಿರುಗೇಟೆಂಬಂತೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಘಾ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲಿಲ್ಲ.
ಇದೀಗ ಪಂದ್ಯದ ಮರುದಿನ, ಸೆಪ್ಟೆಂಬರ್ 15 ರಂದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ಐಸಿಸಿಗೆ ದೂರು ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ‘ಮ್ಯಾಚ್ ರೆಫರಿ ಪೈಕ್ರಾಫ್ಟ್ ಐಸಿಸಿಯ ನೀತಿ ಸಂಹಿತೆಯ ಅಡಿಯಲ್ಲಿ ಆಟದ ಮನೋಭಾವವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರನ್ನು ಏಷ್ಯಾಕಪ್ ಜವಾಬ್ದಾರಿಗಳಿಂದ ತೆಗೆದುಹಾಕಬೇಕು ಎಂದು ಮಂಡಳಿ ಐಸಿಸಿಗೆ ದೂರು ನೀಡಿದೆ ಎಂದು ಬರೆದುಕೊಂಡಿದ್ದಾರೆ.
IND vs PAK: ವಿವಾದ ನಡುವೆ ಭಾರತ- ಪಾಕ್ ಮತ್ತೆ ಮುಖಾಮುಖಿ; ಈ ದಿನದಂದು ಪಂದ್ಯ
ರೆಫರಿ ವಿರುದ್ಧ ಪಿಸಿಬಿಯ ದೂರೇನು?
ಕ್ರಿಕ್‌ಬಜ್‌ನ ವರದಿ ವರದಿಯ ಪ್ರಕಾರ, ಪಂದ್ಯದ ನಂತರ ಪಾಕಿಸ್ತಾನ ಮಂಡಳಿಯು ಮೊದಲು ಭಾರತ ತಂಡದ ವಿರುದ್ಧ ಮ್ಯಾಚ್ ರೆಫರಿಗೆ ದೂರು ನೀಡಿತು. ಆದಾಗ್ಯೂ ಪೈಕ್ರಾಫ್ಟ್ ತಮ್ಮ ದೂರಿನ ಮೇರೆಗೆ ಭಾರತೀಯ ತಂಡದ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಪಿಸಿಬಿ ಆರೋಪಿಸಿದೆ. ಆದರೆ ಪಿಸಿಬಿಯ ಆಕ್ಷೇಪಣೆಗೆ ಪ್ರಮುಖ ಕಾರಣ ಬೇರೆಯೇ ಆಗಿದೆ. ವಾಸ್ತವವಾಗಿ, ಟಾಸ್ ಸಮಯದಲ್ಲಿ ಕೈಕುಲುಕದಂತೆ ಮ್ಯಾಚ್ ರೆಫರಿ ಇಬ್ಬರೂ ನಾಯಕರಿಗೆ ಹೇಳಿದ್ದರು ಎಂದು ಪಿಸಿಬಿ ಆರೋಪಿಸಿದೆ. ಅಂತಹ ಆದೇಶ ನೀಡುವ ಹಕ್ಕು ರೆಫರಿಗೆ ಇಲ್ಲ ಎಂದು ಪಿಸಿಬಿ ದೂರಿದೆ.
ಅಷ್ಟೇ ಅಲ್ಲ, ಐಸಿಸಿ ಕ್ರಮ ಕೈಗೊಳ್ಳದಿದ್ದರೆ, ಪೈಕ್ರಾಫ್ಟ್ ರೆಫರಿಯಾಗಿರುವ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನ ತಂಡ ಬಹಿಷ್ಕರಿಸಲಿದೆ ಎಂದು ವರದಿಯಾಗಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಮುಂದಿನ ಪಂದ್ಯದಲ್ಲಿ ಆಂಡಿ ಪೈಕ್ರಾಫ್ಟ್ ರೆಫರಿಯಾಗಿದ್ದು, ಇದರಲ್ಲಿ ಪಾಕಿಸ್ತಾನ ಯುಎಇ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಪಾಕ್ ಮಂಡಳಿಯ ದೂರಿನ ಮೇರೆಗೆ ಐಸಿಸಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Mon, 15 September 25
