ನೋ ಬಾಲ್ ಮೇಲೆ ನೋ ಬಾಲ್: ಒಂದೇ ಪಂದ್ಯದಲ್ಲಿ 22 ನೋ ಬಾಲ್!
ಕಾಶ್ಮೀರದ ಜಿಟಿಜಿಟಿ ಚಳಿ ಮತ್ತು ಸುಂದರ ಪರಿಸರದ ನಡುವೆ ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಇರಾನಿ ಕಪ್ ಪಂದ್ಯವು ಇದೀಗ ವಿಭಿನ್ನ ಕಾರಣಕ್ಕಾಗಿ ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ಹಿರಿಯ ವೇಗದ ಬೌಲರ್ ಉಮರ್ ನಝೀರ್ ಬರೋಬ್ಬರಿ 22 ನೋ-ಬಾಲ್‌ಗಳನ್ನು ಎಸೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಒಂದು ಪಂದ್ಯದಲ್ಲಿ ಒಬ್ಬ ಬೌಲರ್ ಗರಿಷ್ಠ ಎಷ್ಟು ನೋ-ಬಾಲ್ ಎಸೆಯಬಹುದು? ಒಂದು… ಎರಡು… ಮೂರು…? ಆದರೆ ಜಮ್ಮು-ಕಾಶ್ಮೀರದ ವೇಗದ ಬೌಲರ್ ಉಮರ್ ನಝೀರ್ ಪಂದ್ಯವೊಂದರಲ್ಲೇ ಬರೋಬ್ಬರಿ 22 ನೋ-ಬಾಲ್ ಎಸೆಯುವ ಮೂಲಕ ಸುದ್ದಿಯಾಗಿದ್ದಾರೆ. ಇದರೊಂದಿಗೆ ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್ ಅಂಗಳದಲ್ಲಿ, ಒಂದೇ ಮ್ಯಾಚ್‌ನಲ್ಲಿ ಅತ್ಯಧಿಕ ನೋ-ಬಾಲ್ ಎಸೆದ ಅನಗತ್ಯ ದಾಖಲೆ ಕೂಡ ಉಮರ್ ನಝೀರ್ ಪಾಲಾಗಿದೆ.
ಹೌದು, ಜಮ್ಮು-ಕಾಶ್ಮೀರಿನ ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ಉಮರ್ ನಝೀರ್ 22 ನೋ ಬಾಲ್‌ಗಳನ್ನು ಎಸೆಯುವ ಮೂಲಕ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಈ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ಪ್ರಮುಖ ವೇಗಿಯಾಗಿ ಕಣಕ್ಕಿಳಿದ 32 ಉಮರ್ ಮೊದಲ ಇನಿಂಗ್ಸ್ನಲ್ಲೇ ಓವರ್ ಸ್ಟೆಪ್ ಮೂಲಕ ಗಮನ ಸೆಳೆದಿದ್ದರು. ಅದು ಸಹ 15 ಬಾರಿ!
- ಮೊದಲ ಇನಿಂಗ್ಸ್ನಲ್ಲಿ 25 ಓವರ್ ಎಸೆದ ಉಮರ್ ನಝೀರ್ ಬರೋಬ್ಬರಿ 15 ನೋ ಬಾಲ್‌ಗಳನ್ನು ಎಸೆದಿದ್ದರು.
- ಎರಡನೇ ಇನಿಂಗ್ಸ್ನಲ್ಲಿ 18 ಓವರ್ಗಳಲ್ಲಿ 7 ಬಾರಿ ಗೆರೆ ದಾಟುವ ಮೂಲಕ 7 ರನ್ ಬಿಟ್ಟುಕೊಟ್ಟರು.
ಹೀಗೆ ಒಂದೇ ಮ್ಯಾಚ್‌ನಲ್ಲಿ ಬರೋಬ್ಬರಿ 22 ನೋ ಬಾಲ್ ಎಸೆಯುವ ಮೂಲಕ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಹೆಚ್ಚುವರಿ 22 ರನ್ಗಳನ್ನು ನೀಡಿದರು. ಅದರಲ್ಲೂ ಉಮರ್ ನಝೀರ್ ಎಸೆದ ಅತ್ಯುತ್ತಮ ಎಸೆತವೊಂದು ನೇರವಾಗಿ ಸ್ಮರನ್ ರವಿಚಂದ್ರನ್ ಪ್ಯಾಡ್‌ಗೆ ಬಡಿಯಿತು. ಅಂಪೈರ್ ತಕ್ಷಣವೇ ಇದನ್ನು ‘ಎಲ್‌ಬಿಡಬ್ಲ್ಯೂ’ ಎಂದು ಔಟ್ ಘೋಷಿಸಿದರು.
ಆದರೆ, ಮೈದಾನದಲ್ಲಿ ನೋ-ಬಾಲ್ ಸೈರನ್ ಮೊಳಗಿದಾಗ ಜಮ್ಮು-ಕಾಶ್ಮೀರ ತಂಡದ ಸಂಭ್ರಮವೆಲ್ಲ ನಿರಾಸೆಯಾಗಿ ಬದಲಾಯಿತು. ಮರುಪರಿಶೀಲನೆಯಲ್ಲಿ ಉಮರ್ ನಝೀರ್ ಅವರ ಕಾಲು ಕ್ರೀಸ್ ದಾಟಿರುವುದು ಸ್ಪಷ್ಟವಾಗಿತ್ತು. ಈ ಜೀವದಾನದ ಪೂರ್ಣ ಲಾಭ ಪಡೆದ ಸ್ಮರನ್, ದಿನದಾಟದ ಮುಕ್ತಾಯಕ್ಕೆ 126* ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಒಂದು ಮಹತ್ವದ ತಪ್ಪಿನಿಂದಾಗಿ ರೆಸ್ಟ್ ಆಫ್ ಇಂಡಿಯಾ ತಂಡ ತನ್ನ ಮುನ್ನಡೆಯನ್ನು 265 ರನ್‌ಗಳಿಗೆ ವಿಸ್ತರಿಸಿ ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು.
5 ವಿಕೆಟ್ ಕಬಳಿಸಿದ ಉಮರ್:
ಕುತೂಹಲಕಾರಿ ಸಂಗತಿಯೆಂದರೆ, ಇಷ್ಟೊಂದು ನೋ-ಬಾಲ್‌ಗಳನ್ನು ಎಸೆದರೂ ಉಮರ್ ನಝೀರ್ ಈ ಪಂದ್ಯದಲ್ಲಿ ಸರ್ಫರಾಝ್ ಖಾನ್, ಸರಾಂಶ್ ಜೈನ್ ವಿಕೆಟ್ಗಳೊಂದಿಗೆ ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ರೆಸ್ಟ್ ಆಫ್ ಇಂಡಿಯಾ ತಂಡ ಬೇಗನೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೆಸ್ಟ್ ಆಫ್ ಇಂಡಿಯಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ 237 ರನ್ ಗಳಿಸಿದರೆ, ಜಮ್ಮು-ಕಾಶ್ಮೀರ 278 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ರೆಸ್ಟ್ ಆಫ್ ಇಂಡಿಯಾ 319 ರನ್ ಗಳಿಸಿ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿ 41 ರನ್ಗಳ ಮುನ್ನಡೆ ಪಡೆದಿದ್ದ ಜಮ್ಮು-ಕಾಶ್ಮೀರ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 279 ರನ್ಗಳಿಸಿ ಇರಾನಿ ಕಪ್ ಎತ್ತಿ ಹಿಡಿಯಬಹುದು. ಈ ಮೂಲಕ ಕಾಶ್ಮೀರಿ ಪಡೆ ಚೊಚ್ಚಲ ಬಾರಿ ಇರಾನಿ ಕಪ್ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.




