Umesh Yadav: ಆಡಿದ ಮೂರೇ ಪಂದ್ಯದಲ್ಲಿ ಉಮೇಶ್ ಯಾದವ್​ಗೆ ಸಿಕ್ಕ ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ

| Updated By: Vinay Bhat

Updated on: Apr 02, 2022 | 12:15 PM

IPL 2022, Umesh Yadav: ಕಳೆದ ಸೀಸನ್​ನಲ್ಲಿ ದುಬಾರಿ ಬೌಲರ್ ಎನಿಸಿಕೊಳ್ಳುತ್ತಿದ್ದ ಉಮೇಶ್ ಯಾದವ್ ಈ ಬಾರಿ ಕೆಕೆಆರ್ ತಂಡದಲ್ಲಿ ಬೆಂಕಿಯ ಚೆಂಡು ಉಗುಳುತ್ತಿದ್ದು, ಪರ್ಪಲ್ ಕ್ಯಾಪ್ ಕೂಡ ತೊಟ್ಟಿದ್ದಾರೆ. ಆಡಿದ ಮೂರೇ ಪಂದ್ಯದಲ್ಲಿ ಉಮೇಶ್ ಯಾದವ್​ಗೆ ಲಕ್ಷ ಲಕ್ಷ ಹಣ ಸಿಕ್ಕಿದೆ.

Umesh Yadav: ಆಡಿದ ಮೂರೇ ಪಂದ್ಯದಲ್ಲಿ ಉಮೇಶ್ ಯಾದವ್​ಗೆ ಸಿಕ್ಕ ಹಣವೆಷ್ಟು ಗೊತ್ತೇ?: ಶಾಕ್ ಆಗ್ತೀರಾ
Umesh Yadav KKR IPL 2022
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಚಾಲಕೆ ಸಿಕ್ಕಿ ಒಂದು ವಾರವಾಗಿದ್ದು ರೋಚಕತೆ ಪಡೆಯುತ್ತಿದೆ. ನೂತನ ನಾಯಕರು, ಎರಡು ಹೊಸ ತಂಡಗಳೊಂದಿಗೆ ಐಪಿಎಲ್ 2022 (IPL 2022) ಪ್ರಾರಂಭವಾಗಿ ಕುತೂಹಲ ಮೂಡಿಸುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಅತ್ಯಂತ ಬಲಿಷ್ಠ ಎಂದುಕೊಂಡಿದ್ದ ತಂಡ ಮೊದಲ ಪಂದ್ಯದಲ್ಲೇ ಕೈಸುಟ್ಟುಕೊಂಡಿದೆ. ಇದರ ನಡುವೆ ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ತೋರಿದ ಆಟಗಾರರನ್ನು ಕೈಬಿಡಲಾಗಿದ್ದು, ಅವರು ಈ ಬಾರಿ ಬೇರೆ ಫ್ರಾಂಚೈಸಿ ಸೇರಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಈ ಪೈಕಿ ಉಮೇಶ್ ಯಾದವ್ (Umesh Yadav) ಕೂಡ ಒಬ್ಬರು. ಕಳೆದ ಕೆಲ ಸೀಸನ್​ಗಳಲ್ಲಿ ಆರ್​ಸಿಬಿ ಪರ ಆಡಿದ್ದ ಉಮೇಶ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದ ಕಾರಣ ಐಪಿಎಲ್ 2022 ಹರಾಜಿಗೂ ಮುನ್ನ ಕೈಬಿಟ್ಟಿತ್ತು. ಇವರನ್ನು ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders)​ ತಂಡ 2 ಕೋಟಿ  ಕೊಟ್ಟು ಖರೀದಿ ಮಾಡಿತ್ತು. ಇಲ್ಲಿಂದ ಅವರ ಅದೃಷ್ಟವೇ ಬದಲಾದಂತಿದೆ.

ಹೌದು, ಕಳೆದ ಅನೇಕ ಸೀಸನ್​ನಲ್ಲಿ ದುಬಾರಿ ಬೌಲರ್ ಎನಿಸಿಕೊಳ್ಳುತ್ತಿದ್ದ ಉಮೇಶ್ ಯಾದವ್ ಈ ಬಾರಿ ಬೆಂಕಿಯ ಚೆಂಡು ಉಗುಳುತ್ತಿದ್ದಾರೆ. ತನ್ನ ಸ್ವಿಂಗ್ ದಾಳಿಯ ಮೂಲಕ ಐಪಿಎಲ್ 2022 ರಲ್ಲಿ ವಿಕೆಟ್​ಗಳ ಬೇಟೆ ಆಡುತ್ತಿದ್ದು ಪರ್ಪಲ್ ಕ್ಯಾಪ್ ಕೂಡ ತೊಟ್ಟಿದ್ದಾರೆ. ಇವರು ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ 8 ವಿಕೆಟ್ ಕಬಳಿಸಿ ಈ ಬಾರಿ ಅತಿ ಹೆಚ್ಚು ವಿಕೆಟ್ ಕಿತ್ತ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಹರಾಜಾಗದೆ ಉಳಿಯುವ ಭೀತಿಯಲ್ಲಿದ್ದ ಉಮೇಶ್ ಯಾದವ್ ಯಾರೂ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದ್ದಾರೆ.

ಉಮೇಶ್ ಯಾದವ್ ಆಡಿದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ಓವರ್ ಬೌಲಿಂಗ್ ಮಾಡಿ ಕೇವಲ 20 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಇಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕಾಗಿ ಮೊದಲ ಪಂದ್ಯದಲ್ಲೇ ಒಂದು ಲಕ್ಷದ ಜೊತೆ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದರು. ಅಷ್ಟೇ ಅಲ್ಲದೆ ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ, ಮೋಸ್ಟ್ ವ್ಯಾಲ್ಯುವೇಬಲ್ ಅಸೆಟ್ ಆಫ್ ದಿ ಮ್ಯಾಚ್​ಗೆ 1 ಲಕ್ಷ, ಸ್ವಿಗ್ಗಿ ಇನ್​ಸ್ಟಾಂಟ್ ಫಾಂಟೆಸ್ಟ್ ಡೆಲಿವರಿ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ, ಹೀಗೆ ಮೊದಲ ಪಂದ್ಯದಲ್ಲೇ ಬರೋಬ್ಬರಿ 4 ಲಕ್ಷ ಬಾಜಿಕೊಂಡಿದ್ದರು. ಇನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಎರಡನೇ ಪಂದ್ಯದಲ್ಲಿ ಕೆಕೆಆರ್ ಸೋತಿತಾದರೂ ಉಮೇಶ್ ಪ್ರದರ್ಶನ ಇಲ್ಲೂ ಅಮೋಘವಾಗಿತ್ತು. 4 ಓವರ್​​ಗಳಲ್ಲಿ ಕೇವಲ 16 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇಲ್ಲಿ ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ, ಪಂಚ್ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ ತಮ್ಮದಾಗಿಸಿಕೊಂಡದ್ದರು.

ಇನ್ನು ಶುಕ್ರವಾರ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲೂ ಉಮೇಶ್ ಮಿಂಚಿನ ದಾಳಿ ಸಂಘಟಿಸಿದರು. 4 ಓವರ್ ಬೌಲಿಂಗ್ ಮಾಡಿ 1 ಮೇಡನ್ ಸಹಿತಿ 23 ರನ್ ನೀಡಿ 4 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಬಾಜಿಕೊಂಡಿದ್ದರು. ಇಲ್ಲುಕೂಡ ಮ್ಯಾನ್​ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ, ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ ಹಾಗೂ ಸ್ವಿಗ್ಗಿ ಇನ್​ಸ್ಟಾಂಟ್ ಫಾಂಟೆಸ್ಟ್ ಡೆಲಿವರಿ ಆಫ್ ದಿ ಮ್ಯಾಚ್​ಗೆ ಒಂದು ಲಕ್ಷ ತಮ್ಮದಾಗಿಸಿದರು. ಹೀಗೆ ಉಮೇಶ್ ಯಾದವ್ ಆಡಿದ ಮೂರೇ ಪಂದ್ಯಗಳಿಂದ ಬರೋಬ್ಬರಿ 9 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ.

Shreyas Iyer: ಪಂದ್ಯ ಮುಗಿದ ಬಳಿಕ ಆಂಡ್ರೆ ರಸೆಲ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ಗೊತ್ತೇ?

TATA IPL 2022: ಕೆಕೆಆರ್ ಗೆಲುವಿನ ಬಳಿಕ ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್​​ನಲ್ಲಿ ದೊಡ್ಡ ಬದಲಾವಣೆ

Published On - 12:14 pm, Sat, 2 April 22