IPL 2022: ಟಿ20 ವಿಶ್ವಕಪ್​ನಲ್ಲಿ ಯುವ ವೇಗಿಗೆ ಚಾನ್ಸ್ ನೀಡಲೇಬೇಕು ಎಂದ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: May 07, 2022 | 5:39 PM

UMRAN MALIK: ಐಪಿಎಲ್​ನಲ್ಲಿ ಅತ್ಯಂತ ವೇಗದ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾ ವೇಗಿ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್ 157.7 ಕಿ.ಮೀ ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.

IPL 2022: ಟಿ20 ವಿಶ್ವಕಪ್​ನಲ್ಲಿ ಯುವ ವೇಗಿಗೆ ಚಾನ್ಸ್ ನೀಡಲೇಬೇಕು ಎಂದ ಮಾಜಿ ಕ್ರಿಕೆಟಿಗ
UMRAN MALIK
Follow us on

ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಉಮ್ರಾನ್ ಬೌಲಿಂಗ್ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ. ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ 22ರ ಹರೆಯದ ಮಲಿಕ್ ಸತತವಾಗಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಇದುವರೆಗೆ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿಯೇ ಯುವ ವೇಗಿಗೆ ಟಿ20 ವಿಶ್ವಕಪ್​ನಲ್ಲಿ ಚಾನ್ಸ್ ನೀಡಬೇಕೆಂದು ಭಜ್ಜಿ ತಿಳಿಸಿದ್ದಾರೆ.

“ಉಮ್ರಾನ್ ಮಲಿಕ್ ನನ್ನ ನೆಚ್ಚಿನ ಬೌಲರ್, ನಾನು ಅವರನ್ನು ಭಾರತ ತಂಡದಲ್ಲಿ ನೋಡಲು ಬಯಸುತ್ತೇನೆ. ಏಕೆಂದರೆ ಅವರು ಶ್ರೇಷ್ಠ ವೇಗವನ್ನು ಹೊಂದಿದ್ದಾರೆ. ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ಟೀಮ್ ಇಂಡಿಯಾಗೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ನಲ್ಲಿ ಯುವ ಆಟಗಾರನ ಬೌಲಿಂಗ್ ಸಾಮರ್ಥ್ಯ ನಂಬಲಸಾಧ್ಯ. ಹೀಗಾಗಿ ಇಂತಹ ಆಟಗಾರನನ್ನು ಮತ್ತಷ್ಟು ಪ್ರೇರೇಪಿಸಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಉಮ್ರಾನ್ ಮಲಿಕ್ ಟೀಮ್ ಇಂಡಿಯಾಗೆ ಆಯ್ಕೆಯಾಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನಾನು ಆಯ್ಕೆ ಸಮಿತಿಯ ಭಾಗವಾಗಿದ್ದರೆ, ನಾನು ಅವರನ್ನು ಸೇರಿಸಿಕೊಳ್ಳುತ್ತಿದ್ದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಉಮ್ರಾನ್ ಮಲಿಕ್ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಬೌಲಿಂಗ್ ಮಾಡಬೇಕು ಎಂದು ಹರ್ಭಜನ್ ಸಿಂಗ್ ಹೇಳಿದರು.

ಹರ್ಭಜನ್ ಸಿಂಗ್ ಹೊರತಾಗಿ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಉಮ್ರಾನ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಉಮ್ರಾನ್ ಭಾರತ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡುವುದು ಉತ್ತಮ. ಇದರಿಂದ ವಿದೇಶಿ ಪಿಚ್​ನಲ್ಲಿ ಅವರ ಸಾಮರ್ಥ್ಯವನ್ನು ಪರೀಕ್ಷಿಸಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಚೆಂಡನ್ನು ಎಸೆದಿದ್ದಾರೆ. ಆ ಪಂದ್ಯದಲ್ಲಿ ಉಮ್ರಾನ್ 157 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ ಚೆಂಡೆಸೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಐಪಿಎಲ್​ನಲ್ಲಿ ಅತ್ಯಂತ ವೇಗದ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾ ವೇಗಿ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್ 157.7 ಕಿ.ಮೀ ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ. ಸದ್ಯ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವ ಉಮ್ರಾನ್ ಮಲಿಕ್ ಶಾನ್ ಟೈಟ್ ಅವರ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.