ಯುಎಇಯಲ್ಲಿ ನಡೆಯುತ್ತಿರುವ ಪುರುಷರ ಅಂಡರ್-19 ಏಷ್ಯಾ ಕಪ್ ಟೂರ್ನಿ ಅಂತಿಮ ಹಂತ ತಲುಪಿದೆ. ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಪಾಕ್ ತಂಡ ಏಕಪಕ್ಷೀಯವಾಗಿ ಸೋಲನುಭವಿಸಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಅದೇ ವೇಳೆ ಬಾಂಗ್ಲಾದೇಶ ತಂಡ ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದೆ. ಇದೀಗ ಡಿಸೆಂಬರ್ 8 ರಂದು ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಈ ಪಂದ್ಯದಲ್ಲಿ, ಬಾಂಗ್ಲಾದೇಶ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಬಾಂಗ್ಲಾದೇಶದ ಬೌಲರ್‌ಗಳು ಕೇವಲ 37 ಓವರ್‌ಗಳಲ್ಲಿ ಪಾಕಿಸ್ತಾನದ ಇನ್ನಿಂಗ್ಸ್ ಅಂತ್ಯ ಹಾಡಿದರು. ಬಾಂಗ್ಲಾ ಬೌಲರ್ಗಳ ಮುಂದೆ ಇಡೀ ಪಾಕಿಸ್ತಾನ ತಂಡ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ ಫರ್ಹಾನ್ ಯೂಸುಫ್ ಗರಿಷ್ಠ 32 ರನ್ ಗಳಿಸಿದರೆ, ಮುಹಮ್ಮದ್ ರಿಯಾಜುಲ್ಲಾ 28 ರನ್ ಕೊಡುಗೆ ನೀಡಿದರು. ಇವರಿಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಯಾವುದೇ ಆಟಗಾರರು ಹೆಚ್ಚು ಕಾಲ ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ತಂಡದ ಆರಂಭಿಕರಿಬ್ಬರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಒಟ್ಟು 4 ಬ್ಯಾಟ್ಸ್‌ಮನ್‌ಗಳು 0 ರನ್‌ಗೆ ಔಟಾದರು.
ಮತ್ತೊಂದೆಡೆ, ಬಾಂಗ್ಲಾದೇಶದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಇಕ್ಬಾಲ್ ಹುಸೇನ್ ಎಮೋನ್ 7 ಓವರ್‌ಗಳಲ್ಲಿ ಕೇವಲ 24 ರನ್ ಗಳಿಸಿ 4 ವಿಕೆಟ್ ಪಡೆದರು. ಉಳಿದಂತೆ ಮರೂಫ್ ಮೃಧ 2 ವಿಕೆಟ್ ಪಡೆದರೆ, ಅಲ್ ಫಹಾದ್ ಮತ್ತು ದೇಬಾಶಿಶ್ ದೇಬಾ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಪಾಕಿಸ್ತಾನ ನೀಡಿದ 117 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಮಹತ್ವದ ಪಂದ್ಯದಲ್ಲಿ ನಾಯಕತ್ವದ ಇನ್ನಿಂಗ್ಸ್ ಆಡಿದ ಅಜೀಜುಲ್ ಹಕೀಮ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬಾಂಗ್ಲಾದೇಶದ ಈ ಗೆಲುವಿನೊಂದಿಗೆ ಭಾರತ ಹಾಗೂ ಪಾಕ್ ನಡುವಿನ ಫೈನಲ್ ಪಂದ್ಯದ ಕನಸು ಕೂಡ ಭಗ್ನಗೊಂಡಿದೆ. ವಾಸ್ತವವಾಗಿ ಈ ಪಂದ್ಯವನ್ನು ಪಾಕಿಸ್ತಾನ ಗೆದ್ದಿದ್ದರೆ ಫೈನಲ್‌ನಲ್ಲಿ ಭಾರತವನ್ನು ಎದುರಿಸುತ್ತಿತ್ತು. ಆದರೆ ಈಗ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಪ್ರಶಸ್ತಿ ಹಣಾಹಣಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ