
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿರುವುದು ಗೊತ್ತೇ ಇದೆ. ಈಗಾಗಲೇ ಬಹುತೇಕ ಅಫ್ಘಾನ್ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿಗಳು ಇನ್ನೇನು ತಮ್ಮದೇ ಸರ್ಕಾರವನ್ನು ಘೋಷಿಸುವ ತವಕದಲ್ಲಿದೆ.

ಇತ್ತ ತಾಲಿಬಾನ್ ಉಗ್ರರ ಉಪಟಳ ತಾಳಲಾರದೆ ಅಫ್ಘಾನ್ ಜನರು ದೇಶ ತೊರೆಯುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪುಟ್ಟ ಮಕ್ಕಳನ್ನು ಯುಎಸ್ಎ ಸೈನಿಕರಿಗೆ ಒಪ್ಪಿಸಿ ಜೀವದ ಹಂಗಿನೊಂದಿಗೆ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ಹೀಗೆ ಕುಟುಂಬವೊಂದು ಯುಎಸ್ಆರ್ಮಿಗೆ ನೀಡಿದ ಪುಟ್ಟ ಮಗುವೊಂದರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಕಾರಣ ಮಗುವನ್ನು ಎತ್ತಿಕೊಂಡಿರುವ ಯುಎಸ್ಎ ಸೈನಿಕ.

ಹೌದು, ಮಗುವಿನೊಂದಿಗೆ ಕಾಣಿಸಿಕೊಂಡಿರುವ ಯುಎಸ್ ಸೈನಿಕ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ (Steve Smith) ಅವರನ್ನು ಹೋಲುತ್ತಿದ್ದಾರೆ. ಈ ಫೋಟೋ ಇದೀಗ ಸ್ಟೀವ್ ಸ್ಮಿತ್ ಅಫ್ಘಾನಿಸ್ತಾನದಲ್ಲಿ ಮಕ್ಕಳ ರಕ್ಷಣೆ ಮಾಡುತ್ತಿದ್ದಾರೆ ಎಂಬ ಅಡಿಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಈ ಫೋಟೋದಲ್ಲಿರುವುದು ಯುಎಸ್ಎ ಸೈನಿಕ. ಸ್ಟೀವ್ ಸ್ಮಿತ್ ಅವರನ್ನೇ ಹೋಲುತ್ತಿರುವುದರಿಂದ ಸೋಷಿಯಲ್ ಮೀಡಿಯಾದಲ್ಲಿ ಆಸೀಸ್ ಕ್ರಿಕೆಟಿಗ ಅಫ್ಘಾನಿಸ್ತಾನದ ನೆರವಿಗೆ ಧಾವಿಸಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ.

ಇತ್ತ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದಲ್ಲಿದ್ದು, ಐಪಿಎಲ್ನ ದ್ವಿತಿಯಾರ್ಧಕ್ಕಾಗಿ ಭರ್ಜರಿ ತಯಾರಿಯಲ್ಲಿದ್ದಾರೆ. ಹೀಗಾಗಿ ಯುಎಇನಲ್ಲಿ ನಡೆಯಲಿರುವ ಐಪಿಎಲ್ನ ಉಳಿದ 31 ಪಂದ್ಯಗಳ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಮಿತ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.