
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಭಾರತ ಎ ತಂಡದ ಪಾದಾರ್ಪಣೆ ಮಾಡಿದ್ದಾರೆ. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಕೇವಲ 12 ಎಸೆತಗಳಲ್ಲಿ ಇನಿಂಗ್ಸ್ ಅಂತ್ಯಗೊಳಿಸಿದರು. ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾದ ವೈಭವ್ 3 ಫೋರ್ಗಳನ್ನು ಬಾರಿಸಿದ್ದರು.
ಆದರೆ, ಲಂಕಾ ವೇಗಿ ಮೊಹಮ್ಮದ್ ಶಿರಾಜ್ ಎಸೆದ ನಾಲ್ಕನೇ ಓವರ್‌ನ ಫುಲ್-ಲೆಂತ್ ಎಸೆತವನ್ನು ಲಾಂಗ್-ಆಫ್ ಬೌಂಡರಿ ದಾಟಿಸಲು ಯತ್ನಿಸಿದರು. ದುರದೃಷ್ಟವಶಾತ್, ಚೆಂಡು ಸರಿಯಾಗಿ ಕನೆಕ್ಟ್ ಆಗದೆ ಮಿಡ್-ಆಫ್‌ನಲ್ಲಿದ್ದ ಶ್ರೀಲಂಕಾ ನಾಯಕ ಸಹನ್ ಅರಾಚಿಂಗೆ ಹಿಡಿದ ಅದ್ಭುತ ಡೈವಿಂಗ್ ಕ್ಯಾಚ್‌ಗೆ ಬಲಿಯಾದರು. ಇದರೊಂದಿಗೆ ವೈಭವ್ ಸೂರ್ಯವಂಶಿಯ ಮೊದಲ ಇನಿಂಗ್ಸ್ 14 ರನ್ಗಳೊಂದಿಗೆ ಕೊನೆಗೊಂಡಿತು.
ವೈಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದರು. 16 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಯುವ ದಾಂಡಿಗ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು.
ಈ ಭರ್ಜರಿ ಪ್ರದರ್ಶನದ ಫಲವಾಗಿ ವೈಭವ್ ಸೂರ್ಯವಂಶಿಯನ್ನು ಭಾರತ ಟಿ20 ತಂಡ ಹಾಗೂ ಭಾರತ ಎ ಏಕದಿನ ತಂಡಗಳಿಗೆ ಆಯ್ಕೆ ಮಾಡಲಾಗಿತ್ತು. ಅದರಂತೆ ಇದೀಗ ಶ್ರೀಲಂಕಾ ಎ, ಅಫ್ಘಾನಿಸ್ತಾನ್ ಎ ಹಾಗೂ ಭಾರತ ಎ ನಡುವಣ ತ್ರಿಕೋನ ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಕಣಕ್ಕಿಳಿದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಎ ತಂಡ ನಿರೀಕ್ಷಿತ ಆರಂಭ ಪಡೆದಿಲ್ಲ. ಆರಂಭಿಕ ದಾಂಡಿಗ ವೈಭವ್ ಸೂರ್ಯವಂಶಿ 12 ರನ್ಗಳಿಸಿ ಔಟಾದರೆ, ಪ್ರಭ್ಸಿಮ್ರಾನ್ ಸಿಂಗ್ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯಾ 32 ರನ್ಗಳ ಕೊಡುಗೆ ನೀಡಿದರು. ಆ ಬಳಿಕ ಬಂದ ರುತುರಾಜ್ ಗಾಯಕ್ವಾಡ್ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ.
ಮತ್ತೊಂದೆಡೆ ರುತುರಾಜ್ ಜೊತೆ ತಿಲಕ್ ವರ್ಮಾ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟುತ್ತಿದ್ದಾರೆ. ಅದರಂತೆ 34 ಓವರ್ಗಳ ಮುಕ್ತಾಯದ ವೇಳೆಗೆ ಭಾರತ ಎ ತಂಡ 3 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿದೆ.
ಭಾರತ ‘ಎ’ ಪ್ಲೇಯಿಂಗ್ XI: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಆಯುಷ್ ಬದೋನಿ, ಅನ್ಕುಲ್ ರಾಯ್, ಸೂರ್ಯಂಶ್ ಶೆಡ್ಗೆ, ಅನ್ಶುಲ್ ಕಂಬೋಜ್, ಅರ್ಷಾದ್ ಖಾನ್, ವಿಪ್ರಾಜ್ ನಿಗಮ್.
ಇದನ್ನೂ ಓದಿ: ಅನ್ಫಿಟ್… ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?
ಶ್ರೀಲಂಕಾ ‘ಎ’ ಪ್ಲೇಯಿಂಗ್ XI: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಸದೀರ ಸಮರವಿಕ್ರಮ, ಸಹನ್ ಅರಾಚಿಂಗೆ (ನಾಯಕ), ಚಾಮಿಕ ಕರುಣಾರತ್ನೆ, ರವಿಂದು ಫೆರ್ನಾಂಡೋ, ವನುಜಾ ಸಹನ್, ವಿಜಯಕಾಂತ್ ವಿಯಾಸ್ಕಾಂತ್, ಮೊಹಮ್ಮದ್ ಶಿರಾಜ್, ಗರುಕ ಸಂಕೇತ್.